ಸಾರಾಂಶ
ಉಡುಪಿಯ ಬಾಲಕಿಯರ ಪಪೂ ಕಾಲೇಜಿನ ಪ್ರೌಢಶಾಲೆಯಲ್ಲಿ ಯಕ್ಷಶಿಕ್ಷಣ ಉದ್ಘಾಟಿಸಲಾಯಿತು. ಕಾರ್ಯಕ್ರಮದಲ್ಲಿ ಯಕ್ಷಶಿಕ್ಷಣ ಟ್ರಸ್ಟ್ ಕಾರ್ಯದರ್ಶಿ ಮುರಲಿ ಕಡೆಕಾರ್ ಮಾತನಾಡಿದರು.
ಕನ್ನಡಪ್ರಭ ವಾರ್ತೆ ಉಡುಪಿ
ಜಿಲ್ಲೆಯಲ್ಲಿ ಯಕ್ಷಶಿಕ್ಷಣ ಯೋಜನೆಯಡಿ ನಾಲ್ಕನೇ ಮೂರು ಭಾಗ ಹುಡುಗಿಯರೇ ಯಕ್ಷಗಾನ ತರಬೇತಿ ಪಡೆಯುತ್ತಿದ್ದಾರೆ. ಪ್ರೌಢಶಾಲೆಯ ವಿದ್ಯಾರ್ಥಿನಿಯರು ಯಕ್ಷಗಾನವನ್ನು ಕಲಿತು ಪ್ರತೀವರ್ಷ ಸುಂದರವಾದ ಪ್ರದರ್ಶನ ನೀಡುತ್ತಿರುವುದು ಅಭಿನಂದನೀಯ ಎಂದು ಯಕ್ಷಶಿಕ್ಷಣ ಟ್ರಸ್ಟ್ ಕಾರ್ಯದರ್ಶಿ ಮುರಲಿ ಕಡೆಕಾರ್ ಹೇಳಿದರು.ಅವರು ಶನಿವಾರ ಉಡುಪಿಯ ಬಾಲಕಿಯರ ಪಪೂ ಕಾಲೇಜಿನ ಪ್ರೌಢಶಾಲೆಯಲ್ಲಿ ಯಕ್ಷಶಿಕ್ಷಣವನ್ನು ಉದ್ಘಾಟಿಸಿ ಮಾತನಾಡಿದರು.
೧೭ ವರ್ಷಗಳ ಹಿಂದೆ ಉಡುಪಿ ವಿಧಾನಸಭಾ ಕ್ಷೇತ್ರದ ಪ್ರೌಢಶಾಲೆಗಳ ವಿದ್ಯಾರ್ಥಿಗಳಿಗೆ ಯಕ್ಷಗಾನ ಕಲಿಸುವ ಉದ್ದೇಶದಿಂದ ಆರಂಭಗೊಂಡ ಯಕ್ಷ ಶಿಕ್ಷಣ ಇಂದು ಕಾಪು, ಕುಂದಾಪುರ, ಬೈಂದೂರು ಸೇರಿ ಒಟ್ಟು 4 ವಿಧಾನಸಭಾ ಕ್ಷೇತ್ರಕ್ಕೆ ವ್ಯಾಪಿಸಿದ್ದು, ಈ ಬಾರಿ ೯೦ ಪ್ರೌಢಶಾಲೆಗಳಲ್ಲಿ ೪೦ ಯಕ್ಷಗಾನ ಗುರುಗಳು ನಮ್ಮ ನೆಲದ ಅಪೂರ್ವ ಕಲೆಯ ಶಿಕ್ಷಣವನ್ನು ನೀಡುತ್ತಿದ್ದಾರೆ ಎಂದು ತಿಳಿಸಿದರು.ಈ ಶಾಲೆಗೆ ಯಕ್ಷಶಿಕ್ಷಣದ ವಿದ್ಯಾರ್ಥಿಯಾಗಿ, ಪ್ರಕೃತ ಐ.ಟಿ. ಉದ್ಯೋಗಿಯಾಗಿರುವ, ಉಭಯತಿಟ್ಟುಗಳಲ್ಲೂ ಪ್ರಾವೀಣ್ಯತೆ ಹೊಂದಿರುವ ಆದ್ಯತಾ ಭಟ್, ಶಿಕ್ಷಕಿಯಾಗಿ ದೊರೆತಿರುವುದು ನಮ್ಮ ಅಭಿಯಾನದ ಸಾರ್ಥಕತೆಯ ಸಂಕೇತ ಎಂಬುದಾಗಿ ಅವರು ಹೇಳಿದರು.
ಇದೇ ಸಂದರ್ಭದಲ್ಲಿ ಶಾಲಾ ಸಂಸತ್ತನ್ನೂ ಉದ್ಘಾಟಿಸಲಾಯಿತು. ಆರಂಭದಲ್ಲಿ ಶಾಲಾ ಮುಖ್ಯಶಿಕ್ಷಕಿ ಇಂದಿರಾ ಸ್ವಾಗತಿಸಿದರು. ನಿವೃತ್ತ ಉಪನ್ಯಾಸಕ ದಯಾನಂದ ಅಭ್ಯಾಗತರಾಗಿ ಭಾಗವಹಿಸಿದ್ದರು. ಶಾಲಾ ಎಸ್.ಡಿ.ಎಂ.ಸಿ. ಅಧ್ಯಕ್ಷೆ ನವ್ಯಾ ನಾಯಕ್, ನಿವೃತ್ತ ಪ್ರಾಂಶುಪಾಲೆ ತಾರಾ, ಯಕ್ಷಗಾನ ಗುರುಗಳಾದ ನಿರಂಜನ ಭಟ್ ಮತ್ತು ಆದ್ಯತಾ ಭಟ್ ಉಪಸ್ಥಿತರಿದ್ದರು. ಶಿಕ್ಷಕರಾದ ಶೇಖರ್ ಬೋವಿ ನಿರ್ವಹಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ಉಷಾ ಕುಮಾರಿ ವಂದಿಸಿದರು.