ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿ

| Published : Oct 18 2024, 01:19 AM IST

ಸಾರಾಂಶ

ವಾಲ್ಮಿಕಿ ಜಯಂತಿಯಲ್ಲಿ ಸಚಿವ ರಹೀಮ್‌ ಖಾನ್‌ ಮನವಿ । ವಾಲ್ಮಿಕಿ ಭವನದ ಕಂಪೌಂಡ್‌ಗೆ 10ಲಕ್ಷ ಅಬುದಾನ ಭರವಸೆ

ಕನ್ನಡಪ್ರಭ ವಾರ್ತೆ ಬೀದರ್‌

ಕೋಲಿ ಸಮಾಜದವರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವುದರ ಮೂಲಕ ಉತ್ತಮ ವ್ಯಕ್ತಿಗಳನ್ನಾಗಿ ಮಾಡಬೇಕು. ಮಕ್ಕಳಿಗೆ ಉನ್ನತ ಶಿಕ್ಷಣ ನೀಡಲು ಸರ್ಕಾರ ವಿವಿಧ ಸೌಲಭ್ಯಗಳನ್ನು ನೀಡುತ್ತಿದೆ ಯಾವುದೇ ಕಾರಣಕ್ಕೂ ಹಿಂಜರಿಯಬೇಡಿ ಎಂದು ಸಚಿವ ರಹೀಮ್‌ ಖಾನ್‌ ತಿಳಿಸಿದರು.

ಗುರುವಾರ ನಗರದ ಪೂಜ್ಯ ಡಾ.ಚನ್ನಬಸವ ಪಟ್ಟದ್ದೇವರು ರಂಗಮಂದಿರದಲ್ಲಿ ಜಿಲ್ಲಾಡಳಿತದಿಂದ ಆಯೋಜಿಸಲಾಗಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಎಲ್ಲರೂ ಸಹೋದರರಂತೆ ಇದ್ದು ಎಲ್ಲರ ಕಷ್ಟ ಸುಖಗಳಲ್ಲಿ ಭಾಗಿಯಾಗುವಂತೆ ಎಲ್ಲ ಮಹಾತ್ಮರೂ ತಿಳಿಸಿದ್ದಾರೆ, ಅದನ್ನು ನಾವೆಲ್ಲರೂ ಪಾಲಿಸಬೇಕು ಎಂದು ಪೌರಾಡಳಿತ ಸಚಿವ ರಹೀಮ್‌ ಖಾನ್‌ ಕರೆ ನೀಡಿದರು.

ವಾಲ್ಮಿಕಿ ಭವನದ ಕಂಪೌಂಡ್‌ ಗೋಡೆಗಾಗಿ ₹10ಲಕ್ಷ ನೀಡಬೇಕೆಂದು ಸಮಾಜದ ಮುಖಂಡ ಮಾರುತಿ ಮಾಸ್ಟರ್‌ ಅವರ ಮನವಿಗೆ ಸ್ಪಂದಿಸಿ ಕೂಡಲೇ ₹10ಲಕ್ಷ ಅನುದಾನ ಒದಗಿಸಲಾಗುವುದು ಎಂದು ಭರವಸೆ ನೀಡಿದರು.

ಸಂಸದ ಸಾಗರ ಖಂಡ್ರೆ ಮಾತನಾಡಿ, ಮಹಾತ್ಮರ ಜಯಂತಿ ಆಚರಿಸಿದರೆ ಸಾಲದು, ಅವರ ಆದರ್ಶಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಸಮಾಜದ ಒಳತಿಗಾಗಿ ಶ್ರಮಿಸಬೇಕು ಎಂದು ಹೇಳಿದರು.

ಸಮಾಜದ ಯಾವುದೇ ಕೆಲಸಗಳಿದ್ದರೂ ಮಾಡಿಕೊಡಲು ಸದಾ ಸಿದ್ದನಿದ್ದೇನೆ. ನಿಮ್ಮೆಲ್ಲರ ಆಶೀರ್ವಾದದಿಂದ ಚಿಕ್ಕ ವಯಸ್ಸಿನಲ್ಲಿಯೇ ಸಂಸದನಾಗಿದ್ದೇನೆ ನಿಮ್ಮ ಆಶೀರ್ವಾದ ಸದಾ ಹೀಗೆಯೇ ಮುಂದುವರಿಯಲಿ ಎಂದರು.

ಡಾ.ರಾಮಚಂದ್ರ ಗಣಾಪೂರ ವಿಶೇಷ ಉಪನ್ಯಾಸ ನೀಡಿ, ಮಹರ್ಷಿ ವಾಲ್ಮೀಕಿಯವರು 24 ಸಾವಿರ ಶ್ಲೋಕಗಳನ್ನು ರಚಿಸಿ ಸಮಾಜಕ್ಕೆ ನೀಡಿದ್ದಾರೆ. ತ್ರೇತಾಯುಗದಿಂದ ಕಲಿಯುಗದವರೆಗೆ ಅವರ ರಾಮಾಯಣದ ಮಹಾಕಾವ್ಯ ಛಾಪು ಮೂಡಿಸಿ ಪ್ರಸಿದ್ದಿ ಪಡೆದಿದೆ. ವಾಲ್ಮೀಕಿ ಮಹರ್ಷಿ ಅವರು ಜಗತ್ತು ಮೆಚ್ಚುವಂತಹ ಕಾವ್ಯ ನೀಡಿದ್ದು ಅದರಲ್ಲಿ ರಾಜ, ಪ್ರಜೆ, ಪತಿ, ಸಹೋದರರು ಹೇಗೆ ಇರಬೇಕು ಎಂಬುದನ್ನುಬಿಂಬಿಸಿದ್ದಾರೆಮ ಅವರ ಸಂದೇಶಗಳು ಸಮಾಜಕ್ಕೆ ಮಾದರಿಯಾಗಿದೆ ಎಂದರು.

ಈ ಸಂದರ್ಭದಲ್ಲಿ ದಕ್ಷಿಣ ಕ್ಷೇತ್ರದ ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ, ಸಮಾಜದ ಜಿಲ್ಲಾಧ್ಯಕ್ಷ ಜಗನ್ನಾಥ ಜಮಾದಾರ, ಅಪರ ಜಿಲ್ಲಾಧಿಕಾರಿ ಶಿವಕುಮಾರ ಶೀಲವಂತ, ಗ್ಯಾರಂಟಿ ಯೋಜನೆಯ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಅಮೃತರಾವ್‌ ಚಿಮಕೋಡೆ, ಸಮಾಜದ ಯುವ ಮುಖಂಡ ಸುನೀಲ ಭಾವಿಕಟ್ಟಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ರಾಮ ಶಿಂಧೆ ಸೇರಿ ಅನೇಕರಿದ್ದರು.

ವಿದ್ಯಾರ್ಥಿನಿಗೆ 1ಲಕ್ಷ ರು. ಚೆಕ್‌ ವಿತರಣೆ

ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ಶಾಲೆಯ ಟೋಕರಿ ಕೋಲಿ ಸಮಾಜದ ವಿದ್ಯಾರ್ಥಿನಿ ಆರತಿ ಗಣಪತಿ ಅವರು ಎಸ್‌ಎಸ್‌ಎಲ್‌ಸಿಯಲ್ಲಿ 625ಕ್ಕೆ 620 ಅಂಕ ಗಳಿಸಿದ್ದಕ್ಕೆ ಸರ್ಕಾರದಿಂದ ₹1ಲಕ್ಷ ಚೆಕ್‌ ನೀಡಿ ಅಭಿನಂದಿಸಲಾಯಿತು.