ಕುಡಿಯುವ ನೀರಿನ ಪೂರೈಕೆಗೆ ಪ್ರಥಮ ಆದ್ಯತೆ ನೀಡಿ: ಪಾಂಡೆ

| Published : Apr 02 2024, 01:09 AM IST / Updated: Apr 02 2024, 08:45 AM IST

ಸಾರಾಂಶ

ಜಿಲ್ಲೆಯಾದ್ಯಂತ ಕುಡಿಯುವ ನೀರನ್ನು ಸಮರ್ಪಕವಾಗಿ ಪೂರೈಕೆ ಮಾಡಲು ಪ್ರಥಮ ಆದ್ಯತೆ ನೀಡುವಂತೆ ಕ್ರಮ ಕೈಗೊಳ್ಳಬೇಕು.

 ಕೊಪ್ಪಳ :  ಜಿಲ್ಲೆಯಾದ್ಯಂತ ಕುಡಿಯುವ ನೀರನ್ನು ಸಮರ್ಪಕವಾಗಿ ಪೂರೈಕೆ ಮಾಡಲು ಪ್ರಥಮ ಆದ್ಯತೆ ನೀಡುವಂತೆ ಕ್ರಮ ಕೈಗೊಳ್ಳಿ ಎಂದು ಅಧಿಕಾರಿಗಳಿಗೆ ಜಿಲ್ಲಾ ಪಂಚಾಯಿತಿ ಸಿಇಒ ರಾಹುಲ್ ರತ್ನಂ ಪಾಂಡೆ ಸೂಚಿಸಿದರು.

ನಗರದ ಜಿಪಂ ಸಮಿತಿಯ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಕುಡಿಯುವ ನೀರು ಮತ್ತು ನೈರ್ಮಲ್ಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಜಿಲ್ಲೆಯ ಜನ ಹಾಗೂ ಜಾನುವಾರುಗಳಿಗೆ ಕುಡಿಯುವ ನೀರಿನ ಕೊರತೆ ಆಗದಂತೆ ನೋಡಿಕೊಳ್ಳಬೇಕು ಎಂದರು.

ಈಗಾಗಲೇ ಬೇಸಿಗೆ ಪ್ರಾರಂಭವಾಗಿದ್ದು, ತಾಪಮಾನ ಶೇ.40 ಸೆಲ್ಸಿಯಸ್‌ನಷ್ಟಿದ್ದು ಕುಡಿಯುವ ನೀರಿನ ಸಮಸ್ಯೆ ಇರುವ ಗ್ರಾಮಗಳಲ್ಲಿ ಹೊಸ ಬೋರ್‌ವೇಲ್‌ ಕೊರೆಯಿಸಲು ಕ್ರಮ ವಹಿಸಬೇಕು. ಅಲ್ಲದೇ ಖಾಸಗಿ ಬೋರ್‌ವೇಲ್‌ಗಳನ್ನು ಬಾಡಿಗೆ ಆಧಾರದ ಮೇಲೆ ಪಡೆದು ನೀರು ಪೂರೈಕೆ ಮಾಡಬೇಕು. ಖಾಸಗಿ ಬೋರ್‌ವೇಲ್‌ ಲಭ್ಯವಿಲ್ಲದ ಕಡೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಬೇಕು. ಈಗಾಗಲೇ ಚಾಲ್ತಿಯಲ್ಲಿರುವ ಬೋರ್‌ವೇಲ್‌ಗಳ ಸುಸ್ಥಿತಿಯನ್ನು ಪರಿಶೀಲಿಸಬೇಕು. ಯಾವುದೇ ರೀತಿಯ ಸಣ್ಣಪುಟ್ಟ ದುರಸ್ತಿ ಮಾಡಿಸಬೇಕಾಗಿದ್ದಲ್ಲಿ ನಿಯಮಾನುಸಾರ ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡಿದರು.

ಜಿಲ್ಲೆಯಲ್ಲಿ ಕುಡಿಯುವ ನೀರು ಪೂರೈಕೆಗಾಗಿ ಹೊಸ ಬೋರ್‌ವೇಲ್‌ ಕೊರೆಯಿಸಲು ಅಗತ್ಯವಿರುವ ಗ್ರಾಮಗಳ ಪಟ್ಟಿಯನ್ನು ತಯಾರಿಸಿ 15 ದಿನಗಳೊಳಗಾಗಿ ಸಲ್ಲಿಸಿದ್ದಲ್ಲಿ ಹೊಸ ಬೋರ್‌ವೇಲ್‌ ಕೊರೆಯಿಸಲು ಅನುಮೋದನೆ ನೀಡಲಾಗುವುದು. ಹೊಸ ಬೋರ್‌ವೇಲ್‌ಗಳಿಗಾಗಿ ಸಲ್ಲಿಸುವ ಪ್ರಸ್ತಾವನೆಯಲ್ಲಿ ಬೋರ್‌ವೇಲ್‌ ಅವಶ್ಯವಿರುವ ಸ್ಥಳದ ಮಾಹಿತಿಯ ಜೊತೆಗೆ ನೀರು ಲಭ್ಯವಿರುವ ಕುರಿತು ಜಿಯೋಲಿಜಿಸ್ಟ್ ವರದಿ ನೀಡಬೇಕು. ಈ ವರದಿಯನ್ನು ಪರಿಶೀಲಿಸಿ ಅವಶ್ಯವಿದ್ದರೆ, ಹೊಸ ಬೋರ್‌ವೇಲ್‌ ಕೊರೆಯಿಸಲು ಅನುಮತಿ ನೀಡಲಾಗುವುದು. ವಿಫಲವಾದ ಬೋರ್‌ವೇಲ್‌ಗಳ ಸೂಕ್ತ ಮಾಹಿತಿ ನೀಡಬೇಕು. ಕೆಲವು ಬೋರ್‌ವೇಲ್‌ಗಳಲ್ಲಿ ಅಲ್ಪ ಪ್ರಮಾಣದಲ್ಲಿ ನೀರಿರುವ ಕಾರಣ ವಿಫಲ ಎಂದು ಕೈಬಿಡಲಾಗಿದ್ದು, ಅಂತಹ ಯಾವುದಾದರೂ ಬೋರ್‌ವೇಲ್‌ ಒಂದರಲ್ಲಿ ಹ್ಯಾಂಡ್ ಪಂಪ್ ಅಳವಡಿಸಿ ನೋಡಿ, ಹ್ಯಾಂಡ್ ಪಂಪ್ ಮೂಲಕ ಜನರಿಗೆ ನೀರು ದೊರೆತರೆ ಇದೇ ಪ್ರಯತ್ನವನ್ನು ಇತರ ಸ್ಥಳಗಳಲ್ಲಿಯೂ ಅನುಸರಿಸಲು ಕ್ರಮ ಕೈಗೊಳ್ಳಬೇಕು ಎಂದರು.

ಜಿಲ್ಲೆಯ ನಗರ ಪ್ರದೇಶದ 117 ಮತ್ತು ಗ್ರಾಮೀಣ ಭಾಗದ 560 ಅಂಗನವಾಡಿ ಕೇಂದ್ರಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇರುವುದಾಗಿ ಮಾಹಿತಿ ಇದ್ದು, ನಗರ ಪ್ರದೇಶಗಳ ಅಂಗನವಾಡಿಗಳಿಗೆ ಯೋಜನಾ ನಿರ್ದೇಶಕರು ಜಿಲ್ಲಾ ನಗರಾಭಿವೃದ್ಧಿ ಕೋಶ, ಗ್ರಾಮೀಣ ಭಾಗದ ಅಂಗನವಾಡಿ ಕೇಂದ್ರಗಳಿಗೆ ಗ್ರಾಮೀಣ ಕುಡಿಯುವ ನೀರಿನ ಇಲಾಖೆಯ ಅಧಿಕಾರಿಗಳು ನೀರಿನ ಸೌಲಭ್ಯ ಕುಡಿಯುವ ನೀರಿನ ಕಲ್ಪಿಸಬೇಕು ಎಂದರು.

ಎಲ್ಲ ಶಾಲೆಗಳಲ್ಲಿಯೂ ಸಹ ಕುಡಿಯುವ ನೀರಿನ ವ್ಯವಸ್ಥೆ ಬಗ್ಗೆ ಶಿಕ್ಷಣ ಇಲಾಖೆ ಅಧಿಕಾರಿಗಳು ಪರಿಶೀಲಿಸಿ ವರದಿ ಸಲ್ಲಿಸಬೇಕು. ಈ ಹಿನ್ನೆಲೆ ಯಾವುದೇ ರೀತಿಯ ಸಮಸ್ಯೆ ಕಂಡುಬಂದಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ತ್ವರಿತವಾಗಿ ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡಿದರು.

ಎಲ್ಲ ಶುದ್ಧ ಕುಡಿಯುವ ನೀರಿನ ಘಟಕಗಳಲ್ಲಿ ಸಮರ್ಪಕವಾಗಿ ನೀರು ಸಿಗಬೇಕು. ನೀರಿನ ಪೂರೈಕೆ ಆಗದೆ ಇರುವ ಶುದ್ಧ ಕುಡಿಯುವ ನೀರಿನ ಘಟಕಗಳಿಗೆ 7 ದಿನಗಳೊಳಗಾಗಿ ನೀರು ಸಂಪರ್ಕ ಒದಗಿಸಿ ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಿಸಬೇಕು. ಪ್ರತಿ ತಾಲೂಕಿಗೆ ಎರಡರಂತೆ ನೀರಿನ ಟ್ಯಾಂಕರ್ ವ್ಯವಸ್ಥೆಯನ್ನು ಆಯಾ ತಾಪಂ ಅಧಿಕಾರಿಗಳು ಮಾಡಿಕೊಳ್ಳಬೇಕು. ಕುಡಿಯುವ ನೀರು ಪೂರೈಕೆ ಆಗುವ ಜಿಲ್ಲೆಯ ಬೋರ್‌ವೇಲ್‌ಗಳು, ಟ್ಯಾಂಕ್‌ಗಳು ಹಾಗೂ ಇತರ ನೀರಿನ ಸಂಗ್ರಹಗಳಲ್ಲಿ ಕ್ರಮೇಣವಾಗಿ ನೀರಿನ ಪರೀಕ್ಷೆಗಳನ್ನು ಮಾಡುವಂತೆ ಆರೋಗ್ಯ ಇಲಾಖೆಯು ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.

ಸಭೆಯಲ್ಲಿ ಜಿಪಂ ಉಪಕಾರ್ಯದರ್ಶಿಗಳಾದ ಮಲ್ಲಪ್ಪ ತೊದಲಬಾಗಿ, ಜಿಪಂ ಮುಖ್ಯ ಯೋಜನಾಧಿಕಾರಿ ಡಿ. ಮಂಜುನಾಥ, ಜಂಟಿ ಕೃಷಿ ನಿರ್ದೇಶಕ ರುದ್ರೇಶಪ್ಪ ಟಿ.ಎಸ್. ಸೇರಿದಂತೆ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.