ರೇಷ್ಮೆ ಕೃಷಿಯಲ್ಲಿ ಹಿಪ್ಪುನೇರಳೆ ಬೆಳೆ ನಿರ್ವಹಣೆ ಅತ್ಯಂತ ಪ್ರಮುಖವಾಗಿದೆ. ನೀರಿನ ಸಮರ್ಪಕ ಬಳಕೆ, ಉತ್ತಮ ಗುಣಮಟ್ಟದ ಹಿಪ್ಪುನೇರಳೆ ಎಲೆಗಳ ಉತ್ಪಾದನೆ ಹಾಗೂ ವೈಜ್ಞಾನಿಕ ವಿಧಾನದಲ್ಲಿ ಬೆಳೆ ನಿರ್ವಹಣೆ ಮಾಡುವುದರಿಂದ ರೇಷ್ಮೆ ಹುಳು ಸಾಕಾಣಿಕೆಗೆ ಅನುಕೂಲವಾಗುತ್ತದೆ.
ಕನ್ನಡಪ್ರಭ ವಾರ್ತೆ ಕೆ.ಎಂ.ದೊಡ್ಡಿ
ರೇಷ್ಮೆ ಕೃಷಿಯಲ್ಲಿ ಉತ್ತಮ ಇಳುವರಿ ಪಡೆಯಲು ರೈತರು ಹನಿ ನೀರಾವರಿ ಪದ್ಧತಿಗೆ ಹೆಚ್ಚಿನ ಆದ್ಯತೆ ನೀಡುವ ಜೊತೆಗೆ ವೈಜ್ಞಾನಿಕ ಕೃಷಿ ಪದ್ಧತಿ ಅಳವಡಿಸಿಕೊಂಡು ಲಾಭದತ್ತ ಮುನ್ನಡೆಯುವಂತೆ ಕೆ.ಆರ್.ಪೇಟೆ ರೇಷ್ಮೆ ತರಬೇತಿ ಶಾಲೆ ಪ್ರಾಂಶುಪಾಲ ಬಿ.ಸೋಮಣ್ಣ ಸಲಹೆ ನೀಡಿದರು.ಸಮೀಪದ ಪುಟ್ಟೇಗೌಡನದೊಡ್ಡಿಯ ತಿಬ್ಬಾದೇವಿ ಚಾಕಿ ಸಾಕಾಣಿಕೆ ಕೇಂದ್ರದ ಆವರಣದಲ್ಲಿ ನಡೆದ ದ್ವಿತಳಿ ರೇಷ್ಮೆ ಬೆಳೆ ಕ್ಷೇತ್ರೋತ್ಸವದಲ್ಲಿ ಮಾತನಾಡಿ, ರೇಷ್ಮೆ ಕೃಷಿಯಲ್ಲಿ ಹಿಪ್ಪುನೇರಳೆ ಬೆಳೆ ನಿರ್ವಹಣೆ ಅತ್ಯಂತ ಪ್ರಮುಖವಾಗಿದೆ. ನೀರಿನ ಸಮರ್ಪಕ ಬಳಕೆ, ಉತ್ತಮ ಗುಣಮಟ್ಟದ ಹಿಪ್ಪುನೇರಳೆ ಎಲೆಗಳ ಉತ್ಪಾದನೆ ಹಾಗೂ ವೈಜ್ಞಾನಿಕ ವಿಧಾನದಲ್ಲಿ ಬೆಳೆ ನಿರ್ವಹಣೆ ಮಾಡುವುದರಿಂದ ರೇಷ್ಮೆ ಹುಳು ಸಾಕಾಣಿಕೆಗೆ ಅನುಕೂಲವಾಗುತ್ತದೆ ಎಂದರು.
ಹಿಂದಿನ ಕೃಷಿ ಪದ್ಧತಿಯನ್ನೇ ಮುಂದುವರೆಸದೇ ಆಧುನಿಕ ತಂತ್ರಜ್ಞಾನ ಬಳಸಿಕೊಂಡು ಕೃಷಿ ವೆಚ್ಚ ಕಡಿಮೆ ಮಾಡಿ ಉತ್ಪಾದಕತೆ ಹೆಚ್ಚಿಸಿಕೊಳ್ಳಲು ಮುಂದಾಗಬೇಕು ಎಂದು ರೈತರಿಗೆ ತಿಳಿ ಹೇಳಿದರು.ಮದ್ದೂರು ತಾಲೂಕು ರೇಷ್ಮೆ ಇಲಾಖೆ ಸಹಾಯಕ ನಿರ್ದೇಶಕ ಕೆ.ಎಸ್.ಕೃಷ್ಣಬಾಬು ಮಾತನಾಡಿ, ರೇಷ್ಮೆ ಕೃಷಿ ಉತ್ತೇಜಿಸುವ ಉದ್ದೇಶದಿಂದ ಇಲಾಖೆಯಿಂದ ರೈತರಿಗೆ ಸಹಾಯ ಧನ, ಕೃಷಿ ಉಪಕರಣಗಳು ಹಾಗೂ ಹುಳು ಸಾಕಾಣಿಕೆ ಮನೆ ನಿರ್ಮಾಣಕ್ಕೆ ಸಂಬಂಧಿಸಿದ ಸೌಲಭ್ಯಗಳ ಕುರಿತು ರೈತರು ಮಾಹಿತಿ ಪಡೆದು ಅವುಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದರು.
ರೇಷ್ಮೆ ಕೃಷಿಯಲ್ಲಿನ ಸಮಸ್ಯೆಗಳಿಗೆ ಇಲಾಖೆ ಅಧಿಕಾರಿಗಳಿಂದ ಸೂಕ್ತ ಮಾರ್ಗದರ್ಶನ ಪಡೆದು ಸುಧಾರಿತ ಕೃಷಿ ಪದ್ಧತಿಗಳನ್ನು ಅನುಸರಿಸುವ ಮೂಲಕ ಗುಣಮಟ್ಟದ ರೇಷ್ಮೆ ಉತ್ಪಾದನೆಗೆ ಒತ್ತು ನೀಡಬೇಕು ಎಂದರು.ರೇಷ್ಮೆ ಕೃಷಿ ವಿಜ್ಞಾನಿ ಡಾ.ಶಿವಕುಮಾರ್ ಮಾತನಾಡಿ, ರೇಷ್ಮೆ ಕೃಷಿಯಲ್ಲಿ ಹಿಪ್ಪುನೇರಳೆ ತೋಟದ ಸಮರ್ಪಕ ನಿರ್ವಹಣೆ, ನೀರಿನ ಬಳಕೆ ವಿಧಾನ, ಬೆಳೆಗಳ ಪೋಷಣೆ ಹಾಗೂ ರೇಷ್ಮೆ ಹುಳು ಸಾಕಾಣಿಕೆಯಲ್ಲಿ ಸ್ವಚ್ಛತೆ ಮತ್ತು ವೈಜ್ಞಾನಿಕ ಕ್ರಮಗಳನ್ನು ಪಾಲಿಸುವುದು ಮುಖ್ಯವಾಗಿದೆ ಎಂದರು.
ರೈತರು ಕಾಲಕಾಲಕ್ಕೆ ತೋಟದ ನಿರ್ವಹಣೆ ಮಾಡಬೇಕು. ಹಿಪ್ಪುನೇರಳೆ ಬೆಳೆಯ ಗುಣಮಟ್ಟ ಕಾಪಾಡಿಕೊಂಡು ರೇಷ್ಮೆ ಹುಳುಗಳಿಗೆ ಉತ್ತಮ ಆಹಾರ ಒದಗಿಸಿದಾಗ ಉತ್ತಮ ಫಸಲು ಪಡೆಯಲು ಸಾಧ್ಯವಾಗುತ್ತದೆ ಎಂದರು.ಕ್ಷೇತ್ರೋತ್ಸವದ ಮೂಲಕ ರೈತರಿಗೆ ರೇಷ್ಮೆ ಕೃಷಿಯ ಸುಧಾರಿತ ವಿಧಾನಗಳು, ಬೆಳೆ ನಿರ್ವಹಣೆ ಹಾಗೂ ಇಲಾಖೆಯ ಸೌಲಭ್ಯಗಳ ಕುರಿತು ಮಾಹಿತಿ ನೀಡಲಾಯಿತು.
ಕಾರ್ಯಕ್ರಮದಲ್ಲಿ ಕೆ.ಎಂ.ದೊಡ್ಡಿ ತಾಂತ್ರಿಕ ಸೇವಾ ಕೇಂದ್ರದ ರೇಷ್ಮೆ ಕೃಷಿ ವಿಸ್ತರಣಾಧಿಕಾರಿ ಎಚ್.ಸಿ.ಸಿದ್ದರಮೇಶ, ರೇಷ್ಮೆ ವಿಸ್ತರಣಾಧಿಕಾರಿಗಳಾದ ಬಿ.ಎನ್.ಪ್ರಶಾಂತ್ಕುಮಾರ್, ಎ.ಎಲ್.ಭಾಸ್ಕರ್, ರೇಷ್ಮೆ ನಿರೀಕ್ಷಕ ಅರುಣಕುಮಾರ್, ಯು.ಎಸ್. ಕೃಷ್ಣ, ತಿಬ್ಬಾದೇವಿ ಚಾಕಿ ಸಾಕಾಣಿಕೆ ಕೇಂದ್ರದ ಮನುಗೌಡ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.