ಸಾರಾಂಶ
ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ
ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿಗೆ ಆಗ್ರಹಿಸಿ ಶನಿವಾರ ಕೂಡಲಸಂಗಮದ ಬಸವ ಜಯಮೃತ್ಯುಂಜಯ ಶ್ರೀಗಳ ನೇತೃತ್ವದಲ್ಲಿ ಶಾಸಕರ ನಿವಾಸದ ವರೆಗೆ ಬೃಹತ್ ಮೆರವಣಿಗೆ, ಪಾದಯಾತ್ರೆ ಕೈಗೊಂಡು "ಪಂಚಮಸಾಲಿ ಆಗ್ರಹ ಪತ್ರ " ನೀಡಲಾಯಿತು.ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಮೀಸಲಾತಿ ಚಳುವಳಿಯ ಸ್ವಾಗತ ಸಮಿತಿ, ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಮಹಾಸಭಾ, ಪಂಚಸೇನೆ, ಯುವ ಘಟಕ, ಮಹಿಳಾ ಘಟಕ, ವಿದ್ಯಾರ್ಥಿ ಪರಿಷತ್, ಕಾನೂನು ಘಟಕ, ರೈತ ಘಟಕದ ಆಶ್ರಯದಲ್ಲಿ ಇಲ್ಲಿನ ಸಿದ್ಧಾರೂಢ ಸ್ವಾಮಿ ಮಠದಿಂದ ಆರಂಭವಾದ ಪಾದಯಾತ್ರೆ ಹಾಗೂ ಮೆರವಣಿಗೆಯು ಪ್ರತಿಪಕ್ಷದ ಉಪನಾಯಕ, ಶಾಸಕ ಅರವಿಂದ ಬೆಲ್ಲದ ಹಾಗೂ ಎಂ.ಆರ್. ಪಾಟೀಲ ಮನೆಯ ವರೆಗೆ ನಡೆಸಲಾಯಿತು.
ಈ ಸಂದರ್ಭದಲ್ಲಿ ಶಾಸಕರಿಗೆ ಪಂಚಮಸಾಲಿ ಆಗ್ರಹ ಪತ್ರ ವಿತರಿಸಿ ಮಾತನಾಡಿದ ಪಂಚಮಸಾಲಿ ಶ್ರೀಗಳು, ಕೃಷಿ ಆಧಾರಿತ ಹಾಗೂ ಕೃಷಿ ಒಕ್ಕಲಿಗ ಕಾರ್ಮಿಕರಾಗಿರುವ ಲಿಂಗಾಯತ ಪಂಚಮಸಾಲಿ ಮಲೆಗೌಡ- ಗೌಡ ಲಿಂಗಾಯತ ದೀಕ್ಷ ಲಿಂಗಾಯತ ಮಕ್ಕಳಿಗೆ ಶೈಕ್ಷಣಿಕ, ಉದ್ಯೋಗದಲ್ಲಿ 2ಎ ಮೀಸಲಾತಿ ಹಾಗೂ ಲಿಂಗಾಯತ ಎಲ್ಲ ಉಪ ಸಮಾಜಗಳಿಗೂ ಓಬಿಸಿ ಮೀಸಲಾತಿಗಾಗಿ ಒತ್ತಾಯಿಸಿ ಪಾದಯಾತ್ರೆ ಮಾಡಿ ದೇಶದ ಗಮನ ಸೆಳೆಯಲಾಗಿದೆ. 2021ರ ಜನವರಿ 14 ರಿಂದ ಆರಂಭವಾದ ಈ ಚಳುವಳಿಯು ನಿರಂತರವಾಗಿ 3 ವರ್ಷಗಳ ಕಾಲ ನಡೆದುಕೊಂಡು ಬಂದಿದೆ ಎಂದರು.ರಾಜ್ಯ ಸರ್ಕಾರದ ಮುಂಗಾರು ಅಧಿವೇಶನದಲ್ಲಿ ಪಕ್ಷಾತೀತವಾಗಿ ನಮ್ಮ ಸಮಾಜದ ಪರವಾಗಿ, ಎಲ್ಲ ಲಿಂಗಾಯತ ಒಳ ಪಂಗಡಗಳ ಓಬಿಸಿ ಮೀಸಲಾತಿಗಾಗಿ ಶಾಸಕರು ಧ್ವನಿ ಎತ್ತುವ ಮೂಲಕ ಸಮಾಜ ಬಾಂಧವರಿಗೆ ನ್ಯಾಯ ಕಲ್ಪಿಸಲು ಆದ್ಯತೆ ನೀಡಬೇಕು. ತ್ವರಿತಗತಿಯಲ್ಲಿ ಜಾರಿಗೆ ಕ್ರಮ ಕೈಗೊಳ್ಳದೇ ಇದ್ದಲ್ಲಿ ಮುಂಬರುವ ಡಿಸೆಂಬರ್ ತಿಂಗಳಲ್ಲಿ ಬೆಳಗಾವಿಯಲ್ಲಿ ನಡೆಯುವ ಚಳಿಗಾಲದ ಅಧಿವೇಶನಕ್ಕೆ ಸಮಾಜದ ಲಕ್ಷಾಂತರ ಬಾಂಧವರ ನೇತೃತ್ವದಲ್ಲಿ ಮುತ್ತಿಗೆ ಹಾಕುವುದಾಗಿ ಎಚ್ಚರಿಕೆ ನೀಡಿದರು.
ಈ ವೇಳೆ ಸಮಾಜದ ಜಿಲ್ಲಾಧ್ಯಕ್ಷ ಲಿಂಗಣ್ಣ ಕರಿಕಟ್ಟಿ, ಶಶಿಧರ ಡಂಗನವರ, ನಾಗರಾಜ ದೇಶಪಾಂಡೆ, ಮಲ್ಲಣ್ಣ ಮರಡಿ, ಬಸವರಾಜ ನವಲಿ, ರವಿ ಬಂಕದ, ದೀಪಾ ಗೌರಿ, ಸಂಗೀತಾ, ರುದ್ರಗೌಡ, ಪ್ರದೀಪ ಪಾಟೀಲ, ಎಲ್.ಬಿ. ಪಾಟೀಲ, ಮಹದೇವಪ್ಪ ಹೊನ್ನಳ್ಳಿ, ಮೈಲಾರಿ ಧಾರವಾಡ ಸೇರಿದಂತೆ ಹಲವರಿದ್ದರು.ಸದನದಲ್ಲಿ ಚರ್ಚಿಸುವೆ: ಬೆಲ್ಲದಮನವಿ ಸ್ವೀಕರಿಸಿದ ಶಾಸಕ, ಪ್ರತಿಪಕ್ಷದ ಉಪನಾಯಕ ಅರವಿಂದ ಬೆಲ್ಲದ ಮಾತನಾಡಿ, ದೇವರಾಜ ಅರಸು ಅವರು ಲಿಂಗಾಯತರ ಭೂಮಿಯನ್ನೂ ಕಸಿದುಕೊಂಡರು. ಮೀಸಲಾತಿಯಲ್ಲಿಯೂ ಅನ್ಯಾಯ ಮಾಡಿದರು. ಅರಸು ಅವರನ್ನು ದೊಡ್ಡ ಸುಧಾರಕರು ಎನ್ನುತ್ತಾರೆ. ಆದರೆ, ಅವರಿಂದ ಲಿಂಗಾಯತರಿಗೆ ಅನ್ಯಾಯವಾಗಿದೆ ಎಂದು ಆರೋಪಿಸಿದರು.
ಕೋರ್ಟ್‌ನಲ್ಲಿ ಇದರ ವಿರುದ್ಧ ಅರ್ಜಿ ಸಲ್ಲಿಸಲಾಗಿದೆ. ಆದರೆ, ಸರ್ಕಾರ ನಿಮ್ಮ ನಿಲುವೇನು ಎನ್ನುವುದು ಸ್ಪಷ್ಟಪಡಿಸಬೇಕು. ನಾವೆಲ್ಲ ಒಗ್ಗಟ್ಟಿನಿಂದ ಹೋರಾಟ ಮಾಡಬೇಕು. ಈಗಾಗಲೇ ಅಧಿವೇಶನದಲ್ಲಿ ಪ್ರಶ್ನೆಯನ್ನು ಕೇಳಿದ್ದೇನೆ. ಆ ಕುರಿತು ಅಧಿವೇಶನದಲ್ಲಿ ಮತ್ತೆ ಧ್ವನಿ ಎತ್ತಲಾಗುವುದು ಎಂದರು.ನ್ಯಾಯ ಕೊಡಿಸಲು ಬದ್ಧ: ಪಾಟೀಲಶ್ರೀಗಳಿಂದ ಮನವಿ ಸ್ವೀಕರಿಸಿದ ಶಾಸಕ ಎಂ.ಆರ್. ಪಾಟೀಲ ಮಾತನಾಡಿ, ಪಂಚಮಸಾಲಿ ಸಮಾಜ ಬಾಂಧವರಿಗೆ 2ಗೆ ಸೇರ್ಪಡೆಗೆ ಒತ್ತಾಯಿಸಿ ಈ ಹಿಂದೆ ಸದನದಲ್ಲಿಯೇ ಚರ್ಚಿಸಲಾಗಿದೆ. ಈ ಬಾರಿಯೂ ಸದನದಲ್ಲಿ ಸಮಾಜದ ಬಾಂಧವರಿಗೆ ನ್ಯಾಯ ಕೊಡಿಸಲು ಬೇಕಾದ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ತಿಳಿಸಿದರು.