ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರು
ಮಹಿಳೆಯರು, ಮಕ್ಕಳು, ವೃದ್ಧರು ಸೇರಿದಂತೆ ಯಾರಿಗೇ ಆಗಲಿ ಯಾವುದೇ ಅರೋಗ್ಯ ಕಂಡುಬದರೂ ಅದಕ್ಕೆ ಸಕಾಲದಲ್ಲಿ ಚಿಕಿತ್ಸೆ ತೆಗೆದುಕೊಳ್ಳುವುದು ಅತ್ಯಗತ್ಯ ಎಂದು ನಗರ ಪೊಲೀಸ್ ಆಯುಕ್ತ ರಮೇಶ್ ಬಾನೋತ್ ತಿಳಿಸಿದರು.ನಗರದ ಜಿಪಂ ಸಭಾಂಗಣದಲ್ಲಿ ಜಿಪಂ ಮತ್ತು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಗುರುವಾರ ಆಯೋಜಿಸಿದ್ದ ಜಿಪಂ, ತಾಪಂ ಹಾಗೂ ಗ್ರಾಪಂ ಕರ್ತವ್ಯ ನಿರ್ವಹಿಸುತ್ತಿರುವ ಮಹಿಳಾ ಅಧಿಕಾರಿಗಳು ಮತ್ತು ಸಿಬ್ಬಂದಿ ಆರೋಗ್ಯ ತಪಾಸಣಾ ಶಿಬಿರವನ್ನು ಅವರು ಉದ್ಘಾಟಿಸಿ ಮಾತನಾಡಿದರು.
ಮಹಿಳೆಯರಿಗೆ ತಾಯ್ತನದ ನಂತರ 35 ವರ್ಷ ದಾಟಿದ ಮೇಲೆ ದೇಹದಲ್ಲಾಗುವ ಬದಲಾವಣೆಯಿಂದ ಹಲವಾರು ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಸ್ತನ ಕ್ಯಾನ್ಸರ್ ಹೆಚ್ಚಾಗಿ ಕಂಡು ಬರುತ್ತಿದೆ. ಇದಕ್ಕೆ ಮುಖ್ಯ ಕಾರಣ ಮಹಿಳೆಯಲ್ಲಿರುವ ಆರೋಗ್ಯದ ಮೇಲಿನ ತಾತ್ಸಾರ. ಒಂದು ಮನೆಯಲ್ಲಿ ಮಹಿಳೆಯೊಬ್ಬಳು ಆರೋಗ್ಯವಾಗಿದ್ದರೆ ಸಂಪೂರ್ಣ ಕುಟುಂಬವೇ ಅರೋಗ್ಯವಾಗಿರುತ್ತದೆ. ಹೀಗಾಗಿ, ಮಹಿಳೆಯರು ಎಷ್ಟೇ ಕೆಲಸದ ಒತ್ತಡಗಳಿದ್ದರೂ ಮೊದಲು ತಮ್ಮ ಆರೋಗ್ಯದ ಕಡೆ ಗಮನಕೊಡಬೇಕು ಎಂದರು.ಅರೋಗ್ಯ ಸಮಸ್ಯೆ ಯಾರನ್ನು ಹೇಳಿ ಕೇಳಿ ಬರುವುದಿಲ್ಲ. ಮನುಷ್ಯನಿಗೆ ಸಹಜವಾಗಿ ಆರೋಗ್ಯದಲ್ಲಿ ಏರುಪೇರುಗಳು ಉಂಟಾಗುತ್ತವೆ. ಅವುಗಳನ್ನು ಎಚ್ಚರಿಕೆಯಿಂದ ಭಯ ಪಡದಂತೆ ಎದುರಿಸಬೇಕು. ದೇಹದಲ್ಲಿ ಸಣ್ಣ ವ್ಯತ್ಯಾಸ ಕಂಡು ಬಂದರು ತಕ್ಷಣ ಚಿಕಿತ್ಸೆ ಪಡೆಯಬೇಕು ಎಂದು ಅವರು ಸಲಹೆ ನೀಡಿದರು.
ಜಿಪಂ ಸಿಇಒ ಕೆ.ಎಂ. ಗಾಯತ್ರಿ ಮಾತನಾಡಿ, 40 ವರ್ಷದ ನಂತರ ಮಹಿಳೆಯರಲ್ಲಿ ಕ್ಯಾಲ್ಸಿಯಂ ಕಡಿಮೆಯಾಗುತ್ತದೆ. ಅಂತಹ ಸಂದರ್ಭದಲ್ಲಿ ಸರಿಯಾದ ಚಿಕಿತ್ಸೆ ಅಗತ್ಯ. ಇತ್ತೀಚಿನ ದಿನಗಳಲ್ಲಿ ಆರೋಗ್ಯ ಸಮಸ್ಯೆಗಳು ವಯಸ್ಸಿನ ಮಿತಿಯಿಲ್ಲದೆ ಕಂಡು ಬರುತ್ತಿದೆ. ಆದ್ದರಿಂದ ಎಲ್ಲರೂ ಬಹಳ ಜಾಗೃತರಾಗಿ ಆರೋಗ್ಯದ ಕಡೆ ಗಮನ ಹರಿಸಬೇಕು ಎಂದು ತಿಳಿಸಿದರು.ಎಸ್ಪಿ ಸೀಮಾ ಲಾಟ್ಕರ್ ಮಾತನಾಡಿ, ಹಬ್ಬದ ಹರಿ ದಿನಗಳಲ್ಲಿ ಅನವಶ್ಯಕ ದುಂದು ವೆಚ್ಚ ಮಾಡುವ ಬದಲು ಆ ಹಣದಲ್ಲಿ ಪೋಷಕರಿಗೆ ಹೆಲ್ತ್ ಕಾರ್ಡ್ ಮಾಡಿಸಿಕೊಡುವುದು ಸೂಕ್ತ. ಪ್ರತಿಯೊಬ್ಬ ಮಹಿಳೆಯೂ ತಮ್ಮ ಕಂಫರ್ಟ್ ವಲಯದಿಂದ ಹೊರ ಬಂದು ಮಹಿಳೆ ಎಂಬುದನ್ನು ತಲೆಯಿಂದ ತೆಗೆದು ಹಾಕಿ ಯಾವುದೇ ಕೆಲಸವನ್ನು ಮಾಡಬಲ್ಲೆ ಎಂಬ ಮನೋಭಾವವನ್ನು ಬೆಳೆಸಿಕೊಳ್ಳಬೇಕು ಎಂದು ಹೇಳಿದರು.
ನಂತರ ಜಿಪಂ, ತಾಪಂ, ಗ್ರಾಪಂ ಮಹಿಳಾ ಅಧಿಕಾರಿಗಳು ಮತ್ತು ಸಿಬ್ಬಂದಿ ಆರೋಗ್ಯ ತಪಾಸಣೆ ಮಾಡಿಸಿಕೊಂಡರು.ಜಿಪಂ ಉಪ ಕಾರ್ಯದರ್ಶಿಗಳಾದ ಡಾ.ಎಂ. ಕೃಷ್ಣಂರಾಜು, ಬಿ.ಎಂ. ಸವಿತಾ, ಜಿಲ್ಲಾ ಆರ್.ಸಿ.ಎಚ್ ಅಧಿಕಾರಿ ಡಾ.ಎಂ.ಎಸ್. ಜಯಂತ್, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ಮಹಾದೇವ ಪ್ರಸಾದ್, ಜಿಲ್ಲಾ ಅರೋಗ್ಯ ಇಲಾಖೆಯ ಅಧಿಕಾರಿಗಳು ಇದ್ದರು.
----ಕೋಟ್...
ವಯಸ್ಸಿಗೆ ತಕ್ಕಂತೆ ದೇಹದಲ್ಲಿನ ಏರುಪೇರನ್ನು ಗಮನಿಸಿ ಅರೋಗ್ಯ ಕಾಳಜಿ ವಹಿಸಬೇಕು. ಎಲ್ಲರೂ ಹೊರಗಿಂದ ಆರೋಗ್ಯವಂತರಾಗಿಯೇ ಕಂಡರೂ ದೇಹದ ಒಳಗಡೆ ಇರುವ ಸಣ್ಣ ಸಮಸ್ಯೆ ಕಂಡುಕೊಂಡು ಚಿಕಿತ್ಸೆ ಪಡೆಯುವಲ್ಲಿ ಎಡವುತ್ತಿದ್ದೇವೆ. ಇದೇ ಮುಂದಿನ ದಿನಗಳಲ್ಲಿ ದೊಡ್ಡ ಸಮಸ್ಯೆಯಾಗಿ ಪರಿಣಮಿಸುತ್ತದೆ. ಹೀಗಾಗಿ, ಎಲ್ಲರೂ ಯಾವುದೇ ಸಣ್ಣ ಸಮಸ್ಯೆ ಕಂಡು ಬಂದರು ತಕ್ಷಣದ ಚಿಕಿತ್ಸೆ ಪಡೆದುಕೊಳ್ಳುವುದು ಅಗತ್ಯ.- ಕೆ.ಎಂ. ಗಾಯತ್ರಿ, ಜಿಪಂ ಸಿಇಒ
----ಮಹಿಳೆಯರು ಕೆಲಸಗಳಲ್ಲಿ ಮಗ್ನರಾಗಿ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವಲ್ಲಿ ಎಡವುತ್ತಿದ್ದಾರೆ. ನಮ್ಮ ಆರೋಗ್ಯ ಉತ್ತಮವಾಗಿದ್ದರೆ ಯಾವುದೇ ಕೆಲಸವನ್ನು ಮಾಡಲು ಸಾಧ್ಯ. ಹೀಗಾಗಿ, ಮೊದಲ ಆದ್ಯತೆ ಆರೋಗ್ಯಕ್ಕೆ ನೀಡಬೇಕು.
- ಸೀಮಾ ಲಾಟ್ಕರ್, ಮೈಸೂರು ಎಸ್ಪಿ