ಸಾರಾಂಶ
ಮಳೆಗಾಲ ಸಂದರ್ಭದಲ್ಲಿ ಚರಂಡಿ ನೀರು ರಸ್ತೆಗೆ ಹರಿಯದಂತೆ ಕ್ರಮ ವಹಿಸಬೇಕು. ಸರ್ಕಾರದ ಮುಂಜಾಗ್ರತಾ ಸೂಚನೆ ಅನುಷ್ಠಾನಗೊಳಿಸಿ, ಗ್ರಾಮೀಣ ಭಾಗಗಳಲ್ಲಿ ಸ್ವಚ್ಛತೆಗೆ ಮೊದಲ ಆದ್ಯತೆ ನೀಡಬೇಕೆಂದು ವಡಗೇರಾ ತಾಲೂಕು ಪಂಚಾಯ್ತಿ ಕಾರ್ಯನಿರ್ವಾಹಕ ಅಧಿಕಾರಿ ಮಲ್ಲಿಕಾರ್ಜುನ ಸಂಗ್ವಾರ ಹೇಳಿದರು.
ಕನ್ನಡಪ್ರಭ ವಾರ್ತೆ ಯಾದಗಿರಿ
ಮಳೆಗಾಲ ಸಂದರ್ಭದಲ್ಲಿ ಚರಂಡಿ ನೀರು ರಸ್ತೆಗೆ ಹರಿಯದಂತೆ ಕ್ರಮ ವಹಿಸಬೇಕು. ಸರ್ಕಾರದ ಮುಂಜಾಗ್ರತಾ ಸೂಚನೆ ಅನುಷ್ಠಾನಗೊಳಿಸಿ, ಗ್ರಾಮೀಣ ಭಾಗಗಳಲ್ಲಿ ಸ್ವಚ್ಛತೆಗೆ ಮೊದಲ ಆದ್ಯತೆ ನೀಡಬೇಕೆಂದು ವಡಗೇರಾ ತಾಲೂಕು ಪಂಚಾಯ್ತಿ ಕಾರ್ಯನಿರ್ವಾಹಕ ಅಧಿಕಾರಿ ಮಲ್ಲಿಕಾರ್ಜುನ ಸಂಗ್ವಾರ ಹೇಳಿದರು.ವಡಗೇರಾ ತಾಲೂಕು ಪಂಚಾಯ್ತಿ ಕಚೇರಿ ಸಭಾಂಗಣದಲ್ಲಿ ಸಾಮಾಜಿಕ ಪರಿಶೋಧನೆ ಹಾಗೂ ನರೇಗಾ ಯೋಜನೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.
ಗ್ರಾಮೀಣ ಭಾಗದಲ್ಲಿ ರಸ್ತೆ ಮೇಲೆ ಚರಂಡಿ ನೀರು ಹರಿಯದಂತೆ, ಮನೆ ಅಕ್ಕ-ಪಕ್ಕ ಕಲುಷಿತ ವಾತಾವರಣ ಸೃಷ್ಟಿಯಾಗದಂತೆ ಎಚ್ಚರಿಕೆ ವಹಿಸಬೇಕು. ನರೇಗಾ ಯೋಜನೆಯಡಿ ಸರ್ಕಾರ ಗ್ರಾಮಗಳಲ್ಲಿ ಈಗಾಗಲೇ ಎಲ್.ಡಬ್ಲ್ಯೂ.ಎಂ. ಕಾಮಗಾರಿ ಕೈಗೊಂಡು ಸ್ವಚ್ಛತೆಗೆ ಆದ್ಯತೆ ನೀಡಿದೆ. ಅಲ್ಲದೇ ಎಸ್.ಬಿ.ಎಂ. ಸಾಮಾಜಿಕ ಪರಿಶೋಧನೆ ಅಧಿಕಾರಿಗಳಿಗೆ ಕಡತಗಳನ್ನು ಒದಗಿಸುವುದು ಹಾಗೂ ನರೇಗಾ ಯೋಜನೆ ಕಾಮಗಾರಿಗಳನ್ನು ಕೈಗೊಳ್ಳುವ ಮೂಲಕ ಯೋಜನೆ ಯಶಸ್ವಿಗೊಳಿಸಲು ಅಧಿಕಾರಿಗಳಿಗೆ ಸೂಚಿಸಿದರು.ಸಹಾಯಕ ನಿರ್ದೇಶಕ ಶರಣಗೌಡ ಮಾತನಾಡಿ, ಮೇಟ್ ರಿಜಿಸ್ಟ್ರೇಷನ್ ನೋಂದಣಿ ಹಾಗೂ ನರೇಗಾ ಕಡತಗಳ ನಿರ್ವಹಣೆಯನ್ನು ನಿರ್ದಿಷ್ಟ ಸಮಯದಲ್ಲಿ ಸಾಧಿಸಲು ಸೂಚಿಸಿದರು.
ಸಭೆಯಲ್ಲಿ ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳಾದ ಬಿ.ಆರ್. ಪಾಟೀಲ್, ಸಿದ್ದವೀರಪ್ಪ, ಶಿವರಾಜ್, ದೇವು, ಮಲ್ಲಿಕಾರ್ಜುನ ನಾಯಕ, ಸಿದ್ದವೀರಪ್ಪ, ಬಸವಲಿಂಗಪ್ಪ , ಕಾವೇರಿ, ಟಿಐಇಸಿ ದುರ್ಗೇಶ್ ಹಾಗೂ ಟಿಎಇ ಮಂಜುನಾಥ್ ಇತರರಿದ್ದರು.