ಧಾರವಾಡ:

ತಾಲೂಕಿನ ಗರಗ ಗ್ರಾಮದಲ್ಲಿ ಆತ್ಮಹತ್ಯೆಗೆ ಒಳಗಾಗಿರುವ ಬಾಲಕಿ ಸಾವಿಗೆ ನ್ಯಾಯ ಕೊಡಬೇಕು. ಆಕೆಯ ಮೇಲೆ ಬರೀ ಲೈಂಗಿಕ ದೌರ್ಜನ್ಯವಾಗಿಲ್ಲ, ಅವಳು ಲವ್‌ ಜಿಹಾದ್‌ಗೆ ಬಲಿಯಾಗಿದ್ದಾಳೆ. ಈ ಕೃತ್ಯಕ್ಕೆ ಕಾರಣರಾದ ಆರೋಪಿಗಳಿಗೆ ಗಲ್ಲು ಶಿಕ್ಷೆಯಾಗಬೇಕೆಂದು ಆಗ್ರಹಿಸಿ ಶುಕ್ರವಾರ ವಿಶ್ವ ಹಿಂದೂ ಪರಿಷತ್, ಶ್ರೀರಾಮಸೇನೆ ಹಾಗೂ ಬಜರಂಗದಳ ಕಾರ್ಯಕರ್ತರು ಗರಗ ಗ್ರಾಮದ ಗಾಂಧಿ ವೃತ್ತ ಬಂದ್‌ ಮಾಡಿ ಪ್ರತಿಭಟಿಸಿದರು.

ಗ್ರಾಮದ 17 ವರ್ಷದ ದಲಿತ ಬಾಲಕಿಗೆ ಉಪ್ಪಿನಬೆಟಗೇರಿಯ ನಯಿಮ್‌ ಬೇಗ ಹಾಗೂ ಸೋಹಿಲ್‌ ಎಂಬವರು ಲೈಂಗಿಕ ಕಿರುಕುಳ ನೀಡಿದ್ದಾರೆ. ಲವ್ ಜಿಹಾದ್‌ಗಾಗಿ ಬಾಲಕಿಯು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ತಿಂಗಳು ಕಳೆದರೂ ಬಂಧಿಸದ ಪೊಲೀಸರು ತೀವ್ರ ಒತ್ತಡದ ಬಳಿಕ ಇದೀಗ ಬಂಧಿಸಿದ್ದಾರೆ. ಈ ಪ್ರಕರಣದಲ್ಲಿ ಪೊಲೀಸರ ಕೈವಾಡವೂ ಇದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಹಾಗೂ ಲವ್‌ ಜಿಹಾದ್‌ಗಾಗಿ ಆರೋಪಿಗಳಿಗೆ ಗಲ್ಲು ಶಿಕ್ಷೆ ನೀಡಬೇಕು. ಸಿಪಿಐ ಶಿವಯೋಗಿ ಲೋಹಾರ, ಪಿಎಸ್‌ಐ ಹಾಗೂ ಸಂಬಂಧಿಸಿದ ಸಿಬ್ಬಂದಿ ಮೇಲೆ ಕ್ರಮವಾಗಬೇಕು ಎಂದು ಆಗ್ರಹಿಸಿದರು.

ಜಿಹಾದಿಗಳನ್ನು ಗಲ್ಲಿಗೇರಿಸಿ, ಎಚ್ಚರವಾಗಿ ಎಚ್ಚರವಾಗಿ ಹಿಂದೂ ಹೆಣ್ಣು ಮಕ್ಕಳೇ.. ಎಂದು ಘೋಷಣೆ ಕೂಗಿದರು. ಬಜರಂಗದಳದ ಶಿವಾನಂದ ಸತ್ತಿಗೇರಿ, ಮೃತ ಬಾಲಕಿ ತಂದೆ-ತಾಯಿ ಹಾಗೂ ಹೋರಾಟಗಾರರು ಇದ್ದರು.