36 ಗಂಟೆಗಳ ಸತತ ಮಳೆಗೆ ನಲುಗಿದ ಗಿರಿ ಜಿಲ್ಲೆ

| Published : Sep 02 2024, 02:08 AM IST

ಸಾರಾಂಶ

ಯಾದಗಿರಿ ನಗರ ಸೇರಿದಂತೆ ಜಿಲ್ಲೆಯಾದ್ಯಂತ ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆ ಭಾನುವಾರವೂ ಮುಂದುವರೆದಿದೆ. ಬಿಟ್ಟೂ ಬಿಡದ ಮಳೆಯಿಂದಾಗಿ ಹಳ್ಳ-ಕೊಳ್ಳ ತುಂಬಿ ಹರಿಯುತ್ತಿವೆ

ಕನ್ನಡಪ್ರಭ ವಾರ್ತೆ ಯಾದಗಿರಿ/ಗುರುಮಠಕಲ್‌/ಶಹಾಪುರ

ಯಾದಗಿರಿ ನಗರ ಸೇರಿದಂತೆ ಜಿಲ್ಲೆಯಾದ್ಯಂತ ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆ ಭಾನುವಾರವೂ ಮುಂದುವರೆದಿದೆ.

ಬಿಟ್ಟೂ ಬಿಡದ ಮಳೆಯಿಂದಾಗಿ ಹಳ್ಳ-ಕೊಳ್ಳ ತುಂಬಿ ಹರಿಯುತ್ತಿವೆ. ಈ ಜೊತೆಗೆ, ನದಿಪಾತ್ರದಲ್ಲೂ ಭಾರಿ ಪ್ರಮಾಣದ ನೀರು ಹರಿದುಬರುತ್ತಿರುವುದರಿಂದ ಭೀಮಾ ನದಿ ಉಕ್ಕಿ ಹರಿಯುತ್ತಿದೆ. ಸತತ 36 ಗಂಟೆಗಳಿಗೂ ಹೆಚ್ಚು ಕಾಲ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ತೆಗ್ಗು ಪ್ರದೇಶಗಳಲ್ಲಿನ ಮನೆಗಳಿಗೆ ನೀರು ನುಗ್ಗಿದ ಪರಿಣಾಮ ಜನಜೀವನ ಅಸ್ತವ್ಯಸ್ತಗೊಂಡಿದೆ.

ದೋರನಹಳ್ಳಿ ಗ್ರಾಮದ ತೆಗ್ಗು ಪ್ರದೇಶಗಳಲ್ಲಿನ ಮನೆಗಳಿಗೆ ನೀರು ನುಗ್ಗಿದ ಪರಿಣಾಮ ಜನರು ಪರದಾಡುವಂತಾಗಿದೆ. ಸುರಕ್ಷಿತ ಸ್ಥಳಕ್ಕೆ ತೆರಳಲು ವೃದ್ಧರು, ಬಾಣಂತಿಯರು ಹರಸಾಹಸ ಪಡಬೇಕಾಯಿತು.

ಯಾದಗಿರಿ ನಗರದ ಅನೇಕ ರಸ್ತೆಗಳ ಮೇಲೆ ನೀರು ಸಂಚಾರಕ್ಕೆ ವ್ಯತ್ಯಯ ಉಂಟಾಗಿತ್ತು. ಅದರಲ್ಲೂ, ಹದಗೆಟ್ಟ ರಸ್ತೆಗಳು ವರುಣನ ಅರ್ಭಟಕ್ಕೆ ಮತ್ತಷ್ಟೂ ಹೀನಾಯ ಸ್ಥಿತಿಗೆ ತಲುಪಿದ್ದರಿಂದ ವಾಹನಗಳು ಹಾಗೂ ಪ್ರಯಾಣಿಕರು ಹಿಡಿಶಾಪ ಹಾಕುತ್ತ ಸಾಗುತ್ತಿದ್ದುದು ಕಂಡುಬಂತು.

ಯಾದಗಿರಿ ನಗರದ ಲುಂಬಿನಿ ವನದ ಭಾಗಶ: ಉದ್ಯಾನವನ ಜಲಾವೃತಗೊಂಡಿದೆ. ಸತತ ಮಳೆಯಿಂದಾಗಿ ಕೆರೆ ತುಂಬಿ ತುಳುಕುತ್ತಿದೆ.

ಗುರುಮಠಕಲ್‌ ಪಗಲಾಪುರ ಸಮೀಪದ ತಾತ್ಕಾಲಿಕ ಸೇತುವೆ ಜಲಾವೃತಗೊಂಡಿದೆ. ಈ ಹಿಂದೆ, ಮೊದಲಿನ ಸೇತುವೆ ಹಾಳಾಗಿದ್ದ ಹಿನ್ನೆಲೆ ತಾತ್ಕಾಲಿಕ ಸೇತುವೆ ನಿರ್ಮಾಣ ಮಾಡಲಾಗಿತ್ತು. ಈಗದೂ ಸಹ ಜಲಾವೃತಗೊಂಡಿದೆ. ಇದರಿಂದಾಗಿ ಅಲ್ಲಿನ ಗ್ರಾಮಸ್ಥರಿಗೆ ಜಿಲ್ಲಾ ಕೇಂದ್ರ ಯಾದಗಿರಿ ಸಂಪರ್ಕ ಕಡಿತಗೊಂಡಂತಾಗಿದೆ.

ಗುರುಮಠಕಲ್‌ ಸಮೀಪದ ವಂಕಸಂಬ್ರದ ರಸ್ತೆಯೂ ಜಲಾವೃತಗೊಂಡಿದೆ. ವಂಕಸಂಬ್ರದಿಂದ ತೋರಣತಿಪ್ಪಗೆ ಸಂಪರ್ಕದ ರಸ್ತೆ ಇದಾಗಿದೆ. ಉಕ್ಕಿ ಹರಿಯುವ ನೀರಿನಲ್ಲೇ ಜನರ ಸಂಚಾರ ಆತಂಕ ಮೂಡಿಸಿದೆ. ನಿರಂತರ ಮಳೆಯಿಂದಾಗಿ ಬೋರಬಂಡಾ ಗ್ರಮಾದಲ್ಲಿ ಮನೆಗಳೆರೆಡು ಕುಸಿದು ಬಿದ್ದಿವೆ.

ಶಹಾಪುರ ತಾಲೂಕಿನಾದ್ಯಂತಲೂ ಎಡಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ.

ಕಳೆದೆರಡು ದಿನಗಳಿಂದ ದಿನಗಳಿಂದ ಸತತವಾಗಿ ಸುರಿಯುತ್ತಿರುವ ಮಳೆಯಿಂದ ರಸ್ತೆ ಚರಂಡಿಗಳು, ಹೊಲ ಗದ್ದೆಗಳು ಮಳೆ ನೀರಿನಿಂದ ತುಂಬಿಕೊಂಡಿದೆ. ಸೆ.1ರಂದು ಶಹಾಪುರದಲ್ಲಿ 32.8, ದೋರನಹಳ್ಳಿ 41.0, ಭೀಮರಾಯನ ಗುಡಿ, 33, ಗೋಗಿ 28.6, ಹತ್ತಿಗೂಡೂರು 16 ಮಿ.ಮೀ. ಮಳೆಯಾದ ವರದಿಯಾಗಿದೆ. ತಾಲೂಕಿನಲ್ಲಿ ಜನ ಜಾನುವಾರುಳ ಪ್ರಾಣಹಾನಿಯಾಗಿರುವ ಬಗ್ಗೆ ಮತ್ತು ಮನೆಗಳು ಬಿದ್ದಿರುವ ಬಗ್ಗೆ ವರದಿಯಾಗಿಲ್ಲ.

ರೈತರ ಸಂಕಷ್ಟ:

ಜಮೀನುಗಳಿಗೆ ಗೊಬ್ಬರ ಮತ್ತು ಕ್ರಿಮಿನಾಶಕ ಸಿಂಪಡಿಸಿ ಬಂದಿದ್ದೇವೆ. ಮಳೆ ಸುರಿದಿದ್ದರಿಂದ ಗೊಬ್ಬರ ಮತ್ತು ಸಿಂಪಡಿಸಿದ ಕ್ರಿಮಿನಾಶಕ ಹಾಳಾಗಿದೆ. ಸಾವಿರಾರು ರುಪಾಯಿಗಳು ವ್ಯರ್ಥವಾಗಿದೆ ಎಂದು ರೈತರು ಅಳಲು ವ್ಯಕ್ತಪಡಿಸಿದ್ದಾರೆ. ಹೊಲದಾಗಿನ ಬೆಳೆಗಳು ಹೆಚ್ಚಿನ ತೇವಾಂಶದಿಂದ ಬೆಳೆ ಹಾಳಾಗುವ ಭಯ ಶುರುವಾಗಿದೆ. ಮತ್ತೆ ಬೀಜ- ಗೊಬ್ಬರ ತರಲು ಹಣ ಇಲ್ಲದೆ ಪರದಾಡುವಂತೆ ಆಗಿದೆ ಎಂದು ಎಂದು ಮದರಕಲ್ ಗ್ರಾಮದ ರೈತ ಮಹಿಳೆ ರಾಯಮ್ಮ ಮಾತನೂರು ನೋವು ತೋಡಿಕೊಂಡರು. ಮಳೆ ಸುರಿಯುತ್ತಿರುವದರಿಂದ ಕೂಲಿ ಕಾರ್ಮಿಕರರು ಕೃಷಿ ಚಟುವಟಿಕೆಗಳಿಗೆ ವಿರಾಮ ಹೇಳಿದ್ದಾರೆ. ದಟ್ಟ ಕಾರ್ಮೋಡ ಕವಿದು, ಬಿಸಿಲು ಕಾಣದೇ ವಾತಾವರಣ ಸಂಪೂರ್ಣ ತಂಪಾಗಿದೆ. ಮೂಲೆ ಸೇರಿದ್ದ ಛತ್ರಿಗಳು, ಸ್ವೆಟರ್ ಮತ್ತು ಜರ್ಕಿನ್ ಜಡಿ ಮಳೆಗೆ ಹೊರಬಂದಿವೆ.

ವಿವಿಧೆಡೆ ಬೆಳೆಗಳು ಜಲಾವೃತ, ಮನೆ ಕುಸಿತ

ಸುರಪುರ: ತಾಲೂಕಿನಲ್ಲಿ ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಉತ್ತರಿ ಮಳೆಯಿಂದ ಜನಜೀವನ ತತ್ತರಗೊಂಡಿದೆ.

ಕೆಲವೆಡೆ ಬೆಳೆಗಳು ಜಲಾವೃತವಾಗಿದ್ದು, ಎರಡು ಮನೆಗಳು ಕುಸಿದಿವೆ. ಶನಿವಾರ ಸಂಜೆಯಿಂದ ಆರಂಭವಾದ ಮಳೆ ಭಾನುವಾರವೂ ಸುರಿಯಿತು. ಶನಿವಾರ ರಾತ್ರಿಯಿಡೀ ಜಿಟಿಜಿಟಿ ಮಳೆ ಬಂದಿದೆ. ಭಾನುವಾರವೂ ಬೆಳಗ್ಗೆಯಿಂದ ಸಂಜೆಯ ತನಕ ವರುಣ ನಿಲ್ಲುವ ಗೋಜಿಗೆ ಹೋಗಲಿಲ್ಲ.

ಗ್ರಾಮಗಳಲ್ಲಿ ಕೂಲಿಕಾರ್ಮಿಕರು ಮಳೆಯಲ್ಲಿಯೇ ಕೆಲಸ ಮಾಡಿದರು. ರೈತರ ಮನದಲ್ಲಿ ಸಂತಸದ ಕಟ್ಟೆಯೊಡದಿದೆ. ನಗರ ಮತ್ತು ಗ್ರಾಮಗಳಲ್ಲಿ ಚರಂಡಿ ತುಂಬಿ ರಸ್ತೆಗಳಲ್ಲಿ ನೀರು ಹರಿಯಿತು. ಮಳೆಯಿಂದ ರಕ್ಷಿಸಿಕೊಳ್ಳಲು ಜನರು ಛತ್ರಿ ಹಿಡಿದು ಓಡಾಡಿದರು.

ನಗರ ಪ್ರದೇಶಗಳಲ್ಲಿ ಜಿಟಿ ಜಿಟಿ ಮಳೆಯಿಂದ ಗ್ರಾಮೀಣ ಭಾಗದ ಜನರು ಅಂಗಡಿಮುಂಗಟ್ಟು, ಹೋಟೆಲ್‌ಗಳಲ್ಲಿ ಕುಳಿತಿದ್ದರು. ತರಕಾರಿ ಮಾರುಕಟ್ಟೆಯಲ್ಲಿ ವ್ಯಾಪಾರ ವಹಿವಾಟು ಇಲ್ಲದೆ ಖಾಲಿ ಖಾಲಿ ಹೊಡೆಯುತ್ತಿದ್ದವು.

ಶನಿವಾರ ಸುರಿದ ಮಳೆಗೆ ಆಲ್ದಾಳದಲ್ಲಿ 125 ಮಿ.ಮೀ. ದಾಖಲೆ ಮಳೆಯಾಗಿದೆ. ಶನಿವಾರ ರಾತ್ರಿ ಮತ್ತು ಭಾನುವಾರ ಜಿಟಿ ಜಿಟಿ ಮಳೆ ಸುರಿಯಿತು. ಹುಣಸಿಹೊಳೆ-೧, ಶೆಳ್ಳಗಿ-೧ ಒಟ್ಟು ಎರಡು ಮನೆಗಳು ಕುಸಿತಗೊಂಡಿವೆ. ಮಳೆಯಿಂದ ಹಾಗೂ ಕೃಷಿ ನದಿ ಪಾತ್ರದ ಜಮೀನುಗಳಲ್ಲಿ ಜಲಾವೃತವಾಗಿತ್ತು. ಎರಡು ದಿನದಿಂದ ಸುರಿಯುತ್ತಿರುವ ಮಳೆಯಿಂದ ದೇವಾಪುರ ಗ್ರಾಮದ ತೆಗ್ಗಿನಹಳ್ಳ, ಕಂಪಾಪುರದ ನಾಲ, ಹಿರೇ ಹಳ್ಳ, ತುಂಬಿ ಹರಿಯುತ್ತಿದೆ. ಇದರಿಂದ ಜಮೀನುಗಳಿಗೆ ನೀರು ನುಗ್ಗಿ ಅಪಾರ ಬೆಳೆ ಹಾನಿಯಾಗಿದೆ.