ಕೊಪ್ಪಳ: ಮುಟ್ಟು ಎನ್ನುವುದು ಹೆಣ್ಣಿನ ಸಹಜ ಪ್ರಕ್ರಿಯೆಯಾಗಿದ್ದು, ಇದರ ಬಗ್ಗೆ ಯಾವುದೇ ಸಂಕೋಚ ಹೊಂದುವ ಅಗತ್ಯವಿಲ್ಲ. ಪ್ರತಿಯೊಬ್ಬ ಹೆಣ್ಣು ಮಗು ಸ್ವಚ್ಛತೆಯ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು ಎಂದು ಇನ್ನರ್ ವೀಲ್ ಕ್ಲಬ್‌ ಅಧ್ಯಕ್ಷರಾದ ಮಧು ಶೆಟ್ಟರ್‌ ಹೇಳಿದರು. ನಗರದ ಇನ್ನರ್ ವೀಲ್ ಕ್ಲಬ್ ವತಿಯಿಂದ ಕಾಟ್ರಳ್ಳಿಯ ಶ್ರೀ ಗವಿಸಿದ್ದೇಶ್ವರ ಗುರುಕುಲ ವಿದ್ಯಾರ್ಥಿನಿಯರ ಪದವಿಪೂರ್ವ ವಸತಿ ಕಾಲೇಜಿನಲ್ಲಿ ಆರು ಸ್ಯಾನಿಟರಿ ಪ್ಯಾಡ್ ಇನ್ಸಿನರೇಟರ್ (ಬರ್ನಿಂಗ್) ಯಂತ್ರಗಳನ್ನು ಅಳವಡಿಸಿದ ಅವರು ಜಾಗೃತಿ ಮೂಡಿಸಿ ಮಾತನಾಡಿದರು. ವಿದ್ಯಾರ್ಥಿನಿಯರು ಉತ್ತಮವಾಗಿ ವಿದ್ಯಾಭ್ಯಾಸ ಮಾಡಿ ಉತ್ತಮ ಫಲಿತಾಂಶ ಪಡೆಯಬೇಕು ಹಾಗೂ ತಮ್ಮ ತಂದೆ-ತಾಯಿಗಳಿಗೆ ಹೆಮ್ಮೆಯ ಮಕ್ಕಳಾಗಬೇಕು ಎಂದು ಹೇಳಿದರು.

ಯಂತ್ರಗಳನ್ನು ಸಂಸ್ಥೆಯ ದಾನಿಗಳಾದ ಮಧು ಶೆಟ್ಟರ್, ಸುವರ್ಣಾ ಶೆಟ್ಟರ್, ಪ್ರತಿಭಾ ಹಿರೇಮಠ, ವಿದ್ಯಾ ಶರಣಪ್ಪ ಸಜ್ಜನ, ಪಾಷಾ ಕಾಟನ್ ಹಾಗೂ ಸುಶೀಲಾ ಹತ್ತಿ ಕೊಡುಗೆಯಾಗಿ ನೀಡಿದರು.

ಭಾರತಿ ಗುಡ್ಲಾನೂರ್ ಮಾತನಾಡಿ ವಿದ್ಯಾರ್ಥಿನಿಯರ ಆರೋಗ್ಯ, ಸ್ವಚ್ಛತೆ, ಸುರಕ್ಷತೆ ಹಾಗೂ ಶಿಸ್ತುಬದ್ಧ ವಾತಾವರಣವನ್ನು ಉತ್ತೇಜಿಸುವ ಉದ್ದೇಶದಿಂದ ಈ ಯಂತ್ರಗಳನ್ನು ಅಳವಡಿಸಲಾಗಿದೆ ಎಂದು ಹೇಳಿದರು. ಯಂತ್ರಗಳ ಉಪಯೋಗದ ಬಗ್ಗೆ ಮಾಹಿತಿ ನೀಡಿ, ಮುಟ್ಟಿನ ಆರೋಗ್ಯ, ಸ್ವಚ್ಛತೆ ಹಾಗೂ ಅದರ ಮಹತ್ವದ ಕುರಿತು ಅರಿವು ಮೂಡಿಸಿದರು.

ಒಟ್ಟು ₹62 ಸಾವಿರ ವೆಚ್ಚದಲ್ಲಿ ಅಳವಡಿಸಲಾದ ಈ ಯಂತ್ರಗಳು ಬಳಸಿದ ಸ್ಯಾನಿಟರಿ ಪ್ಯಾಡ್‌ಗಳ ಸುರಕ್ಷಿತ ಹಾಗೂ ಪರಿಸರಸ್ನೇಹಿ ವಿಲೇವಾರಿಗೆ ಸಹಕಾರಿಯಾಗಿದ್ದು, ವಿದ್ಯಾರ್ಥಿನಿಯರ ಉತ್ತಮ ಆರೋಗ್ಯ ಮತ್ತು ಶುಚಿತ್ವ ಖಚಿತಪಡಿಸುತ್ತವೆ ಎಂದರು.

ಕಾರ್ಯಕ್ರಮದಲ್ಲಿ ಡಾ. ರಾಧಾ ಕುಲಕರ್ಣಿ, ಸುಮಂಗಲಾ ಹಂಚಿನಾಳ, ಕೋಮಲಾ ಕುದುರಿಮೋತಿ, ಇನ್ನರ್ ವೀಲ್ ಸಂಸ್ಥೆಯ ಮಾಜಿ ಅಧ್ಯಕ್ಷರು, ಪದಾಧಿಕಾರಿಗಳು, ಸದಸ್ಯರು, ದಾನಿಗಳು ಹಾಗೂ ಗಣ್ಯರು ಉಪಸ್ಥಿತರಿದ್ದರು.