ಕ್ಷೇತ್ರಕ್ಕೆ ತಂದ ಅನುದಾನದ ಬಗ್ಗೆ ಲೆಕ್ಕ ಕೊಡಿ: ಮೂಡ್ನಾಕೂಡು ಪ್ರಕಾಶ್

| Published : Dec 28 2024, 12:47 AM IST

ಸಾರಾಂಶ

ಗುಂಡ್ಲುಪೇಟೆ ಕ್ಷೇತ್ರದ ಶಾಸಕರಾದ ಬಳಿಕ ವಿವಿಧ ಅಭಿವೃದ್ಧಿ ಕಾಮಗಾರಿಗೆ ಸರ್ಕಾರದಿಂದ ಎಷ್ಟು ಅನುದಾನವನ್ನು ತಾವು ತಂದಿದ್ದೀರಿ. ಈ ಬಗ್ಗೆ ಕ್ಷೇತ್ರದ ಜನರಿಗೆ ಲೆಕ್ಕ ಕೊಡಿ ಎಂದು ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮೂಡ್ನಾಕೂಡು ಪ್ರಕಾಶ್ ಶಾಸಕ ಗಣೇಶ್ ಪ್ರಸಾದ್ ಅವರನ್ನು ಟೀಕಿಸಿದರು. ಚಾಮರಾಜನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಗುಂಡ್ಲುಪೇಟೆ ಕ್ಷೇತ್ರದ ಶಾಸಕರಾದ ಬಳಿಕ ವಿವಿಧ ಅಭಿವೃದ್ಧಿ ಕಾಮಗಾರಿಗೆ ಸರ್ಕಾರದಿಂದ ಎಷ್ಟು ಅನುದಾನವನ್ನು ತಾವು ತಂದಿದ್ದೀರಿ. ಈ ಬಗ್ಗೆ ಕ್ಷೇತ್ರದ ಜನರಿಗೆ ಲೆಕ್ಕ ಕೊಡಿ ಎಂದು ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮೂಡ್ನಾಕೂಡು ಪ್ರಕಾಶ್ ಶಾಸಕ ಗಣೇಶ್ ಪ್ರಸಾದ್ ಅವರನ್ನು ಟೀಕಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಅವಧಿಯ ಸರ್ಕಾರದಲ್ಲಿ ಬಿಡುಗಡೆಯಾಗಿದ್ದ ಭರಪೂರ ಅನುದಾನದಲ್ಲಿ ಇನ್ನು ಸಹ ಗುದ್ದಲಿಪೂಜೆ, ಉದ್ಘಾಟನೆ ಮಾಡುವ ಮೂಲಕ ತಮ್ಮ ಶಾಸಕರ ಗೌರವ ಉಳಿಕೊಂಡಿದ್ದೀರಿ ಎಂದರು. ಇತ್ತೀಚೆಗೆ ಶಾಸಕ ಗಣೇಶ್‌ಪ್ರಸಾದ್ ಅವರು ಮಾಜಿ ಶಾಸಕರ ವಿರುದ್ಧ ಇಲ್ಲಸಲ್ಲದ ಹೇಳಿಕೆ ನೀಡಿ, ಬಿಟ್ಟಿ ಪ್ರಚಾರಕ್ಕಾಗಿ ನನ್ನ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ ಎಂಬ ಹೇಳಿಕೆ ಬಾಲಿಶವಾಗಿದ್ದು, ತಾವೇ ಹೇಳಿದಂತೆ ಈಗ ರಚನೆಯಾಗಿರುವ ನಿಮ್ಮ ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರದಲ್ಲಿ ಶಾಸಕರಿಗೆ ಕ್ಷೇತ್ರಾಭಿವೃದ್ಧಿಗೆ ಇನ್ನು ಸಹ ಒಂದು ನಯಾಪೈಸೆ ಬಿಡುಗಡೆ ಮಾಡಿಲ್ಲ. ಈ ಬಗ್ಗೆ ನೀವೆ ಒಪ್ಪಿಕೊಂಡಿದ್ದೀರಿ. ಇನ್ನು ಈಗ ತಾವು ಮಾಡುತ್ತಿರುವ ಉದ್ಘಾಟನೆ, ಹಾಗೂ ಗುದ್ದಲಿ ಪೂಜೆಗಳು ಯಾವ ಸರ್ಕಾರದ ಹಾಗೂ ಯಾರು ಶಾಸಕರಾಗಿದ್ದಾಗ ಬಿಡುಗಡೆಯಾಗಿದ್ದವು ಎಂಬ ಸತ್ಯ ಕ್ಷೇತ್ರದ ಜನರಿಗೆ ಹೇಳಿ ಎಂದರು.

ನಿರಂಜನ್‌ಕುಮಾರ್ ಅವರು ಶಾಸಕರಾಗಿದ್ದಾಗ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ದುಡಿದಿದ್ದಾರೆ. ಪರಿಶಿಷ್ಟ ಜಾತಿ ಪಂಗಡಗಳಿಗೆ ಎಸ್‌ಇಪಿ, ಟಿಎಸ್‌ಪಿ ಅನುದಾನದಲ್ಲಿ ಬಹಳಷ್ಟು ಬೀದಿಗಳು ಕ್ರಾಂಕೀಟ್ ರಸ್ತೆ, ಚರಂಡಿಗಳು ಆಗಿವೆ. ಅಲ್ಲದೇ ಸಾಮಾನ್ಯ ವರ್ಗದ ಬೀದಿಗಳ ಅಭಿವೃದ್ಧಿಗೆ ಅನುದಾನ ನೀಡಿ ಅಭಿವೃದ್ಧಿ ಪಡಿಸಿದ್ದೆ ನಮ್ಮ ಶಾಸಕರು. ಇದನ್ನು ಏಕೆ ನೀವು ಅರ್ಥ ಮಾಡಿಕೊಂಡಿಲ್ಲ. ಈಗ ಶಾಸಕರಾದ ಬಳಿಕ ನೀವು ಎಷ್ಟು ಅನುದಾನ ಕ್ಷೇತ್ರಕ್ಕೆ ತಂದಿದ್ದೀರಿ ಎಂಬ ಲೆಕ್ಕವನ್ನು ಕ್ಷೇತ್ರದ ಜನರಿಗೆ ನೀಡಿ ಎಂದರು. ಮಾಜಿ ಶಾಸಕ ಸಿ.ಎಸ್.ನಿರಂಜನಕುಮಾರ್ ಅವರು ನೂರಾರು ಕೋಟಿ ರು. ಅನುದಾನ ತಂದು ಕ್ಷೇತ್ರದಲ್ಲಿ ಅಭಿವೃದ್ಧಿ ಮಾಡಿದ್ದಾರೆ. ಅವರು ತಂದ ಅನುದಾನದಲ್ಲಿ ಈಗ ನೀವು ಭೂಮಿಪೂಜೆ ಉದ್ಘಾಟನೆಗಳನ್ನು ಮಾಡಲಾಗುತ್ತಿದೆ. ಈ ಹಿಂದೆ ನಿಮ್ಮ ಪಕ್ಷದ ಶಾಸಕರಾದ ಸಿ.ಪುಟ್ಟರಂಗಶೆಟ್ಟರೇ ಬಹಿರಂಗವಾಗಿ ಹೇಳಿಕೆ ನೀಡಿದ್ದರು. ಕ್ಷೇತ್ರ ವ್ಯಾಪ್ತಿಯಲ್ಲಿ ರಸ್ತೆ, ಭವನ, ಎಸ್‌ಇಪಿ, ಟಿಎಸ್‌ಪಿ ಅಲ್ಲದೇ, ಸಾಮಾನ್ಯ ವರ್ಗದವರಿಗೂ ಅನುದಾನ ತಂದಿದ್ದಾರೆ. ಮಾಜಿ ಸಚಿವ ದಿ.ಎಚ್.ಎಸ್.ಮಹದೇವಪ್ರಸಾದ್ ಅವರ ಅವಧಿಯಲ್ಲಿಯೂ ಆಗದ ಅಭಿವೃದ್ಧಿ ಗ್ರಾಮೀಣ ಭಾಗದ ಹಳ್ಳಿ ಹಳ್ಳಿಗಳಲ್ಲಿ ಆಗಿದೆ ಎಂದರು. ಗುಂಡ್ಲುಪೇಟೆ ತಾಲೂಕಿಗೆ 25 ಕೋಟಿ ರು.ಅನುದಾನ ನೀಡಿರುವುದು ನಿಮ್ಮ ಶ್ರಮವಲ್ಲ. ಶಾಸಕ ಯತೀಂದ್ರ ಸಿದ್ದರಾಮಯ್ಯ ಅವರ ಆಪ್ತರು ಅವರ ಲೆಟರ್‌ಹೆಟ್ ಮೂಲಕ ಹಣ ತಂದು ಕಾಮಗಾರಿ ಮಾಡುತ್ತಿದ್ದಾರೆ. ಇದರಲ್ಲಿ ನಿಮ್ಮ ಪಾತ್ರ ಏನು ಇಲ್ಲ. ನಮ್ಮದು ದಲಿತರ ಪಕ್ಷ ಹಾಗೂ ದಲಿತರ ಉದ್ಧಾರಕರು ಎಂದು ಬೊಬ್ಬೆ ಹೊಡೆಯುವ ನೀವು ತಾಲೂಕಿನ ಯಾವ ದಲಿತರಿಗೆ ಕಾಮಗಾರಿ ಕೊಟ್ಟಿದ್ದೀರಾ ಎಂಬುದನ್ನು ತಿಳಿಸಿ ಎಂದರು.

ಸಿದ್ದರಾಮಯ್ಯ ಸಂವಿಧಾನ ಶಿಲ್ಪಿಯೇ? ನರೇಂದ್ರಸ್ವಾಮಿ ಸ್ಪಷ್ಟಪಡಿಸಿ:

ಮಳವಳ್ಳಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಅವರು ಇತ್ತೀಚೆಗೆ ಯಾವುದೇ ಕಾರ್ಯಕ್ರಮದಲ್ಲಿ ನಮ್ಮದು ಸಿದ್ದರಾಮಯ್ಯ ಅವರ ತತ್ವ ಸಿದ್ದಾಂತವಾಗಿದೆ. ಅಲ್ಲಿ ಅಂಬೇಡ್ಕರ್ ತತ್ವ ಸಿದ್ದಾಂತ ಇದ್ದರೆ, ಕರ್ನಾಟಕದಲ್ಲಿ ಸಿದ್ದರಾಮಯ್ಯ ಅವರ ತತ್ವ ಸಿದ್ದಾಂತವೇ ಮುಖ್ಯ. ಅದನ್ನು ನಾವೆಲ್ಲರು ಪಾಲಿಸಬೇಕು. ನಮಗೆ ಸಿದ್ದರಾಮಯ್ಯ ಅವರೇ ನಾಯಕರು ಎಂಬರ್ಥದಲ್ಲಿ ಹೇಳಿ ಅಂಬೇಡ್ಕರ್ ಅವರಿಗೆ ಅಪಮಾನ ಮಾಡಿದ್ದೀರಿ. ಈ ಬಗ್ಗೆ ನರೇಂದ್ರ ಸ್ವಾಮಿ ಅವರು ಸ್ಪಷ್ಟವಾಗಿ ಸಂವಿಧಾನ ಬರೆದವರು ಯಾರು? ನಿಮ್ಮ ಸಿದ್ದರಾಮಯ್ಯ ಅವರೇ ಸಂವಿಧಾನ ಶಿಲ್ಪಿಯೇ ಎಂಬುದನ್ನು ದೇಶದ ಜನರ ಮುಂದೆ ಹೇಳಬೇಕೆಂದು ಮುಡ್ನಾಕೂಡು ಪ್ರಕಾಶ್ ಸವಾಲು ಹಾಕಿದರು. ಪತ್ರಿಕಾಗೋಷ್ಟಿಯಲ್ಲಿ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹೊನ್ನೂರು ಮಹದೇಸ್ವಾಮಿ, ಜಿಲ್ಲಾ ಮಾಧ್ಯಮ ವಕ್ತಾರ ಕಾಡಳ್ಳಿ ಕುಮಾರ್, ಎಸ್ಸಿ ಮೋರ್ಚಾ ಜಿಲ್ಲಾಧ್ಯಕ್ಷ ಮೂಡಳ್ಳಿ ಮೂರ್ತಿ, ಸಹ ವಕ್ತಾರ ರಾಮಸಮುದ್ರ ಶಿವಣ್ಣ ಹಾಜರಿದ್ದರು.