ಸಾರಾಂಶ
ಜಿಲ್ಲೆಯ ಸಂತೇಬೆನ್ನೂರು ಸಮೀಪದ ಗೆದ್ದಲಹಟ್ಟಿ ಗ್ರಾಮದ ಬಳಿ ರಸ್ತೆಯಲ್ಲಿ ಸಾಗುತ್ತಿದ್ದ 8 ವರ್ಷದ ಬಾಲಕಿಗೆ ಕಾರು ಡಿಕ್ಕಿ ಹೊಡೆದಿದ್ದು, ತೀವ್ರ ಗಾಯಗೊಂಡಿದ್ದ ಬಾಲಕಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾಳೆ. ಈ ಘಟನೆಯಿಂದ ಆಕ್ರೋಶಗೊಂಡ ಗ್ರಾಮಸ್ಥರು ರಸ್ತೆ ಬಂದ್ ಮಾಡುವ ಮೂಲಕ ಶುಕ್ರವಾರ ಪ್ರತಿಭಟಿಸಿದರು.
- ಚನ್ನಗಿರಿ-ಸಂತೇಬೆನ್ನೂರು ರಸ್ತೆಗೆ ಹಂಪ್ಸ್ ಹಾಕಲು ಆಗ್ರಹ
- - - ದಾವಣಗೆರೆ: ಜಿಲ್ಲೆಯ ಸಂತೇಬೆನ್ನೂರು ಸಮೀಪದ ಗೆದ್ದಲಹಟ್ಟಿ ಗ್ರಾಮದ ಬಳಿ ರಸ್ತೆಯಲ್ಲಿ ಸಾಗುತ್ತಿದ್ದ 8 ವರ್ಷದ ಬಾಲಕಿಗೆ ಕಾರು ಡಿಕ್ಕಿ ಹೊಡೆದಿದ್ದು, ತೀವ್ರ ಗಾಯಗೊಂಡಿದ್ದ ಬಾಲಕಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾಳೆ. ಈ ಘಟನೆಯಿಂದ ಆಕ್ರೋಶಗೊಂಡ ಗ್ರಾಮಸ್ಥರು ರಸ್ತೆ ಬಂದ್ ಮಾಡುವ ಮೂಲಕ ಶುಕ್ರವಾರ ಪ್ರತಿಭಟಿಸಿದರು.ಚನ್ನಗಿರಿ ತಾಲೂಕಿನ ಗೆದ್ದಲಹಟ್ಟಿ ಗ್ರಾಮದ ಬಳಿ ಅಪಘಾತ ನಡೆದಿದ್ದು, ರೂಪಾ (8) ಮೃತಪಟ್ಟ ದುರ್ದೈವಿ. ರಸ್ತೆಯಲ್ಲಿ ರೂಪಾ ಸಾಗುತ್ತಿದ್ದ ವೇಳೆ ಅದೇ ಮಾರ್ಗದಲ್ಲಿ ಬಂದ ಕಾರು ಡಿಕ್ಕಿ ಹೊಡೆದಿದೆ. ತಕ್ಷಣ ಗಾಯಾಳು ರೂಪಾಳನ್ನು ಸಂತೇಬೆನ್ನೂರು ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ, ಅಷ್ಟರಲ್ಲಿ ಬಾಲಕಿ ಸಾವನ್ನಪ್ಪಿದಳು. ಬಾಲಕಿ ರೂಪಾ ಸಾವಿನ ಸುದ್ದಿ ತಿಳಿದ ಗ್ರಾಮಸ್ಥರು ರಸ್ತೆ ತಡೆ ನಡೆಸಿದರು.
ಪ್ರತಿಭಟನೆಯಲ್ಲಿ ಗ್ರಾಮಸ್ಥರು ಮಾತನಾಡಿ, ಚನ್ನಗಿರಿ- ಸಂತೇಬೆನ್ನೂರು ರಸ್ತೆಯಲ್ಲಿ ನಿರಂತರ ಅಪಘಾತಗಳು ಸಂಭವಿಸುತ್ತಿವೆ. ಗೆದ್ದಲಹಟ್ಟಿ ಗ್ರಾಮದ ಬಳಿ ರಸ್ತೆಗೆ ಹಂಪ್ಸ್‌ಗಳನ್ನು ಹಾಕುವಂತೆ ಒತ್ತಾಯಿಸುತ್ತಾ ಬಂದಿದ್ದರೂ, ಅಧಿಕಾರಿಗಳು ಕಿವಿಗೊಡಲಿಲ್ಲ. ಒಂದುವೇಳೆ ರಸ್ತೆಗೆ ಹಂಪ್ಸ್ ಹಾಕಿದ್ದರೆ ತಮ್ಮ ಊರಿನ ಬಾಲಕಿ ಸಾವನ್ನಪ್ಪುವ ಪರಿಸ್ಥಿತಿ ಬರಲಿಲ್ಲ. ಸಂಬಂಧಿಸಿದ ಇಲಾಖೆ ಅಧಿಕಾರಿಗಳ ಅಸಡ್ಡೆಗೆ ಬಾಲಕಿ ಬಲಿಯಾಗಿದ್ದಾಳೆ ಎಂದು ಆರೋಪಿಸಿದರು.ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ ಹರಸಾಹಸ ಮಾಡಿ, ಗ್ರಾಮಸ್ಥರ ಮನವೊಲಿಸುವಲ್ಲಿ ಸಫಲರಾದರು. ಸಂತೇಬೆನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.