ತಾಲೂಕಿನ ರಾಜನಕೋಳೂರು ಗ್ರಾಮದ ಬಾಲಕಿಯರು ಹೊಸಪೇಟೆಯಲ್ಲಿ ನಡೆದ ಕಲ್ಬುರ್ಗಿ ವಿಭಾಗದ 2026-27ನೇ ಸಾಲಿನ ದಸರಾ ಸಿಎಂ ಕಪ್ ಕ್ರೀಡಾಕೂಟದಲ್ಲಿ ಯಾದಗಿರಿ ಜಿಲ್ಲೆ ಪ್ರತಿನಿಧಿಸಿ ಬಾಲಕಿಯರ ಮುಕ್ತ ಕಬಡ್ಡಿಯಲ್ಲಿ ಪ್ರಥಮಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಕನ್ನಡಪ್ರಭ ವಾರ್ತೆ ಹುಣಸಗಿ
ತಾಲೂಕಿನ ರಾಜನಕೋಳೂರು ಗ್ರಾಮದ ಬಾಲಕಿಯರು ಹೊಸಪೇಟೆಯಲ್ಲಿ ನಡೆದ ಕಲ್ಬುರ್ಗಿ ವಿಭಾಗದ 2026-27ನೇ ಸಾಲಿನ ದಸರಾ ಸಿಎಂ ಕಪ್ ಕ್ರೀಡಾಕೂಟದಲ್ಲಿ ಯಾದಗಿರಿ ಜಿಲ್ಲೆ ಪ್ರತಿನಿಧಿಸಿ ಬಾಲಕಿಯರ ಮುಕ್ತ ಕಬಡ್ಡಿಯಲ್ಲಿ ಪ್ರಥಮಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.ಯುವ ಜನ ಮತ್ತು ಕ್ರೀಡಾ ಸಬಲೀಕರಣ ಇಲಾಖೆ ವತಿಯಿಂದ ಬುಧವಾರ ಹೊಸಪೇಟೆಯಲ್ಲಿ ಹಮ್ಮಿಕೊಂಡಿದ್ದ ಕಲಬುರ್ಗಿ ವಿಭಾಗಮಟ್ಟದ ದಸರಾ ಕ್ರೀಡಾಕೂಟದಲ್ಲಿ ಬಾಲಕಿಯರ ಕಬಡ್ಡಿ ಫೈನಲ್ ಪಂದ್ಯದಲ್ಲಿ ರಾಯಚೂರು ಜಿಲ್ಲೆಯನ್ನು ಸೋಲಿಸಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಮೈಸೂರು ದಸರಾದಲ್ಲಿ ಅಕ್ಟೊಬರ್ 11ರಂದು ನಡೆಯಲಿರುವ ರಾಜ್ಯಮಟ್ಟದ ಕ್ರೀಡೆಯಲ್ಲಿ ಕಲಬುರ್ಗಿ ವಿಭಾಗದಿಂದ ಸ್ಪರ್ಧಿಸಲಿದ್ದಾರೆ.ರಾಜಕೋಳೂರು ಬಾಲಕಿಯರ ( ಹುಣಸಗಿ ತಾಲೂಕು ತಂಡ ) ಪ್ರಥಮವಾಗಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗುವ ಮೂಲಕ ತಾಲೂಕು ಹಾಗೂ ಜಿಲ್ಲೆಯ ಕೀರ್ತಿ ಹೆಚ್ಚಿಸಿದ್ದಾರೆ.ವಿದ್ಯಾರ್ಥಿಗಳ ಈ ಸಾಧನೆಗೆ ಜಿಲ್ಲಾ ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ರಾಜು ಭಾವಿಹಳ್ಳಿ, ಮಾಜಿ ಸಚಿವ ನರಸಿಂಹ ನಾಯಕ (ರಾಜುಗೌಡ), ಮುಖಂಡರಾದ ಎಚ್ ಸಿ ಪಾಟೀಲ್, ಬಿ ಎಂ ಹಳ್ಳಿಕೋಟಿ ಸಹಿತ ಗ್ರಾಮಸ್ಥರು ಹರ್ಷ ವ್ಯಕ್ತಪಡಿಸಿ, ರಾಜ್ಯಮಟ್ಟದಲ್ಲಿ ಗ್ರಾಮೀಣ ಪ್ರತಿಭೆಗಳು ವಿಜೇತರಾಗಲಿ ಎಂದು ಶುಭ ಹಾರೈಸಿದ್ದಾರೆ. ಈ ಸಂದರ್ಭ ತಂಡದ ವ್ಯವಸ್ಥಾಪಕ ಬಸನಗೌಡ ಜಲಪೂರ್, ತರಬೇತುದಾರ ಶಿವು ಗುಡಿದೊರೆ, ನಿವೃತ್ತ ದೈಹಿಕ ಶಿಕ್ಷಣಾಧಿಕಾರಿ ವೀರೇಶ್ ಅಂಗಡಿ, ಬಸ್ಸು ಗುತ್ತೇದಾರ ಹುಣಸಗಿ ಸೇರಿದಂತೆ ಕ್ರೀಡಾಪಟುಗಳು ಉಪಸ್ಥಿತರಿದ್ದರು.