ಸಾರಾಂಶ
- ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರೈತ ಸಂಘ, ಹಸಿರು ಸೇನೆ ಪ್ರತಿಭಟನೆಯಲ್ಲಿ ಹುಚ್ಚವ್ವನಹಳ್ಳಿ ಮಂಜುನಾಥ ಒತ್ತಾಯ
- - - ಕನ್ನಡಪ್ರಭ ವಾರ್ತೆ ದಾವಣಗೆರೆರೈತರ ಕೃಷಿ ಪಂಪ್‌ಸೆಟ್‌ಗೆ ಸಂಪೂರ್ಣ ಉಚಿತ ವಿದ್ಯುತ್ ನೀಡಬೇಕು, ಅಕ್ರಮ ಸಕ್ರಮ ಯೋಜನೆ ಮರು ಜಾರಿ ಸೇರಿದಂತೆ ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ನಗರದಲ್ಲಿ ಸೋಮವಾರ ಮಾನವ ಸರಪಳಿ ನಿರ್ಮಿಸಿ, ರಸ್ತೆ ತಡೆ ಮಾಡುವ ಮೂಲಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯಿಂದ ಪ್ರತಿಭಟನೆ ನಡೆಸಲಾಯಿತು.
ನಗರದ ರೈತ ಭವನದಿಂದ ಮಹಾತ್ಮ ಗಾಂಧಿ ವೃತ್ತ, ಶ್ರೀ ಜಯದೇವ ವೃತ್ತದ ಮಾರ್ಗವಾಗಿ ಬೆಸ್ಕಾಂ ಅಧೀಕ್ಷಕ ಅಭಿಯಂತರರ ಕಚೇರಿಗೆ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ರಾಜ್ಯಾಧ್ಯಕ್ಷ ಹುಚ್ಚವ್ವನಹಳ್ಳಿ ಮಂಜುನಾಥ ಇತರರ ನೇತೃತ್ವದಲ್ಲಿ ಮುತ್ತಿಗೆ ಹಾಕಿದ ರೈತರು ಕೇಂದ್ರ, ರಾಜ್ಯ ಸರ್ಕಾರ ವಿರುದ್ಧ ಧಿಕ್ಕಾರ ಕೂಗಿ, ಆಕ್ರೋಶ ವ್ಯಕ್ತಪಡಿಸಿದರು.ಶುಲ್ಕ ನಿಗದಿ ಹುನ್ನಾರ:
ಹುಚ್ಚವ್ವನಹಳ್ಳಿ ಮಂಜುನಾಥ ಮಾತನಾಡಿ, ಹಿಂದಿನ ರಾಜ್ಯ ಸರ್ಕಾರದ ಅವದಿಯಲ್ಲಿ ಪ್ರತಿ ರೈತನಿಗೆ 10 ಎಚ್‌ಪಿವರೆಗೆ ಮಾತ್ರ ಉಚಿತ ವಿದ್ಯುತ್ ನೀಡಲಿದ್ದು, ಉಳಿದ ವಿದ್ಯುತ್ ಬಳಕೆಗೆ ಶುಲ್ಕ ಭರಿಸಬೇಕೆಂಬ ಕಾಯ್ದೆ ಜಾರಿಗೊಳಿಸಲಾಗಿತ್ತು. ಅದರ ಭಾಗವಾಗಿ ಆಗಿನ ಸರ್ಕಾರ ರೈತರ ಎಲ್ಲ ಕೃಷಿ ಪಂಪ್‌ಸೆಟ್‌ಗಳಿಗೆ ಆಧಾರ್ ಜೋಡಣೆ ಮಾಡುವ ಸಂಚು ರೂಪಿಸಿದ್ದು, ಇದರ ಮುಖ್ಯ ಉದ್ದೇಶ ಒಬ್ಬ ರೈತನಿಗೆ 10 ಎಚ್‌ಪಿವರೆಗೆ ಮಾತ್ರ ಉಚಿತ ವಿದ್ಯುತ್ ನೀಡಿ, ಉಳಿದ ವಿದ್ಯುತ್ ಬಳಕೆಗೆ ಶುಲ್ಕ ನಿಗದಿಪಡಿಸುವುದಾಗಿದೆ ಎಂದು ದೂರಿದರು.ಪಂಪ್‌ಸೆಟ್‌ಗೆ ಮೀಟರ್ ಅಳವಡಿಕೆಗೆ ಬಿಡಲ್ಲ:
ಹಿಂದಿನಿಂದಲೂ ಅನೇಕ ಸರ್ಕಾರಗಳು ರೈತರ ಕೃಷಿ ಪಂಪ್‌ಸೆಟ್‌ಗಳಿಗೆ ವಿವಿಧ ರೀತಿಯಲ್ಲಿ ಮೀಟರ್ ಅಳವಡಿಸಲು ಪ್ರಯತ್ನಿಸಿವೆ. ಆದರೂ ರೈತರು ವಿವಿಧ ಹೋರಾಟಗಳ ಮೂಲಕ ಪ್ರತಿರೋಧ ವ್ಯಕ್ತಪಡಿಸಿದ್ದರಿಂದ ಮೀಟರ್ ಅಳವಡಿಸುವ ಕಾರ್ಯದಿಂದ ಹಿಂದೆ ಸರಿಯಲಾಗಿತ್ತು. ಈಗ ಮತ್ತೆ ಮೀಟರ್ ಅಳವಡಿಸುವ ಮೂಲಕ ರೈತರಿಗೆ ಉಚಿತ ವಿದ್ಯುತ್‌ಗೆ ಶುಲ್ಕ ವಿಧಿಸಲು ಸಂಚು ನಡೆಸುತ್ತಿದೆ. ಕೇಂದ್ರ ಸರ್ಕಾರ ವಿದ್ಯುತ್ ಕ್ಷೇತ್ರ ಖಾಸಗೀಕರಣಗೊಳಿಸುವ ಪ್ರಯತ್ನದಲ್ಲಿದೆ. ಯಾವುದೇ ಕಾರಣಕ್ಕೂ ರೈತರ ಪಂಪ್‌ಸೆಟ್‌ಗೆ ಮೀಟರ್ ಅಳವಡಿಸಲು ಅವಕಾಶ ನೀಡುವುದಿಲ್ಲ ಎಂದು ಎಚ್ಚರಿಸಿದರು.ಸಂಘಟನೆ ಮುಖಂಡರಾದ ಯಲೋದಹಳ್ಳಿ ರವಿಕುಮಾರ, ಹೂವಿನಮಡು ನಾಗರಾಜ, ಚಿಕ್ಕಮೆಲ್ಲನಹೊಳೆ ಚಿರಂಜೀವಿ, ಅರಕೆರೆ ನಾಗರಾಜ, ಕಡರನಾಯಕನಹಳ್ಳಿ ಪ್ರಭುಗೌಡ, ರಾಜನಹಟ್ಟಿ ರಾಜು, ಅಸ್ತಾಫನಹಳ್ಳಿ ಗಂಡುಗಲಿ, ಬಸಪ್ಪ ಗರಡಿಮನಿ. ಹಿರೇಮಲ್ಲನಹೊಳಿ ಚಿರಂಜೀವಿ, ಕಾರಿಗನೂರು ಅಡ್ಡರಸ್ತೆಯ ಅಶೋಕ, ಕುಕ್ಕವಾಡ ಬಸವರಾಜ, ಆಲೂರು ಪರಶುರಾಮ, ಹುಚ್ಚವ್ವನಹಳ್ಳಿ ಪ್ರಕಾಶ, ಬಸವಾಪುರ ಸಿದ್ದೇಶ, ಹೊನ್ನೂರು ಮಂಜುನಾಥ, ಶಿವಪುರ ಕೃಷ್ಣಮೂರ್ತಿ ಇತರರು ಇದ್ದರು. ನಂತರ ಬೆಸ್ಕಾಂ ಅಧೀಕ್ಷಕ ಅಭಿಯಂತರರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
- - -ಬಾಕ್ಸ್* ಬೇಡಿಕೆಗಳೇನು?
- ಸರ್ಕಾರ ವಿದ್ಯುತ್ ಕ್ಷೇತ್ರ ಖಾಸಗೀಕರಣಗೊಳಿಸಬಾರದು- ವಿದ್ಯುತ್ ಪರಿವರ್ತಕ ಸುಟ್ಟ 24 ಗಂಟೆ ಒಳಗಾಗಿ ವಿದ್ಯುತ್ ಪರಿವರ್ತಕಗಳನ್ನು ರೈತರಿಗೆ ಒದಗಿಸಬೇಕು
- ರೈತರ ಪಂಪ್‌ಸೆಟ್ ಮೀಟರ್ ಅಳವಡಿಕೆ ಕೈ ಬಿಡಬೇಕು- ರಾಜ್ಯ ಸರ್ಕಾರ ತಕ್ಷಣವೇ ಅಕ್ರಮ ಸಕ್ರಮ ಯೋಜನೆಯನ್ನು ರಾಜ್ಯದಲ್ಲಿ ಮರುಜಾರಿಗೊಳಿಸಬೇಕು
- ರೈತರಿಗೆ ವಿದ್ಯುತ್ ಕಂಬ, ತಂತಿಗಳು, ಟ್ರಾನ್ಸ್‌ಫಾರ್ಮರ್ ಇತ್ಯಾದಿಗಳನ್ನು ತ್ವರಿತವಾಗಿ ನೀಡಬೇಕು- - -
(ಫೋಟೋ ಇದೆ)