ಹಕ್ಕುಪತ್ರ ವಿತರಿಸುವಂತೆ ನಿವಾಸಿಗಳಿಂದ ಗ್ರಾಪಂ ಅಧ್ಯಕ್ಷರು, ಪಿಡಿಒಗೆ ಘೇರಾವ್

| Published : Sep 20 2024, 01:33 AM IST

ಹಕ್ಕುಪತ್ರ ವಿತರಿಸುವಂತೆ ನಿವಾಸಿಗಳಿಂದ ಗ್ರಾಪಂ ಅಧ್ಯಕ್ಷರು, ಪಿಡಿಒಗೆ ಘೇರಾವ್
Share this Article
  • FB
  • TW
  • Linkdin
  • Email

ಸಾರಾಂಶ

ದಶಕಗಳ ಕಾಲದಿಂದಲೂ ಇದೇ ಸ್ಥಳದಲ್ಲಿ ವಾಸ ಮಾಡುತ್ತಿದ್ದರೂ ನಿವಾಸಿಗಳಿಗೆ ಹಕ್ಕುಪತ್ರ ಮತ್ತು ಮನೆಗಳಿಗೆ ಸಂಬಂಧಿಸಿದ ದಾಖಲೆಗಳನ್ನು ನೀಡಲು ಗ್ರಾಪಂ ಅಧಿಕಾರಿಗಳಿಗೆ ಸಾಧ್ಯವಾಗಿಲ್ಲ. ಕೂಲಿಯಿಂದ ಗಳಿಸಿದ ಹಣ ಜೀವನ ನಿರ್ವಹಣೆಗೆ ಸಾಕಾಗುತ್ತಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಅಧಿಕಾರಿಗಳು ನಿವೇಶನಗಳಿಗೆ ಸಂಬಂಧಿಸಿದಂತೆ ದಾಖಲೆ ಪತ್ರ ನೀಡಿದರೆ ಸಾಲವನ್ನಾದರೂ ಮಾಡಿ ಒಂದೊಳ್ಳೆ ಸೂರು ಕಟ್ಟಿಕೊಂಡು ನೆಮ್ಮದಿಯಿಂದ ಬದುಕುತ್ತೇವೆ.

ಕನ್ನಡಪ್ರಭ ವಾರ್ತೆ ಪಾಂಡವಪುರ

ಹಲವು ವರ್ಷಗಳಿಂದ ಗುಡಿಸಲು ಕಟ್ಟಿಕೊಂಡು ವಾಸವಿರುವ ನಿವೇಶನಗಳಿಗೆ ಹಕ್ಕುಪತ್ರ ವಿತರಿಸುವಂತೆ ಆಗ್ರಹಿಸಿ ತಾಲೂಕಿನ ರಾಗಿಮುದ್ದನಹಳ್ಳಿ ಹೊಸ ಬಡಾವಣೆ ನಿವಾಸಿಗಳು ಗುಮ್ಮನಹಳ್ಳಿ ಗ್ರಾಪಂ ಅಧ್ಯಕ್ಷರು, ಪಿಡಿಒ ಅವರನ್ನು ಘೇರಾವ್ ಮಾಡಿ ಪ್ರತಿಭಟಿಸಿದರು.

ತಾಲೂಕಿನ ರಾಗಿಮುದ್ದನಹಳ್ಳಿ ಹೊಸಬಡಾವಣೆಯ ಸರ್ಕಾರಿ ಪ್ರಾಥಮಿಕ ಶಾಲೆ ಸ್ವಚ್ಛತಾ ಕಾರ್ಯಕ್ರಮಕ್ಕಾಗಿ ಆಗಮಿಸಿದ್ದ ಗುಮ್ಮನಹಳ್ಳಿ ಗ್ರಾಪಂ ಅಧ್ಯಕ್ಷ ಎಂ.ಎಸ್.ರಘು ಮತ್ತು ಪಿಡಿಒ ರಮೇಶ್ ಅವರನ್ನು ಸಾಮಾಜಿಕ ಹೋರಾಟಗಾರ ರಾ.ಸ.ಹನುಮಂತೇಗೌಡ ನೇತೃತ್ವದಲ್ಲಿ ನಿವಾಸಿಗಳು ತಡೆದು ಘೇರಾವ್ ಹಾಕಿದರು.

ರಾಗಿಮುದ್ದನಹಳ್ಳಿ ಹೊಸ ಬಡಾವಣೆಯ ಸರ್ಕಾರಿ ಗೋ ಮಾಳದಲ್ಲಿ ಎಲ್ಲಾ ಜನಾಂಗ ಮತ್ತು ಕೋಮಿನ ಜನರು ಗುಡಿಸಲು ಮತ್ತು ತಗ್ಗಡಿನ ಶೆಡ್ಡುಗಳನ್ನು ನಿರ್ಮಿಸಿಕೊಂಡು ಹಲವು ವರ್ಷಗಳಿಂದ ವಾಸ ಮಾಡುತ್ತಿದ್ದಾರೆ. ಕೂಲಿ ಮತ್ತಿತ್ತರ ಸಣ್ಣ-ಪುಟ್ಟ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದಾರೆ ಎಂದರು.

ದಶಕಗಳ ಕಾಲದಿಂದಲೂ ಇದೇ ಸ್ಥಳದಲ್ಲಿ ವಾಸ ಮಾಡುತ್ತಿದ್ದರೂ ನಿವಾಸಿಗಳಿಗೆ ಹಕ್ಕುಪತ್ರ ಮತ್ತು ಮನೆಗಳಿಗೆ ಸಂಬಂಧಿಸಿದ ದಾಖಲೆಗಳನ್ನು ನೀಡಲು ಗ್ರಾಪಂ ಅಧಿಕಾರಿಗಳಿಗೆ ಸಾಧ್ಯವಾಗಿಲ್ಲ. ಕೂಲಿಯಿಂದ ಗಳಿಸಿದ ಹಣ ಜೀವನ ನಿರ್ವಹಣೆಗೆ ಸಾಕಾಗುತ್ತಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಅಧಿಕಾರಿಗಳು ನಿವೇಶನಗಳಿಗೆ ಸಂಬಂಧಿಸಿದಂತೆ ದಾಖಲೆ ಪತ್ರ ನೀಡಿದರೆ ಸಾಲವನ್ನಾದರೂ ಮಾಡಿ ಒಂದೊಳ್ಳೆ ಸೂರು ಕಟ್ಟಿಕೊಂಡು ನೆಮ್ಮದಿಯಿಂದ ಬದುಕುತ್ತೇವೆ. ಆದರೆ, ಈ ಬಗ್ಗೆ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಅಸಮಾಧಾನ ಹೊರಹಾಕಿದರು.

ಸಾಮಾಜಿಕ ಹೋರಾಟಗಾರ ರಾ.ಸ.ಹನುಮಂತೇಗೌಡ ಮಾತನಾಡಿ, ಗ್ರಾಮದಲ್ಲಿ ಹಲವು ವರ್ಷಗಳಿಂದ ಬಡವರು ಕಷ್ಟದಲ್ಲಿ ಜೀವನ ನಡೆಸುತ್ತಿದ್ದಾರೆ. ಗೋಮಾಳದಲ್ಲಿ ಗುಡಿಸಲು ನಿರ್ಮಿಸಿ ಜೀವನ ನಡೆಸುತ್ತಿರುವ ನಿವಾಸಿಗಳಿಗೆ ಅನುಕೂಲವಾಗುವಂತೆ ಅಧಿಕಾರಿಗಳು ಕ್ರಮ ಕೈಗೊಂಡು ಶೀಘ್ರದಲ್ಲಿ ಮನೆ ಮತ್ತು ನಿವೇಶನಗಳಿಗೆ ಹಕ್ಕು ಪತ್ರ ವಿತರಿಸಬೇಕು ಎಂದು ಒತ್ತಾಯಿಸಿದರು.

ಈ ವೇಳೆ ವೇಳೆ ಗ್ರಾಮಸ್ಥರಾದ ವೆಂಕಟೇಶ್, ಕಿಶೋರ್, ಸೈಫ್‌ವುಲ್ಲಾ, ಸುಹೇಲ್, ಶ್ರೀಧರ್, ಅನಿತಾ, ಗೀತಾ, ಸರೋಜಮ್ಮ, ಜಯಲಕ್ಷ್ಮಮ್ಮ ಇತರರಿದ್ದರು.