ಮಕ್ಕಳಿಗೆ ಉತ್ತಮ ಸಂಸ್ಕಾರದ ಜತೆಗೆ ಶಿಕ್ಷಣ ಕೊಡಿಸಿ

| Published : Feb 02 2025, 11:45 PM IST

ಸಾರಾಂಶ

ಮಕ್ಕಳಿಗೆ ಆಚಾರ, ವಿಚಾರ ಕಲಿಸಿ ಉತ್ತಮ ಸಂಸ್ಕಾರ ನೀಡುವುದರ ಜತೆಗೆ ಅಕ್ಷರಾಭ್ಯಾಸ ಮಾಡಲು ಒಳ್ಳೆಯ ವಾತಾವರಣ ಮನೆಯಲ್ಲಿ ನೀಡಬೇಕು

ಶಿರಹಟ್ಟಿ: ಮನೆಯೇ ಮೊದಲ ಪಾಠಶಾಲೆ. ತಾಯಿಯೇ ಮೊದಲ ಗುರು. ಮಗುವಿನ ಶಿಕ್ಷಣ ಮನೆಯಿಂದಲೇ ಆರಂಭವಾಗುತ್ತದೆ. ಉತ್ತಮ ಶಿಕ್ಷಣ, ಸಂಸ್ಕಾರದಿಂದ ಸಮಾಜದಲ್ಲಿ ಮಕ್ಕಳು ಉತ್ತಮ ವ್ಯಕ್ತಿಗಳಾಗುತ್ತಾರೆ. ಮನೆಯಲ್ಲಿ ಪೋಷಕರು ಮಕ್ಕಳಿಗೆ ಉತ್ತಮ ವಾತಾವರಣ ನಿರ್ಮಿಸಿಕೊಡಬೇಕು ಎಂದು ವಿಶ್ರಾಂತ ಉಪನಿರ್ದೇಶಕ ಐ.ಬಿ. ಬೆನಕೊಪ್ಪ ಹೇಳಿದರು.

ಶನಿವಾರ ಸಂಜೆ ಪಟ್ಟಣದ ಸಿಸಿಎನ್ ವಿದ್ಯಾಪ್ರಸಾರ ಸಂಸ್ಥೆಯ ಶ್ರೀಫಕೀರ ಚನ್ನವೀರೇಶ್ವರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ೨೦೨೪-೨೫ನೇ ಸಾಲಿನ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಹಾಗೂ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಮಕ್ಕಳಿಗೆ ಆಚಾರ, ವಿಚಾರ ಕಲಿಸಿ ಉತ್ತಮ ಸಂಸ್ಕಾರ ನೀಡುವುದರ ಜತೆಗೆ ಅಕ್ಷರಾಭ್ಯಾಸ ಮಾಡಲು ಒಳ್ಳೆಯ ವಾತಾವರಣ ಮನೆಯಲ್ಲಿ ನೀಡಬೇಕು ಎಂದು ಹೇಳಿದರು.

ಶಾಲೆಯಲ್ಲಿ ಮಕ್ಕಳು ಕಲಿಯುವುದಕ್ಕಿಂತ ಹೆಚ್ಚು ಮನೆ ಹಾಗೂ ಸಮಾಜದಿಂದ ಕಲಿಯುತ್ತವೆ. ಆದ್ದರಿಂದ ಉತ್ತಮ ನಡತೆ, ಸಂಸ್ಕಾರ, ಆಚಾರ, ವಿಚಾರ ಸಂಗತಿಗಳು ಸಿಗುವ ಹಾಗೇ ನೋಡಿಕೊಳ್ಳಬೇಕು. ಶಾಲೆಗೆ ಸೇರಿಸುವುದಷ್ಟೇ ತಮ್ಮ ಜವಾಬ್ದಾರಿ ಎಂದು ಅನೇಕ ಪೋಷಕರು ಭಾವಿಸಿದ್ದಾರೆ. ಇದು ತಪ್ಪು. ಮಕ್ಕಳ ಎಲ್ಲ ಚಟುವಟಿಕೆ ಗಮನಿಸಿ, ಸಕಾಲದಲ್ಲಿ ಅವರನ್ನು ತಿದ್ದಬೇಕಾಗಿರುವುದು ಪೋಷಕರ ಹೊಣೆಗಾರಿಕೆಯ ಭಾಗ ಎಂದು ಅಭಿಪ್ರಾಯಪಟ್ಟರು.

ಮಕ್ಕಳನ್ನು ಉತ್ತಮ ಶಾಲೆಯಲ್ಲಿ ಓದಲು ದಾಖಲಿಸಿದರೆ ಸಾಲದು. ಸೂಕ್ತ ಮಾರ್ಗದರ್ಶನ ನೀಡುವುದರ ಜತೆಗೆ ಅವರ ಪ್ರತಿಭೆಗೆ ನೀರೆರೆಯಬೇಕು. ಮಕ್ಕಳ ಆಸಕ್ತಿಗೆ ಅನುಗುಣವಾಗಿ ಓದಿಸಬೇಕು. ಒಬ್ಬ ತಾಯಿ ಪ್ರಪಂಚ ನಿಬ್ಬೆರಗಾಗುವಂತೆ ಮಾಡುವ ಮನಸ್ಸನ್ನು ಮಕ್ಕಳ ಮೂಲಕ ತೋರಿಸಬಹುದು. ಸಿಸಿಎನ್ ಶಿಕ್ಷಣ ಸಂಸ್ಥೆ ವೈಜ್ಞಾನಿಕ ತಳಹದಿ, ದೇಶಿ ನೆಲೆಗಟ್ಟನ್ನು ಬಿಡದೇ ಸುಸಂಸ್ಕೃತ ಸಮಾಜ ಕಟ್ಟಲು ಪ್ರಯತ್ನಿಸುತ್ತಿದ್ದು, ಇಂದಿನ ವಿದ್ಯಾರ್ಥಿಗಳು ಸಂಸ್ಕಾರವಂತರಾಗಬೇಕು ಎಂದು ತಿಳಿಸಿದರು.

ಸಾನ್ನಿಧ್ಯ ವಹಿಸಿದ್ದ ಬೆಳ್ಳಟ್ಟಿ ರಾಮಲಿಂಗೇಶ್ವರ ದಾಸೋಹಮಠದ ಬಸವರಾಜ ಮಹಾಸ್ವಾಮಿಗಳು ಮಾತನಾಡಿ, ಸಣ್ಣ ಮಕ್ಕಳು ತಮ್ಮ ಅಪ್ಪ-ಅಮ್ಮನನ್ನು ಅನುಕರಿಸುವ ಮೂಲಕ ಜೀವನದ ಪಾಠ ಕಲಿಯುತ್ತವೆ. ಮೊದಲ ಪಾಠಶಾಲೆಯಾಗಿರುವ ಮನೆಯಲ್ಲಿ ಉತ್ತಮ ವಾತಾವರಣ ನಿರ್ಮಿಸಲು ಪೋಷಕರು ಗಮನ ನೀಡಬೇಕು. ಪೂಜೆ, ಧ್ಯಾನ, ಪ್ರಾರ್ಥನೆ ಮೂಲಕ ಮಕ್ಕಳನ್ನು ಸಂಸ್ಕಾರವಂತರನ್ನಾಗಿ ಮಾಡಬೇಕು ಎಂದು ತಿಳಿಸಿದರು.

ಸಂಸ್ಕಾರವಿಲ್ಲದಿದ್ದರೆ ಮಕ್ಕಳು ಎಷ್ಟೇ ಶಿಕ್ಷಣ ಪಡೆದರೂ ವ್ಯರ್ಥವಾಗುತ್ತದೆ. ತಂದೆ-ತಾಯಿಗಳು ಮತ್ತು ಶಿಕ್ಷಕರು ಮಕ್ಕಳಿಗೆ ಮೊದಲು ಸಂಸ್ಕಾರ ಕಲಿಸಬೇಕು. ವಿದ್ಯೆ ಜತೆ ಸಂಸ್ಕಾರ ಬೆರೆತರೆ ಸಾಧನೆ ಹಾದಿ ಸುಗಮವಾಗುತ್ತದೆ. ಕಲಿಕೆಯಿಂದ ಮಾತ್ರ ಮನೆ, ಸಮಾಜ, ದೇಶ ಉದ್ಧಾರ ಮಾಡಲು ಸಾಧ್ಯವಾಗುತ್ತಿದ್ದು, ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವುದು ತಂದೆ-ತಾಯಿಗಳ ಮುಖ್ಯ ಜವಾಬ್ದಾರಿಯಾಗಿದೆ ಎಂದರು.

ಮಕ್ಕಳಲ್ಲಿ ಮಾನವೀಯ ಮೌಲ್ಯ ಬೆಳೆಯುವುದು ಉತ್ತಮ ಶಿಕ್ಷಣದಿಂದ ಮಾತ್ರ, ಸ್ಪರ್ಧಾತ್ಮಕ ಜಗತ್ತಿನಲ್ಲಿ ಮಕ್ಕಳಿಗೆ ಮೌಲ್ಯಾಧಾರಿತ ಶಿಕ್ಷಣದ ಅವಶ್ಯಕತೆಯಿದೆ. ಮಕ್ಕಳಿಗೆ ಶಿಕ್ಷಣದ ಜತೆಗೆ ಸಂಸ್ಕಾರ ನೀಡುವುದು ತಂದೆ-ತಾಯಿಗಳ ಮುಖ್ಯ ಆಧ್ಯತೆಯಾಗಬೇಕು. ಕೇವಲ ಶಾಲೆಗೆ ಕಳುಹಿಸಿದರೆ ನಮ್ಮ ಪಾತ್ರ ಮುಗಿಯಿತು ಎನ್ನುವಂತಿಲ್ಲ. ಅವರ ಚಲನ ವಲನ ಕಡೆ ನಿಗಾ ಇರಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಸಿಸಿಎನ್ ವಿದ್ಯಾ ಪ್ರಸಾರ ಸಂಸ್ಥೆ ಅಧ್ಯಕ್ಷ ಚಂದ್ರಕಾಂತ ನೂರಶೆಟ್ಟರ ಮಾತನಾಡಿ, ರಾಷ್ಟ್ರದ ನಿರ್ಮಾಣದಲ್ಲಿ ಬಹು ಮುಖ್ಯ ಪಾತ್ರ ವಹಿಸುವ, ಸಮಾಜಕ್ಕೆ ದಾರಿದೀಪವಾಗಿರುವ, ಗೌರವಯುತ ಸ್ಥಾನದಲ್ಲಿರುವ ಶಿಕ್ಷಕರು ಪ್ರಾಮಾಣಿಕ ಸೇವೆ ಮಾಡುವ ಮೂಲಕ ದಿಕ್ಕು ತಪ್ಪಿದ ಶೈಕ್ಷಣಿಕ ಪ್ರಗತಿಗೆ ಶ್ರಮಿಸಬೇಕು. ಜವಾಬ್ದಾರಿ ಅರಿತು ಸಂಸ್ಕೃತಿ, ಸಂಸ್ಕಾರ, ಸಭ್ಯ ಜೀವನ ಧರ್ಮದ ದಾರಿಯಲ್ಲಿ ಸಾಗಲು ಮಕ್ಕಳಿಗೆ ನೀತಿ ಹೇಳಿಕೊಡಬೇಕು ಎಂದರು.

ಜಯಶ್ರೀ ಚ.ನೂರಶೆಟ್ಟರ್‌, ಡಾ.ಸುನೀಲ ಬುರಬುರೆ, ಕೆ.ಎ.ಬಳಿಗೇರ, ಸಿ.ಪಿ.ಕಾಳಗಿ, ಎಚ್.ಎಂ.ದೇವಗಿರಿ, ಮುಖ್ಯೋಪಾಧ್ಯಾಯ ಮಂಜುನಾಥ ಆರ್.ನೇಮಗೊಂಡ ಇದ್ದರು.