ಸಾರಾಂಶ
ಹುಬ್ಬಳ್ಳಿ:
ಎಂಪ್ಲಾಯಿಸ್ ಪೆನ್ಶನ್ ಸ್ಟೀಮ್- 95 (ಇಪಿಎಸ್) ಅಡಿ ಬರುವ ಎಲ್ಲ ಪಿಂಚಣಿದಾರರಿಗೆ ಪ್ರತಿ ತಿಂಗಳು ₹ 7500 ಹಾಗೂ ಡಿಎ, ಆರೋಗ್ಯ ಪ್ರಯೋಜನ ನೀಡಬೇಕು ಎಂದು ಆಗ್ರಹಿಸಿ ಹಮ್ಮಿಕೊಂಡಿರುವ ಹೋರಾಟ ಇದೀಗ ತೀವ್ರ ಸ್ವರೂಪ ಪಡೆದುಕೊಂಡಿದೆ ಎಂದು ಇಪಿಎಸ್ 95 ರಾಷ್ಟ್ರೀಯ ಆಂದೋಲನ ಸಮಿತಿ (ಎನ್‌ಸಿ) ಅಧ್ಯಕ್ಷ ಕಮಾಂಡರ್ ಅಶೋಕ ರಾವುತ್ ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಧವೆಯರಿಗೆ ಶೇ. 100ರಷ್ಟು ಹಾಗೂ ಇಪಿಎಸ್ ಸದಸ್ಯರಲ್ಲದವರಿಗೆ ₹ 5 ಸಾವಿರ ಪಿಂಚಣಿ ನೀಡಬೇಕು. ಕೇಂದ್ರ ಸರ್ಕಾರ ಈ ಬೇಡಿಕೆಯನ್ನು ಕೂಡಲೇ ಈಡೇರಿಸಬೇಕು ಎಂದು ಆಗ್ರಹಿಸಿದರು.ಈ ಯೋಜನೆ ಅಡಿ ದೇಶದಲ್ಲಿ 78 ಲಕ್ಷ ಪಿಂಚಣಿದಾರರು ಬರುತ್ತಾರೆ. ಇವರೆಲ್ಲ ನಿವೃತ್ತಿಗೆ ಮೊದಲು 35- 40 ವರ್ಷ ಸೇವೆ ಸಲ್ಲಿಸಿ ದೇಶಕ್ಕೆ ಕೊಡುಗೆ ನೀಡಿದ್ದಾರೆ. ಸಾವಿರಾರು ಕೋಟಿ ರುಪಾಯಿ ಇದೇ ನೌಕರರ ಹಣ ಸರ್ಕಾರದ ಬಳಿ ಜಮಾ ಆಗಿದೆ. ಅದರಲ್ಲಿ ಒಂದು ಭಾಗ ನೀಡಿದರೂ ಪಿಂಚಣಿದಾರರು ನೆಮ್ಮದಿಯ ಬದುಕು ಸಾಗಿಸುತ್ತಾರೆ ಎಂದರು.
ಸೇವೆಯಲ್ಲಿದ್ದಾಗ ಲಕ್ಷಾಂತರ ರುಪಾಯಿ ಸಂಬಳ ಪಡೆಯುತ್ತಿದ್ದವರು ಇಂದು ಕೇವಲ ₹1162 ಪಿಂಚಣಿ ಪಡೆಯುತ್ತಿರುವುದು ಯಾವ ನ್ಯಾಯ? ಈ ಹಣ ಯಾವುದಕ್ಕೂ ಸಾಲುವುದಿಲ್ಲ. ಪಿಂಚಣಿದಾರರ ಸಾಮಾಜಿಕ ಗೌರವ ಕಾಪಾಡಬೇಕಿದೆ. ಇದಕ್ಕಾಗಿ ಹೋರಾಟ ತೀವ್ರಗೊಳಿಸಲಾಗಿದೆ ಎಂದರು.ರಾಜ್ಯದಲ್ಲಿ ವಿಭಾಗವಾರು ಸಭೆ ಆಯೋಜಿಸುವ ಮೂಲಕ ಸರ್ಕಾರದ ಗಮನ ಸೆಳೆಯಲಾಗುತ್ತಿದೆ. ಹುಬ್ಬಳ್ಳಿಯಲ್ಲಿಯೂ ಶನಿವಾರ ಸಭೆ ನಡೆಸಿ ಪಿಂಚಣಿದಾರರ ಸಮಸ್ಯೆ ಚಚಿರ್ಸಲಾಗಿದೆ. 1500ಕ್ಕೂ ಅಧಿಕ ಪಿಂಚಣಿದಾರರು ಪಾಲ್ಗೊಂಡಿದ್ದರು. ಮುಂದಿನ ದಿನಗಳಲ್ಲಿ ಕಲಬುರಗಿ ಸೇರಿ ವಿವಿಧ ವಿಭಾಗದಲ್ಲಿ ಸಭೆ ಮಾಡಿ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದರು.
ಸಂಘದ ರಾಷ್ಟ್ರೀಯ ಮುಖ್ಯ ಸಂಯೋಜಕ ರಮಾಕಾಂತ ನರಗುಂದ ಮಾತನಾಡಿ, ಪಿಂಚಣಿದಾರರ ಪೈಕಿ ಸರಿಯಾದ ಚಿಕಿತ್ಸೆ, ಪೌಷ್ಟಿಕ ಆಹಾರ ಸಿಗದೇ ಶೇ. 10ರಷ್ಟು ಜನರು ಪ್ರತಿ ವರ್ಷ ನಿಧನರಾಗುತ್ತಿದ್ದಾರೆ. ನಮ್ಮ ಸಮಸ್ಯೆ ಪರಿಹರಿಸುವಂತೆ ಜನಪ್ರತಿನಿಧಿಗಳು, ಸಂಸದರು, ಕೇಂದ್ರ ಸಚಿವರು ಸೇರಿದಂತೆ ಎಲ್ಲರಿಗೂ ತಿಳಿಸಿದ್ದೇವೆ. ಆದರೆ, ಈ ವರೆಗೂ ಯಾವುದೇ ಕ್ರಮವಾಗಿಲ್ಲ ಎಂದು ಆರೋಪಿಸಿದರು.ಈ ವೇಳೆ ಎನ್‌ಎಸಿ ಕರ್ನಾಟಕ ಅಧ್ಯಕ್ಷ ಜೆ.ಎಸ್.ಎಂ. ಸ್ವಾಮಿ, ಸಂಘಟನೆಯ ವೀರೇಂದ್ರಸಿಂಗ್, ಸವಿತಾ ಮಾರ್ಕಡೆ, ಶೋಭಾ ಸೇರಿದಂತೆ ಹಲವರಿದ್ದರು.