ಸಾರಾಂಶ
ಹೂವಿನಹಡಗಲಿ: ವಿದ್ಯಾರ್ಥಿನಿಯರಿಗೆ ಪ್ರೌಢಾವಸ್ಥೆಯಲ್ಲಿ ಆಕರ್ಷಣೆ ಹೆಚ್ಚಾಗಿರುತ್ತದೆ. ಆದರಿಂದ ಅಪರಿಚತರೊಂದಿಗೆ ಬಹಳಷ್ಟು ಎಚ್ಚರಿಕೆಯಿಂದ ಇರಬೇಕೆಂದು ಸಿವಿಲ್ ನ್ಯಾಯಾಲಯದ ನ್ಯಾಯಾಧೀಶೆ ಟಿ.ಅಕ್ಷತಾ ಹೇಳಿದರು.
ಇಲ್ಲಿನ ಸೊಪ್ಪಿನ ಕಾಳಮ್ಮ ಬಾಲಕಿಯರ ಪ್ರೌಢ ಶಾಲೆಯಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ತಾಲೂಕು ವಕೀಲರ ಸಂಘ, ತಾಲೂಕು ಆಡಳಿತಾಧಿಕಾರಿ, ಸಾರ್ವಜನಿಕ ಶಿಕ್ಷಣ ಇಲಾಖೆಗಳ ಸಹಯೋಗದಲ್ಲಿ ಆಯೋಜಿಸಿದ್ದ ಉಚಿತ ಕಾನೂನು ಅರಿವು ನೆರವು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.ಪಟ್ಟಣ ಸೇರಿದಂತೆ ಗ್ರಾಮೀಣ ಪ್ರದೇಶದಲ್ಲಿ ಬಾಲಕಿಯರ ಶಿಕ್ಷಣಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಿಲ್ಲ. ಆದರೆ ಈ ಭಾಗದಲ್ಲಿ ಅತಿ ಹೆಚ್ಚು ವಿದ್ಯಾರ್ಥಿನಿಯರು, ಅಭ್ಯಾಸ ಮಾಡುತ್ತಿರುವುದು ಬಹಳಷ್ಟು ಖುಷಿ ತಂದಿದೆ. ಮಾನವ ಕಳ್ಳಸಾಗಾಟ ಹಾಗೂ ಪೊಕ್ಸೊ ಕಾಯ್ದೆ ಕುರಿತು ಕಾನೂನು ಅರಿವು ಮೂಡಿಸುವ ಕೆಲಸ ಮಾಡಲಾಗುತ್ತಿದೆ ಎಂದರು.
ವಿದ್ಯಾರ್ಥಿನಿಯರು ಯಾವುದೇ ಕಾರಣಕ್ಕೂ ಅಪರಿಚಿತರೊಂದಿಗೆ ಹೆಚ್ಚು ಸಲುಗೆಯಿಂದ ಇರಬಾರದು. ಅವರು ಹೇಳಿದಂತೆ ಕೇಳುವುದಾಗಲಿ ಮಾಡಬಾರದು, ನೀವು ಬಹಳ ಎಚ್ಚರಿಕೆಯಿಂದ ಇರಬೇಕೆಂದು ಹೇಳಿದರು.ವಕೀಲ ಎಸ್.ಎಂ. ಉಮೇಶ ಮಾತನಾಡಿ, ಅಪ್ರಾಪ್ತ ಮಕ್ಕಳು ಮತ್ತು ಕಿಶೋರಿಯರಿಗೆ ಬಾಲ್ಯ ವಿವಾಹ ಮತ್ತು ಪೊಕ್ಸೊ ಕಾಯ್ದೆ ಕಾನೂನು ಬಗ್ಗೆ ಉಪನ್ಯಾಸ ನೀಡಿದರು.
ವಕೀಲ ಅಟವಾಳಗಿ ಕೊಟ್ರೇಶ, ಮಾನವ ಕಳ್ಳ ಸಾಗಾಣೆ ತಡೆ ದಿನಾಚರಣೆ ಕುರಿತು ಉಪನ್ಯಾಸ ನೀಡಿದರು.ತಾಲೂಕ ವಕೀಲರ ಸಂಘದ ಅಧ್ಯಕ್ಷ ಜಿ.ವಸಂತಕುಮಾರ ಅಧ್ಯಕ್ಷತೆ ವಹಿಸಿದ್ದರು. ಸಹಾಯಕ ಸರ್ಕಾರಿ ಅಭಿಯೋಜಕಿ ಡಿ.ನಿರ್ಮಲ, ಕ್ಷೇತ್ರ ಸಮನ್ವಯಾಧಿಕಾರಿ ಎ.ಕೋಟೆಪ್ಪ, ವಕೀಲರಾದ ಜ್ಯೋತಿ ಮಲ್ಲಣ್ಣ, ಡಿ.ಸಿದ್ದನಗೌಡ, ಎಸ್.ಬಸವರಾಜ, ಎಂ.ಪಿ.ಎಂ.ಪ್ರಸನ್ನಕುಮಾರ, ಎಚ್.ಸುಜಾತ, ಮುಖ್ಯ ಶಿಕ್ಷಕ ಬಿ.ವೀರಣ್ಣ ಸೇರಿದಂತೆ ಇತರರಿದ್ದರು.