ಬಾಂಗ್ಲಾ ದೇಶದಲ್ಲಾಗುತ್ತಿರುವ ಹಿಂದೂಗಳ ಮೇಲಿನ ದೌರ್ಜನ್ಯದ ಪರಿಣಾಮ ಭಾರತದಲ್ಲಿ ಇಸ್ಲಾಂ ಜಿಹಾದಿಗಳಿಗೆ ಕುಮ್ಮಕ್ಕು ಸಿಗುತ್ತಿದೆ. ಬಾಂಗ್ಲಾದಲ್ಲಿ ದೀಪು ಚಂದ್ರದಾಸ್ ಎಂಬಾತನನ್ನು ಕಂಬಕ್ಕೆ ಕಟ್ಟಿ ಸುಡುವುದು ಭಯಾನಕ ಅಲ್ಲವೇ? ಎಂದು ಪ್ರಮೋದ್ ಮುತಾಲಿಕ್ ಪ್ರಶ್ನಿಸಿದ್ದಾರೆ.
ಧಾರವಾಡ:ಬಾಂಗ್ಲಾ ದೇಶದಲ್ಲಿ ನಡೆಯುತ್ತಿರುವ ಹಿಂದೂಗಳ ಮೇಲಿನ ದೌರ್ಜನ್ಯಕ್ಕೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಕೂಡಲೇ ಪ್ರತ್ಯುತ್ತರ ನೀಡಬೇಕು. ಈ ವಿಷಯದಲ್ಲಿ ಸರ್ಕಾರ ಮೌನವಾಗಿದ್ದು, ಹಿಂದೂಗಳ ಸಾವಿಗೆ ಕಾರಣವಾಗುವುದು ಮಾತ್ರವಲ್ಲದೇ ಇಸ್ಲಾಂ ಜಿಹಾದಿಗಳಿಗೆ ಕುಮ್ಮಕ್ಕು ನೀಡಿದಂತಾಗಿದೆ ಎಂದು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ್ ಹೇಳಿದರು.
ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರದಲ್ಲಿ ಇರುವುದು ಇಂದಿರಾ ಗಾಂಧಿ, ಮನಮೋಹನ ಸಿಂಗ್, ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಭಾರತವಲ್ಲ. 56 ಇಂಚು ಎದೆಯುಳ್ಳ ನರೇಂದ್ರ ಮೋದಿ ಭಾರತ. ಬಾಂಗ್ಲಾ ದೇಶದಲ್ಲಿ ಹಿಂದೂಗಳ ಮೆಲೆ ಆಗುವ ದೌರ್ಜನ್ಯ, ಕ್ರೌರ್ಯ ನಾವು ಸಹಿಸುತ್ತಿಲ್ಲ. ಕೇಂದ್ರ ಸರ್ಕಾರ ಈ ವಿಚಾರವಾಗಿ ಮೌನವಾಗಿರುವುದು ಶೋಭೆ ತರುವುದಿಲ್ಲ. ಬಾಂಗ್ಲಾ ದೇಶಕ್ಕೆ ಸರಿಯಾದ ಉತ್ತರ ನೀಡಬೇಕು ಎಂಬುದು ನೂರು ಕೋಟಿ ಹಿಂದೂಗಳ ಆಗ್ರಹವಾಗಿದೆ ಎಂದರು.ಬಾಂಗ್ಲಾ ದೇಶಕ್ಕೆ 1971ರ ಯುದ್ಧವನ್ನು ಒಂದು ಬಾರಿ ನೆನಪು ಮಾಡಿ ಕೊಡಬೇಕಿದೆ. ಬಾಂಗ್ಲಾ ಪರವಾಗಿ ಯುದ್ಧ ಮಾಡಿ ಭಾರತವು ಸ್ವಾಂತಂತ್ರ್ಯ ತಂದುಕೊಟ್ಟಿರುವುದನ್ನು ಮರೆಯಬಾರದು ಎಂದರು.ಪಾಕಿಗೆ ನೈತಿಕತೆ ಇಲ್ಲ:
ಹಿಂದೂಗಳ ರಕ್ಷಣೆ ಮಾಡದ ಪಾಕಿಸ್ತಾನ ಭಾರತದ ಮುಸ್ಲಿಂರ ಬಗ್ಗೆ ಮಾತನಾಡಲು ಯಾವುದೇ ನೈತಿಕತೆ ಹೊಂದಿಲ್ಲ. 78 ವರ್ಷದಲ್ಲಿ ಎಷ್ಟು ಹಿಂದೂಗಳನ್ನು ಕೊಲೆ ಮಾಡಿದ್ದೀರಿ, ಮತಾಂತರ ಮಾಡಿದ್ದೀರಿ, ಸುಟ್ಟು ಹಾಕಿದ್ದೀರಿ, ದೇವಸ್ಥಾನ ಒಡೆದು ಹಾಕಿದ್ದೀರಿ. ಭಾರತದಲ್ಲಿರುವ ಮುಸ್ಲಿಂರಷ್ಟು ಸುರಕ್ಷಿತ ಯಾವ ಮುಸ್ಲಿಂ ರಾಷ್ಟ್ರದಲ್ಲೂ ಇಲ್ಲ. ಆಹಾರ, ಆರೋಗ್ಯ, ವಸತಿ ಎಲ್ಲವೂ ಅವರಿಗಿದೆ. ಭವಿಷ್ಯದಲ್ಲಿ ಹೇಗೆ ಬದುಕಬೇಕು ಎಂಬುದನ್ನು ಮೊದಲು ಪಾಕಿಸ್ತಾನ ಕಲಿಯಬೇಕು ಎಂದು ಟಾಂಗ್ ನೀಡಿದರು. ಎಲ್ಲೆಡೆ ತೆರವಾಗಲಿ:ರಾಜ್ಯದ ವಿವಿಧ ಪ್ರದೇಶದಲ್ಲಿ ಬಾಂಗ್ಲಾ, ರೋಹಿಂಗ್ಯಾ ಹಾಗೂ ಪಾಕಿಸ್ತಾನದ ಅಕ್ರಮ ಮುಸ್ಲಿಂ ವಲಸಿಗರಿದ್ದಾರೆ. ಕೋಗಿಲು ಬಡಾವಣೆ ತೆರವಿಗೆ ಸಚಿವ ಜಮೀರ್ ಅಹಮ್ಮದ್ ಕಣ್ಣೀರು ಸುರಿಸುತ್ತಿದ್ದು, ಅವರ ಕ್ಷೇತ್ರದಲ್ಲಿಯೇ 25 ಸಾವಿರ ಬಾಂಗ್ಲಾ ಮುಸ್ಲಿಂರು ವಾಸಿಸಲು ಸರ್ಕಾರವೇ ಜಾಗ ನೀಡಿದೆ. ಅಲ್ಲದೇ ವಿವಿಧೆಡೆ ಗುಡಿಸಲು ಕಟ್ಟಿ ವಾಸ ಮಾಡುತ್ತಿದ್ದಾರೆ. ಅನಧಿಕೃತ, ಕಾನೂನು ಬಾಹಿರವಾಗಿ ಗೋಮಾಳ, ಸರ್ಕಾರ ಜಾಗದಲ್ಲಿ ಮನೆ ನಿರ್ಮಿಸಿದ್ದಾರೆ. ಮುಖ್ಯಮಂತ್ರಿಗಳು ಅವರನ್ನು ಸಹ ತೆರವುಗೊಳಿಸಬೇಕು ಎಂದು ಮುತಾಲಿಕ್ ಆಗ್ರಹಿಸಿದರು.