ಸಾರಾಂಶ
ಚಾಮರಾಜನಗರದಲ್ಲಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷ ಹೊನ್ನೂರು ಬಸವಣ್ಣ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು,
ಕನ್ನಡಪ್ರಭ ವಾರ್ತೆ ಚಾಮರಾಜನಗರ
ಶೀಘ್ರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್ ಅವರು ರೈತರ ಸಭೆ ಕರೆಯದಿದ್ದರೆ ಜ.26ರಂದು ಗಣರಾಜ್ಯೋತ್ಸವ ಕಾರ್ಯಕ್ರಮಕ್ಕೆ ಆಗಮಿಸುವ ವೇಳೆ ಸಚಿವರಿಗೆ ಘೇರಾವ್ ಹಾಕಲಾಗುವುದು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷ ಹೊನ್ನೂರು ಬಸವಣ್ಣ ಅವರು ಎಚ್ಚರಿಕೆ ನೀಡಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ಉಸ್ತುವಾರಿ ವಹಿಸಿಕೊಂಡು ಎರಡುವರೆ ವರ್ಷವಾಗಿದ್ದು, ರೈತರ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಸಚಿವರು ವಿಫಲರಾಗಿದ್ದು, ರೈತರೊಂದಿಗೆ ಸಭೆ ನಡೆಸಲು ಹಲವು ಬಾರಿ ಮನವಿ ನೀಡಿದ್ದರೂ ರೈತರೊಂದಿಗೆ ಸಭೆ ನಡೆಸಿಲ್ಲ, ಶೀಘ್ರದಲ್ಲೇ ರೈತರೊಂದಿಗೆ ಸಭೆ ನಡೆಸಬೇಕು ಎಂದು ಒತ್ತಾಯಿಸಿದರು.
ಜಿಲ್ಲಾ ಉಸ್ತುವಾರಿ ಸಚಿವರಾಗಿ ನಾಮಕಾವಸ್ತೆಗೆ ಮಾತ್ರ ಜಿಲ್ಲೆಗೆ ಆಗಮಿಸಿ ಹೋಗುತ್ತಿದ್ದಾರೆ. ಅಭಿವೃದ್ಧಿ ಕೆಲಸಗಳು ಜಿಲ್ಲೆಯಲ್ಲಿ ನಡೆಯುತ್ತಿಲ್ಲ, ಜಿಲ್ಲಾ ಉಸ್ತುವಾರಿ ಸಚಿವರ ಸ್ಥಾನದಿಂದ ಇವರನ್ನು ತೆಗೆದುಹಾಕಿ ಜಿಲ್ಲೆಯ ಜನಪ್ರತಿನಿಧಿಯೊಬ್ಬರಿಗೆ ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನ ನೀಡಿದರೆ ಸ್ಥಳೀಯ ಸಮಸ್ಯೆಗಳ ಅರಿವಿನಿಂದ ಅಭಿವೃದ್ಧಿ ಕೆಲಸಗಳು ಸಮಸ್ಯೆಗಳು ಬಗೆಹರಿಯುತ್ತವೆ ಎಂದರು.ಚಾಮರಾಜನಗರ, ಗುಂಡ್ಲುಪೇಟೆ ತಾಲೂಕಿನಲ್ಲಿರುವ ಸರ್ಕಾರಿ ಗೋಮಾಳದಲ್ಲಿ ಕ್ರಷರ್‌ಗಳು ಅಕ್ರಮವಾಗಿ ನಡೆಯುತ್ತಿದ್ದು, ಸಚಿವರು ಅಕ್ರಮ ಕ್ರಷರ್‌ಗಳಿಗೆ ಬೆಂಬಲವಾಗಿ ನಿಂತಿದ್ದಾರೆ. ನ್ಯಾಯಾಲಯ ರದ್ದುಪಡಿಸಲು ಆದೇಶ ನೀಡಿದರೂ ಕ್ರಷರ್‌ಗಳು ನಿಂತಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರು ಅಕ್ರಮ ಕ್ರಷರ್‌ಗೆ ಏಜೆಂಟಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಕೆಲ್ಲಂಬಳ್ಳಿ-ಬದನಗುಪ್ಪೆ ಕೈಗಾರಿಕಾ ಪ್ರದೇಶಕ್ಕೆ 2ನೇ ಹಂತದಲ್ಲಿ ಭೂಮಿ ವಶಪಡಿಸಿಕೊಂಡು ರೈತರಿಗೆ ಬಿಡುಗಡೆ ಮಾಡಬೇಕಾದ 380 ಕೋಟಿಯನ್ನು ಬಿಡುಗಡೆ ಮಾಡಲು ಮನವಿ ನೀಡಿದ್ದೇವೆ. ಆದರೆ ಹಂತ ಹಂತವಾಗಿ ಹಣ ಬಿಡುಗಡೆ ಮಾಡುತ್ತಿದೆ. ಒಂದೇ ಬಾರಿಗೆ ಹಣ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು. ಚಾಮುಲ್‌ಗೆ ಸರ್ಕಾರ ₹53 ಕೋಟಿ ಬಿಡುಗಡೆ ಮಾಡದೇ ಇರುವುದರಿಂದ ಚಾಮುಲ್‌ಗೆ 2 ಕೋಟಿ ನಷ್ಟವಾಗಿದೆ. ನಾಲ್ಕೈದು ಬಾರಿ ಚಾಮುಲ್ ಅಧ್ಯಕ್ಷರು ಸರ್ಕಾರಕ್ಕೆ ಪತ್ರ ಬರೆದಿದ್ದರೂ ಹಣ ಬಿಡುಗಡೆ ಮಾಡಿಲ್ಲ. ಇದರಿಂದ ರೈತರು ಬಲಿ ಪಶುವಾಗುತ್ತಿದ್ದು, ಖಾಸಗಿ ಡೈರಿ ಕಡೆ ರೈತರು ಮುಖಮಾಡುವಂತಾಗಿದೆ. ಸರ್ಕಾರಕ್ಕೆ ಒತ್ತಡ ಹಾಕಿ ಹಣ ಬಿಡುಗಡೆಗೊಳಿಸಲು ಸಚಿವರು ವಿಫಲರಾಗಿದ್ದಾರೆ ಎಂದು ದೂರಿದರು.ಜ.26ರಂದು ಜಿಲ್ಲಾ ಉಸ್ತುವಾರಿ ಸಚಿವರು ಗಣರಾಜ್ಯೋತ್ಸವ ಕಾರ್ಯಕ್ರಮಕ್ಕೆ ಆಗಮಿಸುತ್ತಿದ್ದು, ಜ.26ರ ಮುಂಚಿತವಾಗಿ ಶೀಘ್ರದಲ್ಲೇ ರೈತರ ಸಭೆ ಕರೆಯದಿದ್ದರೆ ಸಚಿವರಿಗೆ ಘೇರಾವ್ ಹಾಕಲಾಗುವುದು ಎಂದು ಎಚ್ಚರಿಕೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ರೈತ ಸಂಘದ ಉಪಾಧ್ಯಕ್ಷರಾದ ಪುಟ್ಟೇಗೌಡ, ಪಾಳ್ಯ ಶಿವಮೂರ್ತಿ, ಪ್ರಧಾನ ಕಾರ್ಯದರ್ಶಿ ಮೈಲಾಜಿಪುರ ಕುಮಾರ, ಗುಂಡ್ಲುಪೇಟೆ ತಾಲೂಕು ಅಧ್ಯಕ್ಷ ನಾಗಪ್ಪ, ಜಿಲ್ಲಾ ಸಂಚಾಲಕ ಜಗದೀಶ್, ಹೋಬಳಿ ಅಧ್ಯಕ್ಷ ಸುಂದರ್ ಇದ್ದರು.