ಸಾವಯವ ಕೃಷಿಗೆ ಹೆಚ್ಚಿನ ಆದ್ಯತೆ ನೀಡಿ: ಕೆ.ಸಿ.ಹೊರಕೇರಪ್ಪ

| Published : Mar 18 2025, 12:36 AM IST

ಸಾರಾಂಶ

ಬೆಂಗಳೂರಿನ ಕೃಷಿ ಸಚಿವಾಲಯದ ಸಮೃದ್ಧಿ ಸಭಾಂಗಣದಲ್ಲಿ ಕೃಷಿ ವಿಶ್ವ ವಿದ್ಯಾಲಯದ ಬೆಳೆ ಉತ್ಪಾದನಾ ವೆಚ್ಚ ಮತ್ತು ಮಾರುಕಟ್ಟೆ ಮಾಹಿತಿ ಘಟಕದ ಸಹಯೋಗದಲ್ಲಿ ರೈತರೊಂದಿಗೆ ಸಮಾಲೋಚನಾ ಸಭೆ ಮತ್ತು ಸಂವಾದ ಕಾರ್ಯಕ್ರಮ ನಡೆಯಿತು.

ಕನ್ನಡಪ್ರಭ ವಾರ್ತೆ ಹಿರಿಯೂರು

ಬೆಂಗಳೂರಿನ ಕೃಷಿ ಸಚಿವಾಲಯದ ಸಮೃದ್ಧಿ ಸಭಾಂಗಣದಲ್ಲಿ ಕೃಷಿ ವಿಶ್ವ ವಿದ್ಯಾಲಯದ ಬೆಳೆ ಉತ್ಪಾದನಾ ವೆಚ್ಚ ಮತ್ತು ಮಾರುಕಟ್ಟೆ ಮಾಹಿತಿ ಘಟಕದ ಸಹಯೋಗದಲ್ಲಿ ರೈತರೊಂದಿಗೆ ಸಮಾಲೋಚನಾ ಸಭೆ ಮತ್ತು ಸಂವಾದ ಕಾರ್ಯಕ್ರಮವು ನೂತನ ಕೃಷಿ ಬೆಲೆ ಆಯೋಗದ ಅಧ್ಯಕ್ಷ ಡಾ.ಅಶೋಕ್ ಎಂ.ದಳವಾಯಿಯವರ ಅಧ್ಯಕ್ಷತೆಯಲ್ಲಿ ನಡೆಯಿತು.

ಕೃಷಿ ಬೆಲೆ ಆಯೋಗದ ಸದಸ್ಯರಾದ ಡಿಎಚ್ ಪೂಜಾರ್, ಎಸ್.ಆರ್.ಗಾದಿಲಿಂಗನಗೌಡ ಮತ್ತು ಬೆಳೆ ಅಭಿವೃದ್ಧಿ ಮತ್ತು ಯೋಜನೆ ಅಪರ ಕೃಷಿ ನಿರ್ದೇಶಕ ಬಾಲರೆಡ್ಡಿಯವರ ನೇತೃತ್ವದಲ್ಲಿ ಸಂವಾದ ಸಭೆ ನಡೆಯಿತು.

ಈ ವೇಳೆ ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ವಿಭಾಗೀಯ ಉಪಾಧ್ಯಕ್ಷ ಕೆ.ಸಿ.ಹೊರಕೇರಪ್ಪ ಸಭೆಯಲ್ಲಿ ಮಾತನಾಡಿ, ಇತ್ತೀಚಿನ ವರ್ಷಗಳಲ್ಲಿ ರೈತರು ರಾಸಾಯನಿಕ ಗೊಬ್ಬರ ಮತ್ತು ರೋಗ ನಿರೋಧಕ ಔಷಧಿಗಳನ್ನು ಬೆಳೆಗಳಿಗೆ ಅತಿ ಹೆಚ್ಚಾಗಿ ಸಿಂಪಡಿಸುತ್ತಿದ್ದು, ವಿಷಕಾರಿ ಆಹಾರ ಪದಾರ್ಥ, ತರಕಾರಿ, ಹಣ್ಣು ಹಂಫಲು ಬೆಳೆದು ಸೇವಿಸುವುದರಿಂದ ಆರೋಗ್ಯದ ಮೇಲೆ ತೀವ್ರ ದುಷ್ಪರಿಣಾಮ ಉಂಟಾಗುತ್ತಿದೆ. ಇದರಿಂದಾಗಿ ಜನಸಾಮಾನ್ಯರಿಗೆ ಅನೇಕ ರೋಗಗಳು ಹರಡುತ್ತಿದ್ದು ಚಿಕ್ಕ ಮಕ್ಕಳಿಂದ ವಯೋವೃದ್ಧರವರೆಗೂ ವಿಷಕಾರಿ ಆಹಾರ ಸೇವನೆಯ ದುಷ್ಪರಿಣಾಮಕ್ಕೆ ಒಳಗಾಗುತ್ತಿದ್ದಾರೆ.

ಸಾವುಗಳು ಸಹ ಸಂಭವಿಸುತ್ತಿದ್ದು ಅನೇಕ ಕುಟುಂಬಗಳು ಬೀದಿ ಪಾಲಾಗುತ್ತಿದ್ದು ಇದನ್ನು ತಡೆಗಟ್ಟುವ ಸಲುವಾಗಿ ರಾಜ್ಯದಲ್ಲಿ ಹೆಚ್ಚಿನ ರೀತಿಯಲ್ಲಿ ಸಾವಯವ ಕೃಷಿಗೆ ಒತ್ತು ನೀಡಬೇಕು. ಆಂಧ್ರಪ್ರದೇಶದಲ್ಲಿ ಅಲ್ಲಿನ ಸರ್ಕಾರವು ಪ್ರತಿ ರೈತ ಕುಟುಂಬಕ್ಕೂ ರೈತ ಮಿತ್ರ ಯೋಜನೆಯಲ್ಲಿ 15,000 ರು. ನೀಡಿ ರೈತರನ್ನು ಉತ್ತೇಜಿಸುತ್ತಿದೆ. ತೀವ್ರ ಬರಗಾಲದ ಸಂದರ್ಭದಲ್ಲಿ ರೈತರ ಬೆಳೆಗಳನ್ನು ಉಳಿಸಿಕೊಳ್ಳಲು ಟ್ಯಾಂಕರ್‌ಗಳ ಮೂಲಕ ಬೆಳೆಗಳಿಗೆ ಉಚಿತವಾಗಿ ನೀರು ಒದಗಿಸುತ್ತಿದೆ. ರೈತರು ತಾವು ಬೆಳೆದ ಬೆಳೆಗಳನ್ನು ಸಂರಕ್ಷಿಸಲು ಶೀತಲ ಸಂಗ್ರಹಗಾರಗಳನ್ನು ಪ್ರತಿ ಗ್ರಾಮಗಳಲ್ಲಿಯೂ ಸ್ಥಾಪಿಸಿದ್ದು ಕರ್ನಾಟಕ ರಾಜ್ಯದಲ್ಲಿಯೂ ಸಹ ಆಂಧ್ರಪ್ರದೇಶ ಮಾದರಿಯಲ್ಲಿ ರೈತರ ಜಮೀನುಗಳನ್ನು ಉಳುಮೆ ಮಾಡಲು ಮತ್ತು ಬಿತ್ತನೆ ಬೀಜ ಖರೀದಿಸಲು ರೈತರಿಗೆ ಆರ್ಥಿಕ ಸಹಾಯ ನೀಡುವಂತೆ ಸರ್ಕಾರಕ್ಕೆ ವರದಿ ನೀಡುವಂತೆ ಒತ್ತಾಯಿಸಬೇಕು.

ರೈತರಿಗೆ ಸಿರಿ ಧಾನ್ಯಗಳನ್ನು ಅತಿ ಹೆಚ್ಚು ಬೆಳೆಯಲು ಪ್ರೆರೇಪಿಸಿ ಅವುಗಳಿಗೆ ಮಾರುಕಟ್ಟೆ ಒದಗಿಸಿ ಲಾಭದಾಯಕ ಬೆಲೆ ನೀಡಬೇಕು ಎಂದರು.

ರೈತರಿಗೆ ಸರ್ಕಾರ ಹೆಚ್ಚಿನ ಆರ್ಥಿಕ ನೆರವು ನೀಡುವಂತೆ ಶಿಫಾರಸು ಮಾಡಲು ಸಭೆಯಲ್ಲಿ ಕೋರಲಾಯಿತು.

ಈ ವೇಳೆ ಜಿಲ್ಲೆಯ ರೈತ ಮುಖಂಡರಾದ ಈಚಗಟ್ಟ ಸಿದ್ಧವೀರಪ್ಪ, ಚಿತ್ರದುರ್ಗದ ಧನಂಜಯ, ಹೊಸದುರ್ಗದ ಶಶಿಧರ ಮುಂತಾದವರು ಉಪಸ್ಥಿತರಿದ್ದರು.