ಶಿರಾ: ೭ ಬಾರಿ ಶಾಸಕರಾಗಿ ಕಾಂಗ್ರೆಸ್ ಪಕ್ಷಕ್ಕೆ ನಿಷ್ಠರಾಗಿರುವ ಟಿ.ಬಿ.ಜಯಚಂದ್ರ ಅವರಿಗೆ ಡಿ.ಕೆ.ಶಿವಕುಮಾರ್ ಅವರ ಸಚಿವ ಸಂಪುಟದಲ್ಲಿ ಸಚಿವ ಸ್ಥಾನ ನೀಡಬೇಕು. ಶ್ರೀ ಬಂಡಿರಂಗನಾಥ ಸ್ವಾಮಿಯ ಆಶೀರ್ವಾದದೊಂದಿಗೆ ಟಿ.ಬಿ.ಜಯಚಂದ್ರ ಅವರು ಸಚಿವರಾಗಲಿದ್ದಾರೆ ಎಂಬ ನಂಬಿಕೆ ಇದೆ ಎಂದು ಕಾಂಗ್ರೆಸ್ ಮುಖಂಡ ಎಂ.ಟಿ.ರಂಗನಾಥಗೌಡ ಹೇಳಿದರು.
ತಾಲೂಕಿನ ತಾವರೆಕೆರೆ ಗ್ರಾಮದ ಶ್ರೀ ಬಂಡಿರಂಗನಾಥ ಸ್ವಾಮಿ ದೇವಾಲಯದಲ್ಲಿ ಶಾಸಕ ಟಿ.ಬಿ.ಜಯಚಂದ್ರ ಅವರು ಸಚಿವರಾಗಲೆಂದು ಶ್ರೀ ಬಂಡಿರಂಗನಾಥ ಸ್ವಾಮಿಗೆ ಅಭಿಷೇಕ ನೆರವೇರಿಸಿ ವಿಶೇಷ ಪೂಜೆ ಸಲ್ಲಿಸಿ ಮಾತನಾಡಿದರು. ಟಿ.ಬಿ.ಜಯಚಂದ್ರ ಅವರು ಸುಮಾರು ೩ ದಶಕಗಳಿಂದಲೂ ಸುದೀರ್ಘವಾಗಿ ಶಾಸಕರಾಗಿ ಅನುಭವ ಹೊಂದಿದ್ದು, ೧೯೭೮ರಲ್ಲಿ ಆಯ್ಕೆಯಾದ ಶಾಸಕರಲ್ಲಿ ಏಕೈಕ ಹಿರಿಯ ಶಾಸಕರಾಗಿದ್ದಾರೆ. ಟಿ.ಬಿ.ಜಯಚಂದ್ರ ಅವರು ತುಮಕೂರು ಜಿಲ್ಲೆಗೆ ನೀರಾವರಿ ಯೋಜನೆ ತರಲು ಅತ್ಯಂತ ಪ್ರಮಖಪಾತ್ರ ವಹಿಸಿದ್ದಾರೆ. ಸಚಿವರಾದ ಸಂದರ್ಭದಲ್ಲಿ ಭದ್ರಾ ಮೇಲ್ದಂಡೆ, ಹೇಮಾವತಿ, ಎತ್ತಿನಹೊಳೆ ಯೋಜನೆಯನ್ನು ತಂದು, ಸಾಕಷ್ಟು ರೈತರಿಗೆ ಅನುಕೂಲ ಮಾಡಿದ್ದಾರೆ. ಬರದ ನಾಡಿಗೆ ಹೇಮಾವತಿ ಹರಿಸಿ ಕೀರ್ತಿಗೆ ಪಾತ್ರರಾಗಿದ್ದಾರೆ. 3 ಬಾರಿ ಸಚಿವರಾಗಿ ಸೇವೆ ಸಲ್ಲಿಸಿ ರಾಜ್ಯದಲ್ಲಿ ಅಮೂಲಾಗ್ರ ಬದಲಾವಣೆ ತಂದಿದ್ದಾರೆ. ಕೃಷಿ, ಆಹಾರ, ನಾಗರಿಕ ಸರಬರಾಜು ಇಲಾಖೆ, ಕಾನೂನು ಸಂಸದೀಯ ವ್ಯವಹಾರ, ಉನ್ನತ ಶಿಕ್ಷಣ, ಸಣ್ಣ ನೀರಾವರಿ, ೩೧ ಸಂಪುಟ ಉಪ ಸಮಿತಿಯ ಸದಸ್ಯರಾಗಿ, ಅಧ್ಯಕ್ಷರಾಗಿ ಹಲವು ಸಮಸ್ಯೆಗಳನ್ನು ಬಗೆಹರಿಸಿದ್ದಾರೆ. ಇಷ್ಟೊಂದು ಅನುಭವ ಇರುವ ಟಿ.ಬಿ.ಜಯಚಂದ್ರ ಅವರಿಗೆ ಸಚಿವ ಸ್ಥಾನ ನೀಡಿ ಎಂದು ಆಗ್ರಹಿಸಿದರು.ಮುಖಂಡ ತಾವರೆಕೆರೆ ಬಲರಾಮ್ , ಮುಖಂಡರಾದ ಕೆ.ಟಿ.ಕೃಷ್ಣಪ್ಪ, ರುದ್ರಣ್ಣ, ಪುಟ್ಟರಾಜು, ಶಿವಕುಮಾರ್, ಯಶೋಧರಗೌಡ, ವಿ.ನಾಗರಾಜ್, ಜಯರಾಮಣ್ಣ, ಮಂಜುನಾಥ್ ಗೌಡ, ಭೀಮಣ್ಣ, ಚೇತನ್, ರಾಮದಾಸ್ ಸೇರಿ ಹಲವರು ಹಾಜರಿದ್ದರು.