ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಿ: ಡಾ.ಸಜ್ಜನ್

| Published : Jan 31 2024, 02:22 AM IST

ಸಾರಾಂಶ

ಸುರಪುರ ತಾಲೂಕಿನ ಕೆಂಭಾವಿ ಪಟ್ಟಣದ ಸ್ಪಂದನ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜರುಗಿದ ದಶಮಾನೋತ್ಸವ ಮತ್ತು ಸಾಂಸ್ಕೃತಿಕ ಕಾರ್ಯಕ್ರಮವನ್ನು ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಸುರೇಶ ಸಜ್ಜನ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಚಾಲಕರನ್ನು ಸನ್ಮಾನಿಸಲಾಯಿತು.

ಕನ್ನಡಪ್ರಭ ವಾರ್ತೆ ಸುರಪುರ

ಪಾಲಕರು ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಕೊಡಿಸುವುದರ ಜತೆಗೆ ಉತ್ತಮ ಸಂಸ್ಕಾರ ನೀಡಬೇಕು. ಅಂದಾಗ ಒಳ್ಳೆಯ ನಾಗರಿಕರಾಗಿ ಜೀವನ ನಡೆಸಲು ಸಾಧ್ಯವಾಗುತ್ತದೆ ಎಂದು ಕಲಬುರಗಿ ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಸುರೇಶ್ ಸಜ್ಜನ ಹೇಳಿದರು.

ತಾಲೂಕಿನ ಕೆಂಭಾವಿ ಪಟ್ಟಣದ ಸ್ಪಂದನ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ದಶಮಾನೋತ್ಸವ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ವಿದ್ಯಾರ್ಥಿಗಳಲ್ಲಿ ಸಾಕಷ್ಟು ಪ್ರತಿಭೆ ಇದ್ದು, ಅದನ್ನು ಹೊರ ತೆಗೆಯುವ ಕೆಲಸ ಪ್ರಾಮಾಣಿಕವಾಗಿ ಮಾಡಬೇಕು. ಹಿರಿಯ ಪ್ರಾಥಮಿಕ ಶಾಲೆಯಾಗಿರುವ ಸ್ಪಂದನ ಸಂಸ್ಥೆ ಮುಂಬರುವ ದಿನಗಳಲ್ಲಿ ಕಾಲೇಜಾಗಿ ಪರಿವರ್ತಸಿ ಮಕ್ಕಳ ಭವಿಷ್ಯ ರೂಪಿಸಿ ಇನ್ನಷ್ಟು ಹೆಮ್ಮರವಾಗಲಿ ಎಂದು ಹಾರೈಸಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ನಿವೃತ್ತ ಉಪನ್ಯಾಸಕ ಎನ್.ಎಸ್.ಕುಲಕರ್ಣಿ, ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಿದರೆ ಸಾಲದು, ಸಮಾಜದಲ್ಲಿ ಜೀವನ ನಡೆಸಲು ಬೇಕಾದ ಧೈರ್ಯ ಮತ್ತು ಆತ್ಮ ವಿಶ್ವಾಸ ಸಹ ಬೆಳೆಸಬೇಕು. ಈ ನಿಟ್ಟಿನಲ್ಲಿ ಸಂಸ್ಥೆ ಮುಂದಾಗಬೇಕು ಎಂದರು.

ಉತ್ತರ ಕರ್ನಾಟಕ ಕರವೇ ಅಧ್ಯಕ್ಷ ಡಾ. ಶರಣು ಗದ್ದುಗೆ ವಿದ್ಯಾರ್ಥಿಗಳಿಗಾಗಿ ಹಾಡು ಹಾಡಿ ರಂಜಿಸಿದರು. ಮುದನೂರ ಶ್ರೀ ಕೋರಿಸಿದ್ದೇಶ್ವರ ಶಾಖಾಮಠದ ಸಿದ್ದ ಚೆನ್ನಮಲ್ಲಿಕಾರ್ಜುನ ಶಿವಾಚಾರ್ಯರು ಸಾನ್ನಿಧ್ಯ ವಹಿಸಿ ಆರ್ಶೀವಚನ ನೀಡಿದರು. ಸಂಸ್ಥೆಯ ಕಾರ್ಯದರ್ಶಿ ಡಿ.ಸಿ. ಪಾಟೀಲ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಇದೇ ವೇಳೆ 10 ವರ್ಷದಿಂದ ನಡೆದು ಬಂದ ಹೆಜ್ಜೆ ಕುರಿತು ಸ್ಪಂದನ ಪಥ ಎಂಬ ಸ್ಮರಣ ಸಂಚಿಕೆ ಅನಾವರಣಗೊಳಿಸಲಾಯಿತು. ರಾಮ-ಲಕ್ಷ್ಮಣ, ಸೀತಾ, ಹನುಮಾನ ವೇಷ ಧರಿಸಿದ ಮಕ್ಕಳು ಕಾರ್ಯಕ್ರಮದ ಮೆರಗು ಹೆಚ್ಚಿಸಿದರು. ನಂತರ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

ಹಿರೇಮಠ ಸಂಸ್ಥಾನದ ಚನ್ನಬಸವ ಶಿವಾಚಾರ್ಯರು ಸಾನ್ನಿಧ್ಯ ವಹಿಸಿದ್ದರು. ಪ್ರಮುಖರಾದ ಸಜ್ಜಾದ ಶಾಹೀದ್ ಹುಸೇನ ಖಾಜಿ, ಬಾಬುಗೌಡ ಮಾಲಿಪಾಟೀಲ, ವೀರೇಂದ್ರ ಧರಿ, ಶಂಕ್ರಪ್ಪ ದೇವೂರ, ಸಂತೋಷ.ಎಸ್, ಬಸವರಾಜ, ಸಂಸ್ಥೆಯ ಅಧ್ಯಕ್ಷ ವಿಕಾಸ ಸೊನ್ನದ, ಸಂಗಣ್ಣ ತುಂಬಗಿ, ಡಾ.ಶಿವಾನಂದ ಆಲಗೂರ, ರಾಮನಗೌಡ ಪಾಟೀಲ್, ಮಂಜುನಾಥ ಅರಕೇರಿ ಸೇರಿದಂತೆ ಇತರರಿದ್ದರು. ಈ ವೇಳೆ ಉತ್ತಮ ಸೇವೆ ಸಲ್ಲಿಸುತ್ತಿರುವ ಶಾಲಾ ಬಸ್ ಚಾಲಕರಿಗೆ ಸನ್ಮಾನಿಸಲಾಯಿತು.