ನಿರ್ಮಾಣ ಹಂತದ ಕಟ್ಟಡದ ಪಕ್ಕದ ಮನೆ ಮೇಲೆ ಆ ಕಟ್ಟಡದ ನಾಲ್ಕನೇ ಮಹಡಿಯಿಂದ ಹಾಲೋಬ್ರಿಕ್ಸ್ ಗಳು ಬಿದ್ದು ಬಾಲಕಿ ಮೃತಪಟ್ಟು, ಇಬ್ಬರು ಮಕ್ಕಳು ಸೇರಿ ಮೂವರು ಗಾಯಗೊಂಡಿರುವ ಘಟನೆ ಎಚ್‌ಎಎಲ್ ಸಮೀಪ ಗುರುವಾರ ನಡೆದಿದೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ನಿರ್ಮಾಣ ಹಂತದ ಕಟ್ಟಡದ ಪಕ್ಕದ ಮನೆ ಮೇಲೆ ಆ ಕಟ್ಟಡದ ನಾಲ್ಕನೇ ಮಹಡಿಯಿಂದ ಹಾಲೋಬ್ರಿಕ್ಸ್ ಗಳು ಬಿದ್ದು ಬಾಲಕಿ ಮೃತಪಟ್ಟು, ಇಬ್ಬರು ಮಕ್ಕಳು ಸೇರಿ ಮೂವರು ಗಾಯಗೊಂಡಿರುವ ಘಟನೆ ಎಚ್‌ಎಎಲ್ ಸಮೀಪ ಗುರುವಾರ ನಡೆದಿದೆ.ಬನಶಂಕರಿ ನಿವಾಸಿ ಬೇಬಿ ಮನುಶ್ರೀ (4) ಮೃತ ದುರ್ದೈವಿ. ಈ ಘಟನೆಯಲ್ಲಿ ಶ್ರೀಯನ್ (6), ಶೇಖರ್ (5) ಹಾಗೂ ಮೃತ ಬಾಲಕಿ ತಾಯಿ ಮಮತಾ (30) ಗಾಯಗೊಂಡಿದ್ದಾರೆ. ಚಿನ್ನಪ್ಪನಹಳ್ಳಿಯ ಶ್ರೀನಿವಾಸಲು ಎಂಬುವರಿಗೆ ಸೇರಿದ ಕಟ್ಟಡದ ಪಕ್ಕದಲ್ಲಿದ್ದ ಸಿಮೆಂಟ್ ಮನೆ ಮೇಲೆ ಸಿಮೆಂಟ್ ಇಟ್ಟಿಗೆ ಬಿದ್ದು ಈ ದುರಂತ ಸಂಭವಿಸಿದೆ ಎಂದು ಪೊಲೀಸರು ಹೇಳಿದ್ದಾರೆ.
ವಿಜಯಪುರ ಜಿಲ್ಲೆ ಸಿಂದಗಿ ತಾಲೂಕಿನ ಬೊರಗಿ ಗ್ರಾಮದ ಖಾಸಗಿ ಕಂಪನಿ ಉದ್ಯೋಗಿ ಶ್ರೀಶೈಲ ಅವರು, ಬನಶಂಕರಿ ಸಮೀಪ ತನ್ನ ಕುಟುಂಬದ ಜತೆ ನೆಲೆಸಿದ್ದಾರೆ. ತಮ್ಮ ಎರಡನೇ ಮಗುವಿನ ಬಾಣಂತನಕ್ಕೆ ಚಿನ್ನಪ್ಪನಹಳ್ಳಿಯಲ್ಲಿದ್ದ ಅಕ್ಕ ಮಧು ಮನೆಗೆ ಮಮತಾ ಬಂದಿದ್ದರು. ತಾಯಿ ಜತೆ ಮನುಶ್ರೀ ಸಹ ಬಂದಿದ್ದಳು. ಆ ಸಿಮೆಂಟ್ ಶೀಟ್‌ನ ಮನೆ ಪಕ್ಕದಲ್ಲೇ ಚಿನ್ನಪ್ಪನಹಳ್ಳಿಯಲ್ಲಿ ಶ್ರೀನಿವಾಸಲು ಅವರಿಗೆ ಸೇರಿದ ನಾಲ್ಕು ಅಂತಸ್ತಿನ ವಸತಿ ಸಂಕೀರ್ಣ ನಿರ್ಮಾಣವಾಗುತ್ತಿತ್ತು.ಎಂದಿನಂತೆ ಆ ನಿರ್ಮಾಣ ಹಂತದ ಕಟ್ಟಡದಲ್ಲಿ ಗುರುವಾರ ಮಧ್ಯಾಹ್ನ 3.30ರ ಸುಮಾರಿಗೆ ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಅದೇ ಹೊತ್ತಿಗೆ ಒಂದೂವರೆ ತಿಂಗಳ ಮಗುವನ್ನು ತೊಡೆ ಮೇಲೆ ಮಲಗಿಸಿಕೊಂಡು ಗೋಡೆಗೆ ಒರಗಿ ಮಮತಾ ಕುಳಿತಿದ್ದರೆ, ಮಂಚದ ಮೇಲೆ ಮಮತಾಳ ಹಿರಿಯ ಮಗಳು ಮನು, ಆಕೆಯ ಸೋದರಿ ಮಕ್ಕಳಾದ ಶ್ರೀಯನ್ ಹಾಗೂ ಶೇಖರ್ ಆಟವಾಡುತ್ತಿದ್ದರು. ಆಗ ಮಕ್ಕಳ ಪಾಲಿಗೆ ಹಾಲೋಬ್ರಿಕ್ಸ್‌ಗಳು ಯಮಕಿಂಕರವಾಗಿ ಕಾಡಿವೆ. ನಾಲ್ಕನೇ ಹಂತದಿಂದ ಆಕಸ್ಮಿಕವಾಗಿ 10-15 ಹಾಲೋಬ್ರಿಕ್ಸ್‌ಗಳು ಸಿಮೆಂಟ್ ಶೀಟ್ ಮನೆ ಮೇಲೆ ಬಿದ್ದಿವೆ. ಆಗ ಮನೆಯಲ್ಲಿದ್ದ ನಾಲ್ವರು ಮಕ್ಕಳು ಹಾಗೂ ಮಮತಾ ತೀವ್ರವಾಗಿ ಗಾಯಗೊಂಡಿದ್ದಾರೆ.
ತಕ್ಷಣವೇ ಸಮೀಪದ ಖಾಸಗಿ ಆಸ್ಪತ್ರೆಗೆ ಗಾಯಾಳುಗಳನ್ನು ಕಾರ್ಮಿಕರು ಕರೆದೊಯ್ದಿದ್ದಾರೆ. ಆದರೆ ಅಷ್ಟರಲ್ಲಿ ತೀವ್ರ ರಕ್ತಸ್ರಾವದಿಂದ ಮಧುಶ್ರೀ ಕೊನೆಯುಸಿರೆಳೆದಿದ್ದಾಳೆ. ಮೃತಳ ತಾಯಿ ಮಮತಾ ಹಾಗೂ ಇಬ್ಬರು ಮಕ್ಕಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗಾಯಾಳುಗಳು ವೈದ್ಯಕೀಯ ಚಿಕಿತ್ಸೆಗೆ ಸ್ಪಂದಿಸಿದ್ದು, ಪ್ರಾಣಾಪಾಯದಿಂದ ಅವರು ಸುರಕ್ಷಿತವಾಗಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.ಈ ಘಟನೆ ಸಂಬಂಧ ನಿರ್ಮಾಣ ಹಂತದ ಕಟ್ಟಡದ ಮಾಲೀಕ ಶ್ರೀನಿವಾಸಲು ಸೇರಿದಂತೆ ಇತರರ ವಿರುದ್ಧ ಎಚ್‌ಎಎಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಚಿನ್ನಪ್ಪನಹಳ್ಳಿಯಲ್ಲಿ ನಾಲ್ಕು ವರ್ಷದ ಬಾಲಕಿ ಮೃತಪಟ್ಟ ಘಟನೆಗೆ ಅಕ್ಕಪಕ್ಕದ ಮನೆಗಳ ಸುರಕ್ಷತೆಗೆ ಮುಂಜಾಗ್ರತೆ ವಹಿಸದೆ ಕಟ್ಟಡ ನಿರ್ಮಾಣ ಕಾಮಗಾರಿ ನಡೆಸುತ್ತಿದ್ದು ಕಾರಣವಾಗಿದೆ. ಈ ಅಜಾಗರೂಕತೆ ಸಂಬಂಧ ಕಟ್ಟಡದ ಮಾಲಿಕರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುತ್ತದೆ.- ಪರಶುರಾಮ್, ಡಿಸಿಪಿ, ವೈಟ್‌ಫೀಲ್ಡ್ ವಿಭಾಗ