ಬೆಳೆ ನಷ್ಟ ಸಂಪೂರ್ಣ ಹಣ ಪರಿಹಾರವಾಗಿ ನೀಡಿ, ಅಥವಾ ಎಲ್ಲ ಬೆಳೆಗಳ ಸಾಲ ಮನ್ನಾಗೊಳಿಸಿಭಿಕ್ಷೆಯಂತೆ ಬೆಳೆ ಪರಿಹಾರ ನೀಡುತ್ತಿರುವ ಸರ್ಕಾರ: ಕುರುಬೂರು ಶಾಂತಕುಮಾರ್‌ ಆರೋಪ

| Published : May 29 2024, 12:59 AM IST

ಬೆಳೆ ನಷ್ಟ ಸಂಪೂರ್ಣ ಹಣ ಪರಿಹಾರವಾಗಿ ನೀಡಿ, ಅಥವಾ ಎಲ್ಲ ಬೆಳೆಗಳ ಸಾಲ ಮನ್ನಾಗೊಳಿಸಿಭಿಕ್ಷೆಯಂತೆ ಬೆಳೆ ಪರಿಹಾರ ನೀಡುತ್ತಿರುವ ಸರ್ಕಾರ: ಕುರುಬೂರು ಶಾಂತಕುಮಾರ್‌ ಆರೋಪ
Share this Article
  • FB
  • TW
  • Linkdin
  • Email

ಸಾರಾಂಶ

ಬೆಳೆನಷ್ಟ ಪರಿಹಾರವನ್ನು ಸರ್ಕಾರ ಭಿಕ್ಷೆಯಂತೆ ನೀಡುತ್ತಿದ್ದು, ಬೆಳೆ ಪರಿಹಾರ ಹಣ ನೀಡುವುದನ್ನೇ ಮಂತ್ರಿಗಳಾದವರು ವೈಭವೀಕರಿಸಿ ಹೇಳುವ ಮೂಲಕ ಅನ್ನದಾತ ರೈತರ ಕಣ್ಣಿಗೆ ಮಣ್ಣೆರಚುವ ತಂತ್ರ ಅನುಸರಿಸುತ್ತಿದ್ದಾರೆ ಎಂದು ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಹಾಗೂ ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ ದಾವಣಗೆರೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

- ಭಿಕ್ಷೆಯಂತೆ ಪರಿಹಾರ ನೀಡುತ್ತಿರುವ ಸರ್ಕಾರ: ಕುರುಬೂರು ಶಾಂತಕುಮಾರ ಆಕ್ರೋಶ - - -

ಕನ್ನಡಪ್ರಭ ವಾರ್ತೆ, ದಾವಣಗೆರೆ ಬೆಳೆನಷ್ಟ ಪರಿಹಾರವನ್ನು ಸರ್ಕಾರ ಭಿಕ್ಷೆಯಂತೆ ನೀಡುತ್ತಿದ್ದು, ಬೆಳೆ ಪರಿಹಾರ ಹಣ ನೀಡುವುದನ್ನೇ ಮಂತ್ರಿಗಳಾದವರು ವೈಭವೀಕರಿಸಿ ಹೇಳುವ ಮೂಲಕ ಅನ್ನದಾತ ರೈತರ ಕಣ್ಣಿಗೆ ಮಣ್ಣೆರಚುವ ತಂತ್ರ ಅನುಸರಿಸುತ್ತಿದ್ದಾರೆ ಎಂದು ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಹಾಗೂ ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ ಆಕ್ರೋಶ ವ್ಯಕ್ತಪಡಿಸಿದರು.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಎನ್‌ಡಿಆರ್‌ಎಫ್ ಮಾನದಂಡಕ್ಕೆ ತಿದ್ದುಪಡಿ ತಂದು, ಬೆಳೆ ನಷ್ಟದ ಸಂಪೂರ್ಣ ಹಣವನ್ನು ಪರಿಹಾರವಾಗಿ ನೀಡಬೇಕು. ಇಲ್ಲದಿದ್ದರೆ ಬರ ಹಾಗೂ ಅತಿವೃಷ್ಟಿಯಿಂದಾಗಿ ಹಾನಿಗೊಳಗಾದ ರೈತರ ಎಲ್ಲ ಬೆಳೆಗಳಿಗೂ ಅನ್ವಯ ಆಗುವಂತೆ ಬೆಳೆ ಸಾಲವನ್ನು ಸಂಪೂರ್ಣ ಮನ್ನಾ ಮಾಡುವ ನೀತಿ ಜಾರಿಗೆ ತರಬೇಕು ಎಂದರು.

ರಾಜ್ಯದಲ್ಲಿ ಹೈನುಗಾರಿಕೆ ರೈತರಿಗೆ ಹಾಲಿನ ಪ್ರೋತ್ಸಾಹಧನ ಲೀಟರ್‌ಗೆ ₹5 ರಂತೆ ನೀಡುತ್ತಿರುವುದನ್ನು 8 ತಿಂಗಳಿನಿಂದ ನೀಡಿಲ್ಲ. ಪಶು ಆಹಾರದ ಬೆಲೆ, ಅವುಗಳ ತಿನಿಸುಗಳ ಬೆಲೆಯೂ ಏರಿಕೆಯಾಗಿದೆ. ಇದರಿಂದ ರೈತರು ತೀವ್ರ ಸಂಕಷ್ಟದಲ್ಲಿದ್ದಾರೆ. ಈ ಹಿನ್ನೆಲೆ ಸುಮಾರು ₹750 ಕೋಟಿ ತಕ್ಷಣ ಹೈನುಗಾರಿಕೆ ರೈತರಿಗೆ ಬಿಡುಗಡೆ ಮಾಡಿ, ರೈತರನ್ನು ರಕ್ಷಿಸಬೇಕು ಎಂದು ಹೇಳಿದರು.

ಬರದಿಂದಾಗಿ ರಾಜ್ಯದಲ್ಲಿ ಶೇ.30ರಷ್ಟು ಕಬ್ಬಿನ ಬೆಳೆ ಸಂಪೂರ್ಣ ಒಣಗಿಹೋಗಿದೆ. ಪರಿಹಾರ ನೀಡುವಾಗ ನಷ್ಟವಾದ ಕಬ್ಬಿನ ಬೆಳೆಯನ್ನೂ ಸರ್ಕಾರವು ಪರಿಗಣಿಸಬೇಕು. ಕಬ್ಬಿನ ಬೆಳೆ ಹಾನಿಗೂ ಪರಿಹಾರ ನೀಡಬೇಕು. ಈಗಾಗಲೇ ರೈತರು ಕೃಷಿ ಚಟುವಟಿಕೆ ಆರಂಭಿಸಲು ಸನ್ನದ್ಧರಾಗುತ್ತಿದ್ದಾರೆ. ಗುಣಮಟ್ಟದ ಬಿತ್ತನೆ ಬೀಜ, ರಸಗೊಬ್ಬರವು ರೈತರಿಗೆ ಸಮರ್ಪಕವಾಗಿ ಸಿಗುವಂತೆ ಕೃಷಿ ಇಲಾಖೆ ಬದ್ಧತೆಯಿಂದ ಕ್ರಮ ಕೈಗೊಳ್ಳಬೇಕು. ನಕಲಿ ಬಿತ್ತನೆ ಬೀಜ ಮಾರಾಟ ಮಾಡುವರು, ಕಾಳಸಂತೆಯಲ್ಲಿ ಗೊಬ್ಬರ-ಬೀಜ ಮಾರುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದರು.

ರೈತ ಮುಖಂಡರಾದ ಬಲ್ಲೂರು ರವಿಕುಮಾರ, ಬಳ್ಳಾರಿ ಮಾಧವ ರೆಡ್ಡಿ, ಬಸವರಾಜ ರಾಂಪುರ, ಪೂಜಾರ ಅಂಜಿನಪ್ಪ, ಸುರೇಶ ಪಾಟೀಲ, ಶಿವಕುಮಾರ ಇತರರು ಇದ್ದರು.

- - -

ಬಾಕ್ಸ್ * ಎಲ್ಲ ಬೆಳೆಗಳಿಗೂ ₹39 ಸಾವಿರ ಪರಿಹಾರ ನೀಡಿ - ಭದ್ರಾ ಅಚ್ಚುಕಟ್ಟು ರೈತರಿಗೆ ನೀಡಿದ್ದ ನೀರಿನ ಭರವಸೆ ಹುಸಿ: ಆರೋಪ

ಕನ್ನಡಪ್ರಭ ವಾರ್ತೆ, ದಾವಣಗೆರೆ ಭದ್ರಾ ಅಚ್ಚುಕಟ್ಟು ವ್ಯಾಪ್ತಿ ನಾಲೆಗೆ ನೀರು ಬಿಡುವುದಾಗಿ ಹೇಳಿ, ಅದನ್ನು ಭದ್ರಾ ಕಾಡಾ ಸಮಿತಿ, ಸರ್ಕಾರವು ಹುಸಿಗೊಳಿಸಿದೆ. ಇದರಿಂದಾಗಿ ಸುಮಾರು 5 ಸಾವಿರ ಎಕರೆ ಕಬ್ಬಿನ ಬೆಳೆ, ಅಡಕೆ, ತೆಂಗು, ಬಾಳೆ, ಮಾವು, ಪಪ್ಪಾಯಿ ಸೇರಿದಂತೆ ತೋಟದ ಬೆಳೆಗಳು ನಾಶವಾಗಿವೆ. ಅಕಾಲಿಕ ಮಳೆಯಿಂದಾಗಿ ಬತ್ತದ ಬೆಳೆಯೂ ನಾಶವಾಗಿದೆ ಎಂದು ಕುರುಬೂರು ಶಾಂತಕುಮಾರ ಹೇಳಿದರು.

ರಾಜ್ಯ ಸರ್ಕಾರ ಮಳೆಯಾಶ್ರಿತ ಪ್ರದೇಶಕ್ಕೆ ಮಾತ್ರ ಪರಿಹಾರ ನೀಡಿದೆ. ಪಂಪ್‌ಸೆಟ್‌ ಆಧಾರಿತ ಹಾಗೂ ಭದ್ರಾ ಕಾಲುವೆ ಆಧಾರಿತ ಬೆಳೆಗಳು ಜಿಲ್ಲೆಯಲ್ಲಿ ಹೆಚ್ಚುವರಿಯಾಗಿ 20 ಸಾವಿರ ಹೆಕ್ಟೇರ್‌ನಲ್ಲಿ ನಾಶವಾಗಿವೆ. ಆದರೂ, ಪರಿಹಾರ ನೀಡಿಲ್ಲ. ಎಲ್ಲ ಬೆಳೆಗಳಿಗೂ ಪರಿಹಾರವಾಗಿ ಕನಿಷ್ಠ ₹30 ಸಾವಿರ ನೀಡಬೇಕು ಎಂದು ಆಗ್ರಹಿಸಿದರು.

ಗ್ರಾಮೀಣರ ಹೆಸರಿನಲ್ಲಿ ಆರಂಭವಾಗ ಗ್ರಾಮೀಣ ಬ್ಯಾಂಕೇ ಈಗ ರೈತರಿಗೆ ಹೆಚ್ಚು ಕಿರುಕುಳ ನೀಡಿ, ವಂಚಿಸುತ್ತಿದೆ. ರಾಷ್ಟ್ರೀಕೃತ ಬ್ಯಾಂಕ್‌ಗಳಂತೂ ರೈತರನ್ನು ಭಿಕ್ಷುಕರಂತೆ ಕಾಣುತ್ತಿವೆ. ತಕ್ಷಣ ಬ್ಯಾಂಕ್‌ಗಳ ಸಾಲ ನೀತಿ ಬದಲಾವಣೆ ಆಗಬೇಕು. ಕೃಷಿ ಜಮೀನಿನ ಮೌಲ್ಯಕ್ಕೆ ಅನುಗುಣವಾಗಿ ಸಾಲ ನೀಡುವ ವ್ಯವಸ್ಥೆ ಜಾರಿಗೊಳಿಸಬೇಕು ಎಂದು ಸರ್ಕಾರಗಳಿಗೆ ಶಾಂತಕುಮಾರ ಒತ್ತಾಯಿಸಿದರು.

- - - ಟಾಪ್ ಕೋಟ್‌ ರಾಜ್ಯದಲ್ಲಿ 223 ತಾಲೂಕುಗಳು ಬರಪೀಡಿತ ಎಂದು ಘೋಷಣೆ ಮಾಡಿ, 70 ಲಕ್ಷ ರೈತರ ಪೈಕಿ 27 ಲಕ್ಷ ರೈತರಿಗೆ ಮಾತ್ರ ಪರಿಹಾರ ನೀಡಿ, ಶೇ.60 ರೈತರನ್ನು ರಾಜ್ಯ ಸರ್ಕಾರ ವಂಚಿಸಿರುವುದು ಸರಿಯಲ್ಲ. ತಕ್ಷಣವೇ ಆಗಿರುವ ಲೋಪ, ಅನ್ಯಾಯ ಸರಿಪಡಿಸಬೇಕು, ರೈತರಿಗೆ ನೆರವಾಗಬೇಕು - ಕುರುಬೂರು ಶಾಂತಕುಮಾರ, ರಾಜ್ಯಾಧ್ಯಕ್ಷ, ರಾಜ್ಯ ಕಬ್ಬು ಬೆಳೆಗಾರರ ಸಂಘ

- - -

-28ಕೆಡಿವಿಜಿ4, 5:

ದಾವಣಗೆರೆಯಲ್ಲಿ ಮಂಗಳವಾರ ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಹಾಗೂ ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು.