ಸಾರಾಂಶ
ಕನ್ನಡಪ್ರಭ ವಾರ್ತೆ ವಿಜಯಪುರ
ಲಾಲ್ ಬಹಾದ್ದೂರ ಶಾಸ್ತ್ರೀ ಜಲಾಶಯದ ವ್ಯಾಪ್ತಿಗೆ ಬರುವ ಮುಳವಾಡ ಹಾಗೂ ಚಿಮ್ಮಲಗಿ ಏತ ನೀರಾವರಿಗೆ ಸಂಬಂಧಿಸಿದ ಎಲ್ಲ ಕಾಲುವೆಗಳ ಕ್ಲೋಜರ್ ಕಾಮಗಾರಿಗಳನ್ನು ನಡೆಸಲು ರಾಜ್ಯ ಸರ್ಕಾರ ಕೂಡಲೇ ಅನುದಾನ ಬಿಡುಗಡೆಗೊಳಿಸುವಂತೆ ಆಗ್ರಹಿಸಿ ಅಖಂಡ ಕರ್ನಾಟಕ ರೈತ ಸಂಘದ ಪದಾಧಿಕಾರಿಗಳು, ರೈತ ಮುಖಂಡರು ಜಿಲ್ಲಾಧಿಕಾರಿಗಳ ಮೂಲಕ ಮುಖ್ಯ ಮಂತ್ರಿಗಳಿಗೆ ಮನವಿ ಸಲ್ಲಿಸಿದರು.ಈ ಸಂದರ್ಭದಲ್ಲಿ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಮಾತನಾಡಿ, ಕ್ಲೋಜರ್ ಕಾಮಗಾರಿ ನಡೆಸಲು (ಹೂಳು ಹಾಗೂ ಗಿಡಗಂಟಿಗಳ ತೆರವುಗೊಳಿಸುವ ಕಾರ್ಯ) ಅನುದಾನ ಇಲ್ಲದ ಕಾರಣ ಕಾಲುವೆಗಳನ್ನು ತುಂಬಿರುವ ಹೂಳು ಹಾಗೂ ಗಿಡಗಂಟಿಗಳನ್ನು ತೆರವುಗೊಳಿಸಲು ಸಾಧ್ಯವಾಗುತ್ತಿಲ್ಲ ಎಂದು ಕೆಬಿಜೆಎನ್‌ಎಲ್ ಅಧಿಕಾರಿಗಳು ಹೇಳುತ್ತಿದ್ದಾರೆ. ಕಳೆದ ವರ್ಷವೂ ಕ್ಲೋಜರ್ ಕಾಮಗಾರಿ ನಡೆಸಲಿಲ್ಲ. ಇದಿರಂದ ಎಲ್ಲ ಕಾಲುವೆಗಳಲ್ಲಿ ಮಣ್ಣು ತುಂಬಿ ಗಿಡಗಂಟಿಗಳು ಬೆಳೆದಿವೆ. ಕಾಲುವೆಗಳಿಗೆ ನೀರು ಹರಿಸಿದ ಸಂದರ್ಭದಲ್ಲಿ ನೀರು ಮುಂದೆ ಸಾಗದೆ ಹೊಲಗಳಲ್ಲಿ ನೀರು ನುಗ್ಗಿ ಬೆಳೆ ಹಾಳಾಗಿ ಮಣ್ಣು ಕೂಡ ಕೊಚ್ಚಿ ಹೋಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅಲ್ಲದೇ ಕಾಲುವೆ ಕೊನೆ ಅಂಚಿನವರೆಗೆ ನೀರು ತಲುಪುವುದಿಲ್ಲ. ಇದರಿಂದ ಕೊನೆ ಅಂಚಿನಲ್ಲಿರುವ ರೈತರು ನೀರಿನಿಂದ ವಂಚಿತರಾಗುತ್ತಿದ್ದಾರೆ. ಮತ್ತು ಕೆರೆಗಳಿಗೂ ಕೂಡ ನೀರು ತಲುಪಿಲ್ಲ. ಇದರಿಂದ ಬೇಸಿಗೆ ಸಂದರ್ಭದಲ್ಲಿ ಜನ ಹಾಗೂ ಜಾನುವಾರುಗಳಿಗೆ ಕುಡಿಯುವ ನೀರಿಗೆ ತೊಂದರೆಯಾಗುತ್ತಿದೆ. ಈ ಕುರಿತು ಕೆಬಿಜೆಎನ್‌ಎಲ್ ಅಧಿಕಾರಿಗಳನ್ನು ಕೇಳಿದರೆ ಕ್ಲೋಜರ್ ಕಾಮಗಾರಿಗಳಿಗಾಗಿ ಹಣ ಬಿಡುಗಡೆಗೊಳಿಸಲು ಹಲವಾರು ಬಾರಿ ಸರ್ಕಾರಕ್ಕೆ ಮನವಿ ಮಾಡಿಕೊಂಡರು ಅನುದಾನ ಕೊಡುತ್ತಿಲ್ಲ ಎಂದು ದೂರಿದರು.ಪ್ರತಿ ವರ್ಷವೂ ಕಾಲುವೆಗಳ ನಿರ್ವಹಣಾ ವೆಚ್ಚವನ್ನು ಕಡ್ಡಾಯವಾಗಿ ರಾಜ್ಯ ಸರ್ಕಾರ ಕೊಡಬೇಕು. ಆದರೆ ಸರ್ಕಾರವು ಈ ವರ್ಷವು ಕೂಡ ಕ್ಲೋಜರ್ ಕಾಮಗಾರಿಗೆ ಹಣ ನೀಡದೆ ಆರ್ಥಿಕ ಮಿಥವ್ಯಯದ ನೆಪ ಹೇಳುತ್ತಿದೆ. ಇದರಿಂದ ಕ್ಲೋಜರ್ ಕಾಮಗಾರಿ ನಡೆಯುವುದು ಅನುಮಾನವಾಗಿದೆ. ಆದ್ದರಿಂದ ಸರ್ಕಾರ ಕೂಡಲೇ ಎಚ್ಚೆತ್ತುಕೊಂಡು ಕಾಲುವೆಗಳ ಕ್ಲೋಜರ್ ಕಾಮಗಾರಿ ನಡೆಸಲು ಅದಕ್ಕೆ ತಗಲುವ ಅನುದಾನವನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.
ಮುಖಂಡರಾದ ಸದಾಶಿವ ಬರಟಗಿ, ಹೊನಕೇರೆಪ್ಪ ತೆಲಗಿ, ಗುರಲಿಂಗಪ್ಪ ಪಡಸಲಗಿ, ಬಸವರಾಜ ಜಂಗಮಶೆಟ್ಟಿ, ಸಿಕಂದರ ಕರ್ಜಗಿ, ಸಂಪತ್‌ಕುಮಾರ ಕುಲಕರ್ಣಿ, ಸಂಜೀವ ಕುಲಕರ್ಣಿ, ಗುರುರಾಜ ಕುಲಕರ್ಣಿ, ದಾವಲಸಾಬ ನಧಾಪ್, ಗಿರಮಲ್ಲಪ್ಪ ದೊಡಮನಿ, ಚನಬಸಪ್ಪ ಸಿಂಧೂರ, ಪ್ರಹ್ಲಾದ ನಾಗರಾಳ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.