ನಾಟಿಕೋಳಿಗೆ ₹600 ಪರಿಹಾರ ನೀಡಿ

| Published : Mar 03 2025, 01:47 AM IST

ಸಾರಾಂಶ

ರಾಜ್ಯದಲ್ಲಿ ಕಳೆದ ವಾರ ಹಕ್ಕಿಜ್ವರದಿಂದ ಸಾವಿರಾರು ಕೋಳಿಗಳು ಸಾವಿಗೀಡಾಗಿವೆ. ಹಕ್ಕಿಜ್ವರ ಬಾಧೆಗೆ ಸತ್ತ ಕೋಳಿಗೆ ರಾಜ್ಯ ಸರ್ಕಾರ 1 ಕೆಜಿಗೆ ₹600 ಪರಿಹಾರ ನೀಡಬೇಕು ಎಂದು ಬಿಜೆಪಿ ಜಿಲ್ಲಾ ವಕ್ತಾರ, ಹಿರಿಯ ರೈತ ಹೋರಾಟಗಾರ ಬಿ.ಎಂ.ಸತೀಶ ಕೊಳೇನಹಳ್ಳಿ ಒತ್ತಾಯಿಸಿದ್ದಾರೆ.

- ಹಕ್ಕಿಜ್ವರ ಹೆಚ್ಚಾದರೆ ಸಿಎಂಗೆ ಒಂದೂ ನಾಟಿಕೋಳಿ ಸಿಗೋದಿಲ್ಲ: ಬಿ.ಎಂ.ಸತೀಶ

- - - ಕನ್ನಡಪ್ರಭ ವಾರ್ತೆ ದಾವಣಗೆರೆ

ರಾಜ್ಯದಲ್ಲಿ ಕಳೆದ ವಾರ ಹಕ್ಕಿಜ್ವರದಿಂದ ಸಾವಿರಾರು ಕೋಳಿಗಳು ಸಾವಿಗೀಡಾಗಿವೆ. ಹಕ್ಕಿಜ್ವರ ಬಾಧೆಗೆ ಸತ್ತ ಕೋಳಿಗೆ ರಾಜ್ಯ ಸರ್ಕಾರ 1 ಕೆಜಿಗೆ ₹600 ಪರಿಹಾರ ನೀಡಬೇಕು ಎಂದು ಬಿಜೆಪಿ ಜಿಲ್ಲಾ ವಕ್ತಾರ, ಹಿರಿಯ ರೈತ ಹೋರಾಟಗಾರ ಬಿ.ಎಂ.ಸತೀಶ ಕೊಳೇನಹಳ್ಳಿ ಒತ್ತಾಯಿಸಿದ್ದಾರೆ.

ಹಳ್ಳಿಗಳಲ್ಲಿ ಸಣ್ಣಪುಟ್ಟ ರೈತರು, ಬಡವರು, ಕೃಷಿ ಕೂಲಿಗಾರರು ಕುಟುಂಬದ ದೈನಂದಿನ ಖರ್ಚಿಗಾಗಿ ನಾಟಿ ಕೋಳಿ ಸಾಕುತ್ತಿದ್ದಾರೆ. ಹಕ್ಕಿಜ್ವರದ ಬಾಧೆಯಿಂದಾಗಿ ನಾಟಿಕೋಳಿ ಸಾಕಾಣಿಕೆದಾರರು ಕಂಗಾಲಾಗಿದ್ದಾರೆ. ಸಾವಿರಾರು ಕೋಳಿಗಳು ಸಾಯುತ್ತಿದ್ದರೂ, ಎಚ್ಚೆತ್ತುಕೊಳ್ಳದ ರಾಜ್ಯ ಸರ್ಕಾರವು 1 ನಾಟಿಕೋಳಿಗೆ ₹90 ಮಾತ್ರ ಪರಿಹಾರ ಘೋಷಿಸಿದೆ. ಇದು ಅತ್ಯಲ್ಪವಾಗಿದೆ. ನಾಟಿಕೋಳಿ ಸಾರು- ಮುದ್ದಿ ಊಟದ ಪ್ರಿಯರಾದ ಸಿಎಂ ಸಿದ್ದರಾಮಯ್ಯ ಕನಿಷ್ಠ 1 ಕೆಜಿ ತೂಕದ ನಾಟಿಕೋಳಿಗೆ ₹600 ಪರಿಹಾರ ನೀಡಲಿ ಎಂದಿದ್ದಾರೆ.

ವಾರದಿಂದಲೂ ಚಿಕ್ಕಬುಳ್ಳಾಪುರ, ಬಳ್ಳಾರಿ, ರಾಯಚೂರು ಇತರೆ ಕೆಲ ಜಿಲ್ಲೆಗಳಲ್ಲಿ ಹಕ್ಕಿಜ್ವರದಿಂದ ಸಾವಿರಾರು ಕೋಳಿಗಳು ಸಾವನ್ನಪ್ಪುತ್ತಿವೆ. ಕಾಂಗ್ರೆಸ್ ಸರ್ಕಾರ ತಕ್ಷಣ ಎಚ್ಚೆತ್ತುಕೊಳ್ಳದೇ ನಿದ್ದೆ ಮಾಡುತ್ತಿದೆ. ಹಕ್ಕಿಜ್ವರ ಕಾಣಿಸಿಕೊಂಡ ಹಳ್ಳಿಗಳಲ್ಲಿ ಊರಿನ ಎಲ್ಲ ಕೋಳಿಗಳನ್ನು ಹಿಡಿದು ಕೊಂದು, ಗುಂಡಿ ತೋಡಿ ಹೂಳಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಸರ್ಕಾರ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಹಕ್ಕಿಜ್ವರದಿಂದ ಬಳಲುತ್ತಿರುವ ಕೋಳಿಗಳ ಮಾದರಿಗಳನ್ನು ಭೋಪಾಲ್‌ನಲ್ಲಿರುವ ರಾಷ್ಟ್ರೀಯ ಉನ್ನತ ಭದ್ರತಾ ಪ್ರಾಣಿ ರೋಗಗಳ ಸಂಸ್ಥೆಗೆ ಪರೀಕ್ಷೆಗೆ ರವಾನಿಸಿ, ವರದಿ ತರಿಸಿಕೊಳ್ಳಬೇಕು. ರೋಗ ನಿಯಂತ್ರಣಕ್ಕೆ ಸಮಾರೋಪಾದಿಯಲ್ಲಿ ಕ್ರಮ ಕೈಗೊಳ್ಳಬೇಕು. ಈ ಬಗ್ಗೆ ಉದಾಸೀನ ಮಾಡಿದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಊಟ ಮಾಡಲು ಒಂದು ನಾಟಿ ಕೋಳಿ ಸಹ ಉಳಿಯಂತಹ ಸ್ಧಿತಿ ಬಂದೀತು ಎಂದು ಎಚ್ಚರಿಸಿದ್ದಾರೆ.

- - -

ಬಾಕ್ಸ್‌ * ಕೇವಲ ₹90 ದರ ನಿಗದಿ ಅವೈಜ್ಞಾನಿಕಹಳ್ಳಿಗಳಲ್ಲಿ ಸಾಕಿರುವ ನಾಟಿ ಕೋಳಿಗಳನ್ನು ತೂಕದ ಲೆಕ್ಕದಲ್ಲಿ ಮಾರಾಟ ಮಾಡುತ್ತಾರೆ. ಪ್ರಸ್ತುತ 1 ಕೆಜಿ ನಾಟಿಕೋಳಿಗೆ ₹600 ರವರೆಗೆ ದರ ಇದೆ. 3ರಿಂದ 4 ಕೆಜಿ ತೂಕದ ಕೋಳಿಗೆ ₹2 ಸಾವಿರದಿಂದ ₹3 ಸಾವಿರವರೆಗೂ ಮಾರಾಟವಾಗುತ್ತವೆ. ಕೆಲವು ಜೂಜಿನ ನಾಟಿ ಹುಂಜಗಳಿಗೆ ₹1 ಲಕ್ಷವರೆಗೂ ಬೆಲೆ ಇದೆ. ವಸ್ತುಸ್ಥಿತಿ ಹೀಗಿರುವಾಗ ರಾಜ್ಯ ಸರ್ಕಾರ 1 ಕೋಳಿಗೆ ಕೇವಲ ₹90 ದರ ಎಂದು ಪರಿಹಾರ ನಿಗದಿ ಮಾಡಿರುವುದು ಅತ್ಯಲ್ಪವಾಗಿದೆ. ಇಂತಹ ಪರಿಹಾರವು ಅವೈಜ್ಞಾನಿಕ ಮತ್ತು ಕೋಳಿ ಸಾಕುವ ಬಡವರಿಗೆ ಸರ್ಕಾರ ತೋರಿದ ವಿರೋಧ ನೀತಿಯಾಗಿದೆ ಎಂದು ಟೀಕಿಸಿದ್ದಾರೆ.

- - - -2ಕೆಡಿವಿಜಿ1.ಜೆಪಿಜಿ: ಬಿ.ಎಂ.ಸತೀಶ ಕೊಳೇನಹಳ್ಳಿ, ಜಿಲ್ಲಾ ವಕ್ತಾರ, ಬಿಜೆಪಿ