ರಾಮನಗರ: ಹೆಣ್ಣು ಮಕ್ಕಳು ಶಿಕ್ಷಿತರಾಗುವ ಜೊತೆಗೆ ತಮ್ಮ ಆರೋಗ್ಯವನ್ನು ಕಾಪಾಡಿಕೊಂಡು ಎಲ್ಲ ಕ್ಷೇತ್ರಗಳಲ್ಲಿಯೂ ಸಾಧನೆ ಮಾಡಬೇಕು ಎಂದು ಜಿಲ್ಲೆಯ ಬಾಲನ್ಯಾಯ ಮಂಡಳಿಯ ಅಧ್ಯಕ್ಷರಾದ ಟಿ.ಎಂ.ನಿವೇದಿತಾ ಕರೆ ನೀಡಿದರು.
ತಾಲೂಕಿನ ಜಾಲಮಂಗಲದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ನಾಡಪ್ರಭು ಶ್ರೀ ಮಾಗಡಿ ಕೆಂಪೇಗೌಡರ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಾಲಾ ಶಿಕ್ಷಣ ಇಲಾಖೆ, ಪದವಿ ಪೂರ್ವ ಶಿಕ್ಷಣ ಇಲಾಖೆ ಹಾಗೂ ಜಿಲ್ಲಾ ಮಹಿಳಾ ಸಬಲೀಕರಣ ಘಟಕ, ಜಿಲ್ಲಾ ವಕೀಲರ ಸಂಘದ ಸಹಯೋಗದೊಂದಿಗೆ ಬೇಟಿ ಬಚಾವೋ, ಬೇಟಿ ಪಡಾವೋ ಯೋಜನೆಯಡಿ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಬೇಟಿ ಪಡಾವೋ ಎಂದರೆ ಹೆಚ್ಚು ಸಂಖ್ಯೆಯ ಹೆಣ್ಣು ಮಕ್ಕಳು ಶಿಕ್ಷಿತರಾಗಬೇಕುಂಬುದು, ಆಧುನಿಕ ಹೆಣ್ಮಕ್ಕಳು ಬಾಹ್ಯಾಕಾಶಕ್ಕೂ ಲಗ್ಗೆ ಇಟ್ಟಿದ್ದಾರೆ. ಆ ಮೂಲಕ ಆಧುನಿಕ ಕಾಲದ ಮಹಿಳೆ ಬಲಾಢ್ಯಳಾಗುತ್ತಿದ್ದಾಳೆ, ಉತ್ತಮ ಶಿಕ್ಷಣ ಪಡೆದು ಒಳ್ಳೆಯ ಕೆಲಸಕ್ಕೆ ಸೇರಬೇಕು. ವೈದ್ಯರು, ಇಂಜಿನಿಯರ್, ಕಲಾವಿದರಾಗಬೇಕು, ಸಿನೆಮಾ ನಟಿಯರಾಗಬೇಕೆಂಬುದು ಹೆಣ್ಣು ಮಕ್ಕಳ ಆಸೆಯಾಗಿರುತ್ತದೆ. ಆದಕಾರಣ ಹೆಣ್ಣು ಮಕ್ಕಳು ಎಲ್ಲಾ ಕ್ಷೇತ್ರಗಳಲ್ಲೂ ಉತ್ತಮ ಸಾಧನೆ ಮಾಡಬೇಕು ಎಂದು ಕರೆ ನೀಡಿದರು.
ಹೆಣ್ಣು ಮಕ್ಕಳು ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು. ಆಧುನಿಕ ಕಾಲಘಟ್ಟದಲ್ಲಿ ಬೆರಳ ತುದಿಯಲ್ಲಿ ಬೇಕಾದ ಮಾಹಿತಿ ಮೊಬೈಲ್‌ಗಳಲ್ಲೇ ದೊರೆಯುತ್ತದೆ. ಹೆಣ್ಣು ಮಕ್ಕಳು ಇದರಲ್ಲಿ ಸಿಗುವ ಉತ್ತಮ ವಿಷಯಗಳನ್ನು ತಿಳಿದುಕೊಂಡು ವಿವಿಧ ರೀತಿಯ ಕ್ಷೇತ್ರಗಳಲ್ಲಿ ಸಾಧನೆ ಮಾಡಿ ಇತರರಿಗೆ ಪ್ರೇರಣೆಯಾಗಬೇಕು ಎಂದರು.ಹೆಣ್ಣು ಮಕ್ಕಳ ಅಭ್ಯುದಯಕ್ಕಾಗಿ ಸರ್ಕಾರದಿಂದ ಹಲವಾರು ಯೋಜನೆಗಳನ್ನು ರೂಪಿಸಲಾಗಿದೆ. ಆ ಯೋಜನೆಗಳನ್ನು ಶಿಕ್ಷಕರು ಮಕ್ಕಳಿಗೆ ತಿಳಿಸಿಕೊಡಬೇಕು. ಅದರೊಂದಿಗೆ ಶಿಕ್ಷಕರು ಉತ್ತಮ ಜೀವನ ರೂಪಿಸಿಕೊಳ್ಳಲು ಬೇಕಾದ ಸಲಹೆಗಳನ್ನು ನೀಡಬೇಕು. ಮಕ್ಕಳ ಮನಸ್ಸು ತುಂಬಾ ಸೂಕ್ಷ್ಮವಾಗಿರುತ್ತದೆ. ಮಕ್ಕಳು ತಮ್ಮ ಸಮಸ್ಯೆಗಳನ್ನು ಶಿಕ್ಷಕರ ಬಳಿ ಹೇಳಿಕೊಳ್ಳಲು ಕಂಪರ್ಟ್ ಜೋನ್ ಸೃಷ್ಟಿಸುವಂತೆ ತಿಳಿಸಿದರು.
ಪ್ರತಿಯೊಬ್ಬ ಹೆಣ್ಣು ಮಕ್ಕಳಿಗೂ ದೈಹಿಕ ಹಾಗೂ ಮಾನಸಿಕ ಆರೋಗ್ಯ ಕಾಪಾಡಿಕೊಳ್ಳುವ ಬಗ್ಗೆ, ಉನ್ನತ ಶಿಕ್ಷಣದ ಕುರಿತು ಶಿಕ್ಷಕರು ಪ್ರೇರಣೆ ನೀಡಬೇಕು. ಈಗಿನ ಶಿಕ್ಷಣದಲ್ಲಿ ಕೌಶಲ್ಯ ಮುಖ್ಯವಾಗಿದೆ. ಮಕ್ಕಳಲ್ಲಿರುವ ಕಲೆ, ಕೌಶಲ್ಯವನ್ನು ಗುರುತಿಸಬೇಕು. ಮಕ್ಕಳಿಗೆ ಯಾವ ಕ್ಷೇತ್ರದಲ್ಲಿ ಹೆಚ್ಚು ಆಸಕ್ತಿ ಇದೆ ಅದರ ಕಡೆ ಗಮನ ಕೊಟ್ಟು, ಅದರಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡರೆ ಉನ್ನತ ಮಟ್ಟಕ್ಕೆ ಏರಲು ಸಾಧ್ಯವಾಗುತ್ತದೆ ಎಂದು ನಿವೇದಿತಾ ಹೇಳಿದರು.
ಹಿರಿಯ ಸಿವಿಲ್ ನ್ಯಾಯಾಧೀಶರಾದ ಪಿ.ಆರ್.ಸವಿತಾ ಮಾತನಾಡಿ, ಆಧುನಿಕ ಯುಗದಲ್ಲಿ ಜ್ಞಾನವೇ ಶಕ್ತಿ. ಉತ್ತಮ ಜ್ಞಾನವಿದ್ದವರು ಅದ್ಬುತ ಸಾಧನೆಗಳನ್ನು ಮಾಡಬಹುದು. ಜ್ಞಾನಕ್ಕೆ ಮುಖ್ಯ ಪುಸ್ತಕಗಳ ಓದು, ಉತ್ತಮರ ಸಹವಾಸ ಮಾಡಿ ಉತ್ತಮ ಜ್ಞಾನ ಸಂಪಾದನೆ ಮಾಡಬೇಕು ಎಂದರು.
ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷರಾದ ನಾಗರತ್ನಮ್ಮ ಮಾತನಾಡಿ, ಇಂದು ಶಿಕ್ಷಣ ಕ್ಷೇತ್ರ ವಿಫುಲವಾಗಿ ಬೆಳೆದಿದ್ದು, ಅಗಾಧ ಅವಕಾಶಗಳಿವೆ, ಆದರೆ ಈ ಹಿಂದೆ ಹೆಣ್ಣು ಮಕ್ಕಳು ಅವಕಾಶದಿಂದ ವಂಚಿತರಾಗುತ್ತಿದ್ದರು ಅವರಿಗೆ ಸೂಕ್ತ ಶಿಕ್ಷಣ ದೊರೆಯುತ್ತಿರಲಿಲ್ಲ, ದೌರ್ಜನ್ಯಕ್ಕೊಳಗಾಗುತ್ತಿದ್ದರು, ಆದರೆ ಇಂದು ಪರಿಸ್ಥಿತಿ ಬದಲಾಗಿದೆ ಹೆಣ್ಣುಮಕ್ಕಳು ಬಲಶಾಲಿಗಳು ಎಂದು ನಿರೂಪಿಸುತ್ತಿದ್ದಾರೆ ಎಂದು ಹೇಳಿದರು.ಡಯಟ್‌ನ ಹಿರಿಯ ಉಪನ್ಯಾಸಕರಾದ ಕೆ.ಪಿ.ಬಾಬು ಅವರು ಉಪನ್ಯಾಸ ನೀಡಿದರು. ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರಾದ ಕೆ. ಕೆಂಪಯ್ಯ, ಕ್ಷೇತ್ರ ಶಿಕ್ಷಣಾಧಿಕಾರಿ ಸೋಮಲಿಂಗಯ್ಯ , ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜಿಲ್ಲಾ ನಿರೂಪಣಾಧಿಕಾರಿ ಡಾ. ಲಕ್ಷ್ಮೀದೇವಿ ಮಾತನಾಡಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ದಿನೇಶ್, ಜಿಲ್ಲಾ ವಕೀಲರ ಸಂಘದ ಉಪಾಧ್ಯಕ್ಷರಾದ ಜಯರಾಂ, ಕಾರ್ಯದರ್ಶಿ ಚಂದ್ರಶೇಖರ್, ಜಾಲಮಂಗಲ ಗ್ರಾಪಂ ಪಿಡಿಒ ಲತಾ, ಜಾಲಮಂಗಲ ಕಾಲೇಜು ಅಭಿವೃಧ್ಧಿ ಸಮಿತಿ ಅಧ್ಯಕ್ಷರಾದ ಶಿವನಂಜಯ್ಯ, ಜಾಲಮಂಗಲದ ಸರ್ಕಾರಿ ಪ್ರೌಢಶಾಲೆಯ ಎಸ್‌ಡಿಎಂಸಿ ಅಧ್ಯಕ್ಷರಾದ ಸುರೇಶ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷರಾದ ದಿನೇಶ್, ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಚೆನ್ನವೀರಯ್ಯ, ಸರ್ಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಚಂದ್ರಯ್ಯ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯಶಿಕ್ಷಕ ತಮ್ಮಣ್ಣ ಉಪಸ್ಥಿತರಿದ್ದರು.14ಕೆಆರ್ ಎಂಎನ್ 2.ಜೆಪಿಜಿ
ರಾಮನಗರ ತಾಲೂಕಿನ ಜಾಲಮಂಗಲದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ನಾಡಪ್ರಭು ಶ್ರೀ ಮಾಗಡಿ ಕೆಂಪೇಗೌಡರ ರಂಗಮಂದಿರದಲ್ಲಿ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ ಕಾರ್ಯಕ್ರಮವನ್ನು ಅತಿಥಿಗಳು ಉದ್ಘಾಟಿಸಿದರು.