ಸಾರಾಂಶ
ಕುಷ್ಟಗಿ: ಮಕ್ಕಳಲ್ಲಿ ನೈತಿಕ, ಸಾಮಾಜಿಕ ಮೌಲ್ಯಗಳು ಕಡಿಮೆಯಾಗುತ್ತಿದ್ದು, ಮಹಿಳೆಯರು ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕು ಎಂದು ಪ್ರಧಾನ ಸಿವಿಲ್ ನ್ಯಾಯಾಧೀಶ ಎಂ.ಎಲ್ ಪೂಜೇರಿ ಹೇಳಿದರು.
ಪಟ್ಟಣದ ಎನ್.ಸಿ.ಎಚ್ ಪ್ಯಾಲೇಸ್‌ನಲ್ಲಿ ಕಾನೂನೂ ಸೇವಾ ಸಮಿತಿ, ಅಜೀಂ ಪ್ರೇಮಜಿ ಪೌಂಡೇಷನ್, ಶಿಶು ಅಭಿವೃದ್ಧಿ ಯೋಜನೆಯ ಸಂಯುಕ್ತಾಶ್ರಯದಲ್ಲಿ ನಡೆದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.ಇಂದಿನ ಆಧುನಿತೆಯ ಪರಿಣಾಮವಾಗಿ ಪಾಲಕರು ತಮ್ಮ ಮಕ್ಕಳಿಗೆ ಹಣಗಳಿಸುವ ಉದ್ದೇಶದಿಂದ ಕೇವಲ ಶಿಕ್ಷಣ ಕಲಿಸುತ್ತಿದ್ದಾರೆ ಹೊರತು ಮಕ್ಕಳಲ್ಲಿ ನೈತಿಕ,ಸಾಮಾಜಿಕ ಮೌಲ್ಯ ನೀಡುತ್ತಿಲ್ಲ ಎಂದರು. ಮಕ್ಕಳನ್ನು ಕಾನ್ವೆಂಟ್ ಶಾಲೆಗಳಿಗೆ ಕಳಿಸುವ ಬದಲು ಅಂಗನವಾಡಿಗಳಿಗೆ ಕಳುಹಿಸಬೇಕು, ಇಲ್ಲಿ ಮಕ್ಕಳಿಗೆ ಅವಶ್ಯಕತೆ ಇರುವಂತಹ ಎಲ್ಲ ತರಹದ ಶಿಕ್ಷಣ ನೀಡುತ್ತಿದ್ದಾರೆ, ಎಲ್ಲಕ್ಕಿಂತಲೂ ಮಿಗಿಲಾಗಿ ನೈತಿಕತೆಯ ಪಾಠ ಹೇಳಲಾಗುತ್ತದೆ. ಮಹಿಳೆಯರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ಮೂಲಕ ಸುಭದ್ರ ಸಮಾಜ ನಿರ್ಮಾಣ ಮಾಡಬೇಕು ಎಂದರು.
ತಹಸೀಲ್ದಾರ ಅಶೋಕ ಶಿಗ್ಗಾಂವಿ ಮಾತನಾಡಿ, ಮಹಿಳೆಯರ ಛಲ ಮತ್ತು ವಿಶ್ವಾಸ ಭರಿತ ಜೀವನ ಶೈಲಿಯಿಂದ ಪ್ರತಿಯೊಂದು ಕ್ಷೇತ್ರಗಳಲ್ಲಿಯೂ ಸಂಘಟಿತರಾಗಿ ಉತ್ತಮ ಸಾಧನೆ ಮಾಡುತ್ತಿದ್ದಾರೆ. ಸ್ವಾಸ್ಥ್ಯ ಸಮಾಜ ಕಟ್ಟುವಲ್ಲಿ ಮಹಿಳೆಯರ ಪಾತ್ರ ಬಹುಮುಖ್ಯ ಎಂದರು.ವಕೀಲರ ಸಂಘದ ಅಧ್ಯಕ್ಷ ಸಂಗನಗೌಡ ಪಾಟೀಲ ಮಾತನಾಡಿ, ಪ್ರತಿಯೊಂದು ಯಶಸ್ಸಿನ ಹಿಂದೆ ಓರ್ವ ಮಹಿಳೆಯ ಪಾತ್ರ ಇರುತ್ತದೆ, ಮಹಿಳೆಯರು ಕುಟುಂಬದಲ್ಲಷ್ಟೇ ಅಲ್ಲ. ಎಲ್ಲ ಕ್ಷೇತ್ರಗಳಲ್ಲಿಯೂ ಹೊಣೆಗಾರಿಕೆಯಿಂದ ಸಾಧನೆ ಮಾಡಬಲ್ಲವರಾಗಿದ್ದಾರೆ ಎಂದರು.
ಪ್ಯಾನಲ್ ವಕೀಲ ಸುಭದ್ರ ದೇಸಾಯಿ, ಸುಶೀಲ ಮಂಗಳೂರು ಉಪನ್ಯಾಸ ನೀಡಿದರು.ಈ ಸಂದರ್ಭದಲ್ಲಿ ಸಹಾಯಕ ಸರ್ಕಾರಿ ಅಭಿಯೋಜಕ ರಾಯನಗೌಡ ಎಲ್, ಅಪರ ಸರ್ಕಾರಿ ವಕೀಲ ಪರಸಪ್ಪ ಗುಜಮಾಗಡಿ, ಸಿಡಿಪಿಒ ಯಲ್ಲಮ್ಮ ಹಂಡಿ, ಕಲಾವತಿ ಮೇಣೆದಾಳ, ಜಯಶ್ರೀ, ಗವಿಸಿದ್ದಪ್ಪ ಸೇರಿದಂತೆ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು, ಅಂಗನವಾಡಿ ಮೇಲ್ವಿಚಾರಕರು ಸಿಬ್ಬಂದಿ ವರ್ಗವದರು ಇದ್ದರು.
ಕಾರ್ಯಕ್ರಮದಲ್ಲಿ ಪರಿಮಳ ಸ್ವಾಗತ ಗೀತೆ ಹಾಡಿದರು, ಅನ್ನಪೂರ್ಣ ಪಾಟೀಲ ಸ್ವಾಗತಿಸಿದರು, ಭಾಗ್ಯಶ್ರೀ ಹೊಸಮನಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಂಗನವಾಡಿ ಮೇಲ್ವಿಚಾರಕರಿಗೆ, ಕಾರ್ಯಕರ್ತೆಯರಿಗೆ ಸನ್ಮಾನಿಸಿ ಗೌರವಿಸಲಾಯಿತು.