ಮಕ್ಕಳಿಗೆ ಭಜನಾ ಸಂಸ್ಕಾರ ನೀಡಿ: ನಾಡೋಜ ಡಾ.ಜಿ.ಶಂಕರ್

| Published : Apr 15 2024, 01:16 AM IST

ಸಾರಾಂಶ

ಕೋಡಿ ಕನ್ಯಾನದ ಮಹಾಸತೀಶ್ವರಿ ದೇಗುಲದ ವಠಾರದಲ್ಲಿ ಸ್ಥಳೀಯ ಪ್ರಗತಿ ಯುವಕ ಸಂಘದ ತ್ರೀಂಶತಿ ಮಹೋತ್ಸವ - ಪ್ರಗತಿ ಪಥ ಪ್ರಯುಕ್ತ ಭಜನೋತ್ಸವ ಕಾರ್ಯಕ್ರಮ ನಡೆಯಿತು. ನಾಡೋಜ ಡಾ. ಜಿ.ಶಂಕರ್ ಉದ್ಘಾಟಿಸಿದರು.

ಕನ್ನಡಪ್ರಭ ವಾರ್ತೆ ಕೋಟ

ಇಂದಿನ ಯುವ ಸಮುದಾಯಕ್ಕೆ ಸಂಸ್ಕಾರ ನೀಡುವ ಅಗತ್ಯ ಇದೆ. ಈ ನಿಟ್ಟಿನಲ್ಲಿ ಪ್ರತಿ ಮನೆಯಲ್ಲಿ ಭಜನೆಯ ಮೂಲಕ ಸಂಸ್ಕಾರ ನೀಡಿ ಎಂದು ನಾಡೋಜ ಡಾ. ಜಿ.ಶಂಕರ್ ಕರೆ ನೀಡಿದರು.

ಅವರು ಇಲ್ಲಿನ ಕೋಡಿ ಕನ್ಯಾನದ ಮಹಾಸತೀಶ್ವರಿ ದೇಗುಲದ ವಠಾರದಲ್ಲಿ ಸ್ಥಳೀಯ ಪ್ರಗತಿ ಯುವಕ ಸಂಘದ ತ್ರೀಂಶತಿ ಮಹೋತ್ಸವ - ಪ್ರಗತಿ ಪಥ ಪ್ರಯುಕ್ತ ಆಯೋಜಿಸಲಾದ ಭಜನೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಹಿಂದಿನ ಕಾಲದಲ್ಲಿ ಆರ್ಥಿಕ ಬಡತನವಿದ್ದರೂ, ಪ್ರತಿ ಮನೆಯಲ್ಲಿ ಭಜನೆಗೆ ಆದ್ಯತೆ ನೀಡುತ್ತಿದ್ದರು. ಆದ್ದರಿಂದಲೇ ಬದುಕಿನ ಕಷ್ಟಗಳಿಗೆ ಪರಿಹಾರ ದೊರೆಯುತ್ತಿತ್ತು. ಪ್ರಗತಿ ಸಂಘದವು ಭಜನಾ ಸಂಕೀರ್ತನೆಗೆ ಒತ್ತು ನೀಡಿರುವುದು ಶ್ಲಾಘನೀಯ ಎಂದು ಹಾರೈಸಿದರು.

ಈ ಸಂದರ್ಭ ಭಜನಾಕಾರರು, ಶನೀಶ್ವರ ಕಥಾ ಶ್ರವಣಕಾರರಾದ ಸಂಜೀವ ಪೂಜಾರಿ ಕೋಡಿ, ಚಂದ್ರಶೇಖರ್ ಅಮೀನ್, ಅಣ್ಣಪ್ಪ ಸಾಲಿಯಾನ್ ಅವರನ್ನು ಸನ್ಮಾನಿಸಲಾಯಿತು.

ಸಭೆಯ ಅಧ್ಯಕ್ಷತೆಯನ್ನು ಸಂಘ ಅಧ್ಯಕ್ಷ ಜಗನಾಥ್ ಅಮೀನ್ ವಹಿಸಿದ್ದರು. ಅಭ್ಯಾಗತರಾಗಿ ಕೋಟ ಅಮೃತೇಶ್ವರಿ ದೇಗುಲದ ಪೂರ್ವಾಧ್ಯಕ್ಷ ಆನಂದ್ ಸಿ. ಕುಂದರ್, ಮೊಗವೀರ ಯುವ ಸಂಘ ಜಿಲ್ಲಾಧ್ಯಕ್ಷ ಜಯಂತ್ ಅಮೀನ್, ಉದ್ಯಮಿ ನರಸಿಂಹ ಪೂಜಾರಿ, ಕಟೀಲು ಶ್ರೀ ದುರ್ಗಾಪರಮೇಶ್ವರಿ ಕಾಲೇಜಿನ ಪ್ರಾಂಶುಪಾಲ ಡಾ. ಕೆ. ಕೃಷ್ಣ ಕಾಂಚನ್, ಸಂಘದ ಪ್ರಮುಖರಾದ ಪ್ರಭಾಕರ ಮೆಂಡನ್, ಉದಯ್ ತಿಂಗಳಾಯ ಉಪಸ್ಥಿತರಿದ್ದರು.

ಸಂಘದ ತ್ರೀಂಶತಿ ಮಹೋತ್ಸವದ ಅಧ್ಯಕ್ಷ ಸಂತೋಷ್ ಅಮೀನ್ ಪ್ರಾಸ್ತಾವನೆ, ಶ್ರೀ ಮಹಾಸತೀಶ್ವರಿ ದೇಗುಲದ ಅಧ್ಯಕ್ಷ ದೇವದಾಸ್ ಸಾಲಿಯಾನ್ ಶುಭಾಶಂಶನೆಗೈದರು. ಕಾರ್ಯದರ್ಶಿ ಪ್ರವೀಣ್ ಕಾಂಚನ್ ಸ್ವಾಗತಿಸಿದರು. ಮಂಜುನಾಥ ಹಿಲಿಯಾಣ ಕಾರ್ಯಕ್ರಮ ನಿರೂಪಿಸಿದರು. ನಂತರ ರಾಜ್ಯ ವಿವಿಧ ಭಾಗಗಳಿಂದ ಆಗಮಿಸಿದ ಭಜನಾ ತಂಡದಿಂದ ಭಜನಾ ಕುಣಿತ ಭಜನಾ ಸ್ಪರ್ಧೆ ಸಂಪನ್ನಗೊಂಡಿತು.