ಸಾರಾಂಶ
ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆಪುರಸಭೆ ಬಿ.ಟಿ.ಬಡಾವಣೆಯಲ್ಲಿ ವಶಪಡಿಸಿಕೊಂಡ ಜಾಗದಲ್ಲಿ ನಿವೇಶನ ವಂಚಿತ ಬಡವರು ಹಾಗೂ ಮಧ್ಯಮ ವರ್ಗದ ಜನರಿಗೆ ಉಚಿತ ನಿವೇಶನ ವಿತರಿಸಲು ಕ್ರಮ ವಹಿಸುವಂತೆ ಹಿರಿಯ ಸದಸ್ಯ ಕೆ.ಸಿ.ಮಂಜುನಾಥ್ ಆಗ್ರಹಿಸಿದರು.
ಪಟ್ಟಣದ ಪುರಸಭೆ ಶಹರಿ ರೋಜ್ಗಾರ್ ಭವನದಲ್ಲಿ ಆಡಳಿತ ಅಧಿಕಾರಿ ನಂದೀಶ್ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಮಾತನಾಡಿ, ಬಡವರಿಗೆ ನಿವೇಶನ ಹಂಚುವ ಸದುದ್ದೇಶದಿಂದ ಪಟ್ಟಣದ ಟಿ.ಬಿ.ಬಡಾವಣೆಯಲ್ಲಿ 21 ಎಕರೆ ಪ್ರದೇಶ ಭೂ ಸ್ವಾಧೀನವಾಗಿದೆ. ಭೂ ಸ್ವಾಧೀನವಾಗಿ ಮೂರು ದಶಕಗಳು ಕಳೆದಿದ್ದರೂ ಪುರಸಭೆ ಇದುವರೆಗೂ ಒಂದೇ ಒಂದು ನಿವೇಶನವನ್ನು ಬಡವರಿಗೆ ಹಂಚಿಕೆ ಮಾಡಿಲ್ಲ ಎಂದು ಕಿಡಿಕಾರಿದರು.ನಿವೇಶನ ಹಂಚಿಕೆಯಾಗದಿದ್ದರೂ ಇಲ್ಲಿ ಬಲಾಢ್ಯರು ಅತಿಕ್ರಮಿಸಿ ಕಟ್ಟಡ ನಿರ್ಮಿಸಿದ್ದಾರೆ. ಜೊತೆಗೆ ರಾಜ್ಯ ಸರ್ಕಾರವೇ ಜಾತಿಗೊಂದು ಸಮುದಾಯ ಭವನಕ್ಕೆ ಜಾಗ ನೀಡಿ ಬಡವರ ನಿವೇಶನಗಳಿಗೆ ಕೊಳ್ಳಿ ಇಟ್ಟಿದೆ. ಇದು ಕಾನೂನಿನ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ದೂರಿದರು.
ಪುರಸಭೆಗೆ ಸೇರಿದ ಜಾಗಗಳಲ್ಲಿ ಅಕ್ರಮವಾಗಿ ನಿರ್ಮಿಸಿರುವ ಕಟ್ಟಡಗಳನ್ನು ತೆರವುಗೊಳಿಸಿ ಪುರಸಭೆ ವಶಕ್ಕೆ ಪಡೆಯಬೇಕು. ಪಟ್ಟಣದಲ್ಲಿ ವಾಸ ಮಾಡುತ್ತಿರುವ ಕಡು ಬಡವರು ಹಾಗೂ ಮಧ್ಯಮ ವರ್ಗದ ಜನರಿಗೆ ಉಚಿತವಾಗಿ ನಿವೇಶನ ವಿತರಿಸಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.ಸದಸ್ಯ ಡಿ.ಪ್ರೇಮ್ ಕುಮಾರ್ ಮಾತನಾಡಿ, ಅಂಬೇಡ್ಕರ್ ನಗರದ ಹೆಬ್ಬಾಗಿಲಿಗೆ ಒಂದು ಸುಸರ್ಜಿತ ಸ್ವಾಗತ ಕಮಾನು ನಿರ್ಮಾಣ ಮಾಡುವ ಮೂಲಕ ಅಂಬೇಡ್ಕರ್ ಅವರ ಹೆಸರನ್ನು ಚಿರಸ್ಥಾಯಿಗೊಳಿಸುವ ನಿಟ್ಟಿನಲ್ಲಿ ದಿಟ್ಟ ನಿರ್ಧಾರ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಹಳೆ ಕಿಕ್ಕೇರಿ ರಸ್ತೆಗೆ ಡಾ. ಬಿ.ಆರ್.ಅಂಬೇಡ್ಕರ್ ಹೆಸರಿಟ್ಟು ನಾಮಫಲಕವನ್ನು ಕೂಡಲೇ ಅನಾವರಣ ಮಾಡಬೇಕು. ಪಟ್ಟಣದ ವಿವಿಧ ಬಡಾವಣೆಗಳು ಹಾಗೂ ರಸ್ತೆಗಳಿಗೆ ಹಿರಿಯ ಸ್ವಾತಂತ್ರ್ಯ ಹೋರಾಟಗಾರರು ಹಾಗೂ ಸಾಹಿತಿಗಳ ಹೆಸರನ್ನು ಇಡಲು ನಿರ್ಧಾರ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.ಪುರಸಭೆ ಹಿರಿಯ ಸದಸ್ಯ ಬಸ್ ಸಂತೋಷ್ ಕುಮಾರ್ ಮಾತನಾಡಿ, ಪಟ್ಟಣದ ಹೇಮಾವತಿ ಬಡಾವಣೆಯು ಅಭಿವೃದ್ಧಿ ಕೆಲಸ ಕಾರ್ಯಗಳಿಂದ ವಂಚಿತವಾಗಿದೆ. ಗ್ರಾಮ ಭಾರತಿ ಶಾಲೆ ಪಕ್ಕದ ಮೈದಾನಕ್ಕೆ ಹೊಂದಿಕೊಂಡಂತೆ ಸುಸಜ್ಜಿತವಾದ ಬಯಲು ರಂಗ ಮಂದಿರ ನಿರ್ಮಾಣ ಮಾಡಿ ಸಾಹಿತ್ಯ ಸಾಂಸ್ಕೃತಿಕ ಚಟುವಟಿಕೆಗಳು ನಿರಂತರವಾಗಿ ನಡೆಯಲು ಉತ್ತೇಜನ ನೀಡಬೇಕು ಎಂದರು.
ಪಟ್ಟಣವು ಮಂಡ್ಯ ಜಿಲ್ಲೆಯಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿದೆ. ಇಲ್ಲಿ ಅಗತ್ಯವಾಗಿ ಆಗಬೇಕಾಗಿರುವ ಕೆಲಸ ಕಾರ್ಯಗಳನ್ನು ಮೊದಲ ಆದ್ಯತೆಯಲ್ಲಿ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.ಸ್ಥಾಯಿ ಸಮಿತಿ ಅಧ್ಯಕ್ಷ ಎಚ್.ಆರ್. ಲೋಕೇಶ್ ಮಾತನಾಡಿ, ರಸ್ತೆ ಬದಿ ವ್ಯಾಪಾರಿಗಳಿಗೆ ಶಾಶ್ವತ ಮಾರುಕಟ್ಟೆನಿರ್ಮಾಣ ಮಾಡುವ ದಿಕ್ಕಿನಲ್ಲಿ ಅಧಿಕಾರಿಗಳು ಡಿಸಿಸಿ ಬ್ಯಾಂಕ್ ಹಿಂಭಾಗದಲ್ಲಿ ಬಸ್ ನಿಲ್ದಾಣಕ್ಕೆ ಹೊಂದಿಕೊಂಡಂತೆ ಮಾರುಕಟ್ಟೆ ನಿರ್ಮಾಣಕ್ಕೆ ತುರ್ತು ಕ್ರಮ ಕೈಗೊಂಡು ಕಾಮಗಾರಿಗೆ ಚಾಲನೆ ನೀಡಬೇಕು ಎಂದು ಮನವಿ ಮಾಡಿದರು.
ಸಭೆಯಲ್ಲಿ ಎಚ್.ಎನ್.ಪ್ರವೀಣ್, ಮಹಾದೇವಿ, ಕೆ.ಎಸ್.ಪ್ರಮೋದ್‌ಕುಮಾರ್, ನಟರಾಜ್, ಶುಭಾ, ಪದ್ಮಮ್ಮ ಮತ್ತು ಗಾಯತ್ರಿ ಭಾಗವಹಿಸಿದ್ದರು. ಬಹುತೇಕ ಸದಸ್ಯರು ಗೈರು ಹಾಜರಿ ಎದ್ದು ಕಾಣುತ್ತಿತ್ತು.ಸದಸ್ಯತ್ವ ಅನರ್ಹಕ್ಕೆ ಸರ್ಕಾರಕ್ಕೆ ಪತ್ರ
ಸತತವಾಗಿ ಮೂರು ಸಭೆಗಳಿಗೆ ಗೈರು ಹಾಜರಾಗುವ ಸದಸ್ಯರ ಸದಸ್ಯತ್ವವನ್ನು ಅನರ್ಹ ಮಾಡುವ ಅಧಿಕಾರವೂ ಸರ್ಕಾರಕ್ಕೆ ಇರುವುದರಿಂದ ಪಟ್ಟಣದ ಅಭಿವೃದ್ಧಿಗೆ ಕೈಜೋಡಿಸದ ಸದಸ್ಯರ ಸದಸ್ಯತ್ವ ಅನರ್ಹಗೊಳಿಸುವಂತೆ ಪತ್ರ ಬರೆದು ಒತ್ತಾಯಿಸಲಾಗುವುದು ಎಂದು ಸ್ಥಾಯಿ ಸಮಿತಿ ಅಧ್ಯಕ್ಷ ಲೋಕೇಶ್ ಹೇಳಿದರು.