ನ್ಯಾಯಾಲಯ ಕಟ್ಟಡ ನಿರ್ಮಾಣಕ್ಕೆ ಅನುದಾನ ನೀಡಿ

| Published : Jun 17 2024, 01:33 AM IST

ಸಾರಾಂಶ

ನೂತನ ನ್ಯಾಯಾಲಯದ ಕಟ್ಟಡ ನಿರ್ಮಾಣಕ್ಕೆ ಸಂಸದರ ನಿಧಿಯಿಂದ ಅಗತ್ಯ ಅನುದಾನ ಬಿಡುಗಡೆ ಮಾಡುವಂತೆ ಕೇಂದ್ರದ ಬೃಹತ್ ಕೈಗಾರಿಕಾ ಮತ್ತು ಉಕ್ಕು ಖಾತೆ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರಿಗೆ ತಾಲೂಕಿನ ವಕೀಲರ ಸಂಘ ಶನಿವಾರ ಸಂಜೆ ಮನವಿ ಸಲ್ಲಿಸಿತು.

ಕನ್ನಡಪ್ರಭ ವಾರ್ತೆ ಮದ್ದೂರು

ನೂತನ ನ್ಯಾಯಾಲಯದ ಕಟ್ಟಡ ನಿರ್ಮಾಣಕ್ಕೆ ಸಂಸದರ ನಿಧಿಯಿಂದ ಅಗತ್ಯ ಅನುದಾನ ಬಿಡುಗಡೆ ಮಾಡುವಂತೆ ಕೇಂದ್ರದ ಬೃಹತ್ ಕೈಗಾರಿಕಾ ಮತ್ತು ಉಕ್ಕು ಖಾತೆ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರಿಗೆ ತಾಲೂಕಿನ ವಕೀಲರ ಸಂಘ ಶನಿವಾರ ಸಂಜೆ ಮನವಿ ಸಲ್ಲಿಸಿತು.ಕೇಂದ್ರ ಸಚಿವರಾದ ಬಳಿಕ ಪ್ರಥಮ ಬಾರಿಗೆ ಮಂಡ್ಯ ಜಿಲ್ಲೆಗೆ ಆಗಮಿಸಿದ್ದ ಕುಮಾರಸ್ವಾಮಿ ಅವರಿಗೆ ವಕೀಲರ ಸಂಘದ ಅಧ್ಯಕ್ಷ ಎಂ. ಎನ್. ಶಿವಣ್ಣ ನೇತೃತ್ವದಲ್ಲಿ ಸಂಘದ ಪದಾಧಿಕಾರಿಗಳು ಅಭಿನಂದನೆ ಸಲ್ಲಿಸಿ ಬಳಿಕ ಅನುದಾನ ಕೋರಿ ಮನವಿ ಸಲ್ಲಿಸಿದರು. ತಾಲೂಕು ಕೇಂದ್ರವಾಗಿರುವ ಮದ್ದೂರಿನ ಪ್ರವಾಸಿ ಮಂದಿರ ವೃತ್ತದ ಬಳಿಯಿರುವ ರೇಷ್ಮೆ ಇಲಾಖೆ ಜಾಗದಲ್ಲಿ ನೂತನ ನ್ಯಾಯಾಲಯ ಕಟ್ಟಡ ನಿರ್ಮಿಸಲು ರಾಜ್ಯ ಉಚ್ಚ ನ್ಯಾಯಾಲಯ ಸುಮಾರು 37 ಕೋಟಿ ರು. ವೆಚ್ಚದ ಕಟ್ಟಡ ಕಾಮಗಾರಿಗೆ ಅನುಮೋದನೆ ನೀಡಿದೆ.ಆದರೆ, ಸದರಿ ಕಟ್ಟಡ ಕಾಮಗಾರಿಗೆ ಆರ್ಥಿಕ ಅನುದಾನ ಬಿಡುಗಡೆ ಮಾಡಿಲ್ಲ. ಹೀಗಾಗಿ ತಮ್ಮ ಸಂಸದರ ನಿಧಿಯಿಂದ ಅಗತ್ಯ ಅನುದಾನ ವನ್ನು ಶೀಘ್ರವಾಗಿ ಬಿಡುಗಡೆ ಮಾಡುವಂತೆ ವಕೀಲರ ಸಂಘ ಕೇಂದ್ರ ಸಚಿವ ಕುಮಾರಸ್ವಾಮಿ ಅವರಿಗೆ ಬೇಡಿಕೆ ಸಲ್ಲಿಸಿತು. ತಾಲೂಕು ಕೇಂದ್ರವಾದ ಮದ್ದೂರಿನಿಂದ ಬೆಂಗಳೂರು - ಮೈಸೂರು ಹಾಗೂ ಮಂಡ್ಯ ನ್ಯಾಯಾಲಯದ ಕೆಲಸ ಕಾರ್ಯಗಳಿಗೆ ತೆರಳಲು ಸಾರಿಗೆ ಸಮಸ್ಯೆ ಇದೆ. ಅಲ್ಲದೆ ರೈಲಿನಲ್ಲಿ ಪ್ರಯಾಣಿಸಬೇಕಾದರೆ ವಕೀಲರು ಹಾಗೂ ಜನಸಾಮಾನ್ಯರು ಎರಡುವರೆ ಕಿಲೋಮೀಟರ್ ದೂರದಲ್ಲಿರುವ ರೈಲ್ವೆ ನಿಲ್ದಾಣಕ್ಕೆ ತೆರಳಲು ದುಬಾರಿ ಹಣ ತೆತ್ತು ಆಟೋದಲ್ಲಿ ಪ್ರಯಾಣಿಸಿದ ನಂತರ ರೈಲಿನಲ್ಲಿ ಪ್ರಯಾಣಿಸಬೇಕಾಗಿದೆ ಎಂದರು.ಕೇಂದ್ರದ ರೈಲ್ವೆ ಸಚಿವರೊಂದಿಗೆ ಮಾತುಕತೆ ನಡೆಸಿ ತೋಟಗಾರಿಕೆ ಇಲಾಖೆ ಬಳಿ ಉಪ ರೈಲು ನಿಲ್ದಾಣ ಸ್ಥಾಪನೆಗೆ ಅಗತ್ಯ ಅನುದಾನದ ಬಿಡುಗಡೆಯೊಂದಿಗೆ ನಿಲ್ದಾಣ ಸ್ಥಾಪನೆಗೆ ಒತ್ತಾಯ ಮಾಡುವಂತೆ ಮನವಿ ಪತ್ರದಲ್ಲಿ ಆಗ್ರಹಿಸಿದರು.ಬೆಂಗಳೂರು - ಮೈಸೂರು ರಾಷ್ಟ್ರೀಯ ಹೆದ್ದಾರಿ ನಿರ್ಮಾಣದ ವೇಳೆ ಸರ್ವಿಸ್ ರಸ್ತೆ ಎರಡು ಬದಿಗಳಲ್ಲಿ ಮಳೆ ನೀರು ಹೊರ ಹೋಗಲು ಅಗತ್ಯ ಚರಂಡಿ ವ್ಯವಸ್ಥೆ ಇಲ್ಲ. ಈ ಹಿನ್ನೆಲೆಯಲ್ಲಿ ಸರ್ವಿಸ್ ರಸ್ತೆ ಕಾಮಗಾರಿಯನ್ನು ಶೀಘ್ರವಾಗಿ ಪೂರ್ಣ ಗೊಳಿಸುವಂತೆ ಕೇಂದ್ರ ಸಾರಿಗೆ ಸಚಿವರು ಮತ್ತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದೊಂದಿಗೆ ಮಾತುಕತೆ ನಡೆಸುವಂತೆ ವಕೀಲರ ಸಂಘ ಕೇಂದ್ರ ಸಚಿವ ಕುಮಾರಸ್ವಾಮಿ ಅವರಿಗೆ ಮನವಿ ಪತ್ರದ ಮೂಲಕ ಒತ್ತಾಯಿಸಿತು. ಈ ವೇಳೆ ವಕೀಲರ ಸಂಘದ ಉಪಾಧ್ಯಕ್ಷ ಎ.ಎಂ. ಪುಟ್ಟರಾಜು, ಪ್ರಧಾನ ಕಾರ್ಯದರ್ಶಿ ಎಂ.ಜೆ.ಸುಮಂತ್, ಜಂಟಿ ಕಾರ್ಯದರ್ಶಿ ಬಿ. ಸುವರ್ಣ, ಖಜಾಂಚಿ ಪ್ರಸನ್ನ, ಹಿರಿಯ ವಕೀಲರಾದ ಅಶೋಕ್ ಕುಮಾರ್, ದೇಶಹಳ್ಳಿ ಸ್ವಾಮಿ, ಕಮಲಮ್ಮ, ಕೋಮಲ, ತ್ರಿವೇಣಿ, ಯದು ನಂದನ್, ವಿ.ಟಿ. ರವಿಕುಮಾರ್, ವಿ.ಎಸ್.ನಾಗರಾಜು, ನಾಗೇಶ, ಸುನೀಲ್, ಶೇಖರ್, ಮಧುಸೂದನ್ ಹಾಗೂ ಸಂಘದ ಪದಾಧಿಕಾರಿಗಳಿದ್ದರು.