ತಾಲೂಕಿನ ಮಾಯಸಂದ್ರದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಕೆ.ಎಂ.ಗಿಡ್ಡಯ್ಯ ಮತ್ತು ಉಪಾಧ್ಯಕ್ಷರಾಗಿ ಪದ್ಮ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಕನ್ನಡಪ್ರಭ ವಾರ್ತೆ ತುರುವೇಕೆರೆ
ತಾಲೂಕಿನ ಮಾಯಸಂದ್ರದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಕೆ.ಎಂ.ಗಿಡ್ಡಯ್ಯ ಮತ್ತು ಉಪಾಧ್ಯಕ್ಷರಾಗಿ ಪದ್ಮ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.ಹಾಲಿ ಅಧ್ಯಕ್ಷರಾಗಿರುವ ಗಿಡ್ಡಯ್ಯ 1988 ರಲ್ಲಿ ಸಂಘದಲ್ಲಿ ಮಾರಾಟ ಗುಮಾಸ್ತರಾಗಿ ಸೇವೆ ಆರಂಭಿಸಿದ್ದರು. 2012 ರಿಂದ 2021 ರವರೆಗೆ ಸಹಕಾರ ಸಂಘದ ಕಾರ್ಯ ನಿರ್ವಹಣಾಧಿಕಾರಿಗಳಾಗಿ ಕರ್ತವ್ಯ ನಿರ್ವಹಿಸಿದ್ದರು. ಕೆಲ ವರ್ಷಗಳ ನಂತರ ಅವರು ಇದೇ ಸಹಕಾರ ಸಂಘಕ್ಕೆ ಅಧ್ಯಕ್ಷರಾಗಿದ್ದಾರೆ. ಕಳೆದ ತಿಂಗಳ ನ.30 ರಂದು ನಡೆದ ಸಹಕಾರ ಸಂಘದ ಚುನಾವಣೆಯಲ್ಲಿ 23 ಸ್ಪರ್ಧಿಗಳು ಸ್ಪರ್ಧಿಸಿದ್ದರು. ಈ ಚುನಾವಣೆಯಲ್ಲಿ ನಂದೀಶ್ ಮತ್ತು ಗಂಗಯ್ಯನವರ ನೇತೃತ್ವದ ತಂಡ ಅಷ್ಟೂ ಸ್ಥಾನವನ್ನು ತನ್ನದಾಗಿಸಿಕೊಂಡಿತ್ತು. ಸಂಘದ ಆಡಳಿತ ಮಂಡಲಿಯ ಚುನಾವಣೆ ಅಧ್ಯಕ್ಷ ಸ್ಥಾನಕ್ಕೆ ಕೆ.ಎಂ.ಗಿಡ್ಡಯ್ಯ, ಉಪಾಧ್ಯಕ್ಷೆ ಸ್ಥಾನಕ್ಕೆ ಪದ್ಮ ಮಾತ್ರ ನಾಮಪತ್ರ ಸಲ್ಲಿಸಿದ್ದರು. ಚುನಾವಣಾಧಿಕಾರಿಗಳಾಗಿ ಕರ್ತವ್ಯ ನಿರ್ವಹಿಸಿದ ಸಹಕಾರ ಸಂಘಗಳ ಅಭಿವೃದ್ಧಿ ಅಧಿಕಾರಿ ಶ್ರೀನಿವಾಸ್ ಈರ್ವರೂ ಅವಿರೋಧವಾಗಿ ಆಯ್ಕೆಯಾಗಿದ್ದಾರೆಂದು ಘೋಷಿಸಿದರು.
ಪತ್ರಕರ್ತರೊಂದಿಗೆ ಮಾತನಾಡಿದ ಅಧ್ಯಕ್ಷ ಗಿಡ್ಡಯ್ಯ ಮೊದಲು ತಮ್ಮನ್ನು ವಿಶ್ವಾಸವಿಟ್ಟು ಗೆಲ್ಲಿಸಿದ ಎಲ್ಲಾ ಸಹಕಾರಿ ಬಂಧುಗಳು, ಅಧ್ಯಕ್ಷರಾಗಿ ಆಯ್ಕೆಯಾಗಲು ಸಹಕರಿಸಿದ ಎಲ್ಲಾ ನಿರ್ದೇಶಕರಿಗೆ ಕೃತಜ್ಞತೆ ಸಲ್ಲಿಸಿದರು. ನೂತನ ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ಆಯ್ಕೆಯಾಗುತ್ತಿದ್ದಂತೆ ಅವರ ಅಭಿಮಾನಿಗಳು, ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು, ಈ ವೇಳೆ ನೂತನ ಅಧ್ಯಕ್ಷ ಮತ್ತು ಉಪಾಧ್ಯಕ್ಷರನ್ನು ಸ್ಥಳಿಯ ಮುಖಂಡರುಗಳು, ಜನಪ್ರತಿನಿಧಿಗಳು, ಗ್ರಾಮಸ್ಥರು ಅಭಿನಂದಿಸಿದರು. ಈ ಸಂದರ್ಭದಲ್ಲಿ ಸಂಘದ ಆಡಳಿತ ಮಂಡಳಿಯ ನೂತನ ನಿರ್ದೇಶಕರುಗಳಾದ, ನಂದಿನಿ ಮಂಜುನಾಥ್. ಗಿರಿ ಮೆಡಿಕಲ್ ನ ಸುನಿಲ್. ಡಿ.ಎಸ್. ಅಶೋಕ ಕುಮಾರ್, ಕೆ.ಆರ್. ಬಾಲರಾಜು, ಕೆ.ರಘು, ಎಚ್.ಟಿ. ಯೋಗೇಶ್. ಎಂ.ಆರ್. ರಂಗನಾಥ. ಎಂ.ಎಲ್ ಲೋಕೇಶ್. ಎಂ.ಎಸ್.ಶಿವರಾಜು. ಜೆ.ಆರ್. ವೆಂಕಟೇಶ್. ಮುಖಂಡರಾದ ಗಂಗಯ್ಯ, ನಂದೀಶ್, ಶ್ರೀನಿವಾಸ್ ಸ್ಥಳೀಯ ಮುಖಂಡರು ಮತ್ತು ಸಂಘದ ಸಿಇಒ ಮಮತಾ. ಸಿಬ್ಬಂದಿಗಳು ಮತ್ತು ಆರಕ್ಷಕ ಇಲಾಖೆ ಸಿಬ್ಬಂದಿಗಳು ಸೇರಿದಂತೆ ನೂರಾರು ಗ್ರಾಮಸ್ಥರು ಉಪಸ್ಥಿತರಿದ್ದರು.