ಸಾರಾಂಶ
ರಾಣಿಬೆನ್ನೂರು: ತಾಲೂಕಿನ ಹುಲಿಹಳ್ಳಿ ಬಳಿಯ ಎಪಿಎಂಸಿ ಮೆಗಾ ಮಾರುಕಟ್ಟೆಯಲ್ಲಿ ಹಮಾಲರಿಗೆ ವಸತಿ ಯೋಜನೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನಗರದ ಚೌಡೇಶ್ವರಿ ಹಮಾಲರ ಸಂಘದ ಸದಸ್ಯರು ಬುಧವಾರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಕಾರ್ಯದರ್ಶಿ ಶೈಲಜಾ ಎಂ.ವಿ. ಅವರಿಗೆ ಮನವಿ ಸಲ್ಲಿಸಿದರು.
ಹಮಾಲರ ಸಂಘದ ಜಿಲ್ಲಾಧ್ಯಕ್ಷ ಮಲ್ಲೇಶಪ್ಪ ಮದ್ಲೇರ ಮಾತನಾಡಿ, ಇಲ್ಲಿಯ ಎಪಿಎಂಸಿಯಲ್ಲಿ ಸುಮಾರು 45ರಿಂದ 50 ವರ್ಷಗಳಿಂದ ಹಮಾಲರು ಕಾರ್ಯ ನಿರ್ವಹಿಸುತ್ತಿದ್ದಾರೆ. ಆದರೆ ಅವರಿಗೆ ಸರ್ಕಾರದಿಂದ ವಸತಿ ಯೋಜನೆ ಅಡಿಯಲ್ಲಿ ಮನೆಗಳನ್ನು ನೀಡಿಲ್ಲ. ಈಗ ಮಾರುಕಟ್ಟೆ ಸ್ಥಳಾಂತರಗೊಂಡಿದ್ದು, ಅಲ್ಲಿ ವಸತಿ ಸೌಕರ್ಯ ಇಲ್ಲ. ಈಗಿರುವ ಮಾರುಕಟ್ಟೆಯಿಂದ ಹೊಸ ಮಾರುಕಟ್ಟೆ ಸುಮಾರು 8ರಿಂದ 10 ಕಿ.ಮೀ. ದೂರವಿದೆ. ಅನೇಕ ಬಾರಿ ವಸತಿ ಯೋಜನೆಯಡಿ ಮನೆ ನೀಡುವಂತೆ ನಾವು ಅರ್ಜಿ ಸಲ್ಲಿಸುತ್ತಾ ಬಂದಿದ್ದೇವೆ. ಅನೇಕ ಎಪಿಎಂಸಿ ಮಾರುಕಟ್ಟೆಯಲ್ಲಿ ಹಮಾಲರಿಗೆ ವಸತಿ ಯೋಜನೆಯ ಸೌಲಭ್ಯ ಸಿಕ್ಕಿದೆ. ಆದರೆ ನಮ್ಮ ಸಂಘದ ಹಮಾಲರಿಗೆ ಇದುವರೆಗೂ ಯಾವುದೇ ವಸತಿ ಯೋಜನೆಯ ಸೌಲಭ್ಯ ಸಿಕ್ಕಿಲ್ಲ. ನಮ್ಮನ್ನು ನಿರ್ಲಕ್ಷಿಸುತ್ತಿರುವುದು ತೀರಾ ನೋವುಂಟು ಮಾಡಿದೆ ಎಂದು ಹೇಳಿದರು.ಹಮಾಲರಿಗೆ ಸಮಿತಿ ನಿಯಮದಂತೆ ಪ್ರತಿ ಒಂದು ಅಂಡಿಗೆಯನ್ನು ಗಾಡಿಯಿಂದ ಇಳಿಸಿ ಕಾಟಾ ಮಾಡಿ ಸಾಲಿಗೆ ಬಿಟ್ಟು ಸ್ಯಾಂಪಲ್ ತೆಗೆಯುವುದಕ್ಕೆ ₹45, ಹಸಿ ಗೋವಿನ ಜೋಳವನ್ನು ಗಾಡಿಯಿಂದ ಇಳಿಸಿ ಹರಡಿ ಒಣಗಿಸಿ ದುಂಡು ಮಾಡಿ ಕಾಟಾ ಮಾಡುವುದಕ್ಕೆ ಪ್ರತಿ ಒಂದು ಚೀಲಕ್ಕೆ ₹40, ಒಣಗಿದ ಜೋಳಕ್ಕೆ ಮತ್ತು ಇತರ ಉತ್ಪನ್ನಗಳಿಗೆ ಗಾಡಿಯಿಂದ ಇಳಿಸಿ, ತುಂಬಿ, ಕಾಟಾ ಮಾಡುವುದಕ್ಕೆ ಪ್ರತಿ ಒಂದು ಚೀಲಕ್ಕೆ ₹20, ಖರೀದಿದಾರರಿಂದ ಪ್ರತಿ ಒಂದು ಅಂಡಿಗೆಗೆ ₹20 ಮತ್ತು ಇತರ ಧಾನ್ಯಗಳಿಗೆ ಪ್ರತಿ ಒಂದು ಚೀಲಕ್ಕೆ ₹15 ನಿಗದಿಪಡಿಸಿ ಹಮಾಲಿ ಕೊಡಿಸಬೇಕು. ಹಮಾಲಿ ದರಗಳನ್ನು ಪ್ರತಿ ಮೂರು ವರ್ಷಕ್ಕೊಮ್ಮೆ ಹೆಚ್ಚಿಗೆ ಮಾಡಬೇಕು. ಆದರೆ ಸುಮಾರು 9 ವರ್ಷಗಳಿಂದ ದರ ಹೆಚ್ಚಿಸಿಲ್ಲ. ಈ ಎಲ್ಲವೂ ಪರಿಶೀಲಿಸಿ, ನಮ್ಮ ಬೇಡಿಕೆಗಳನ್ನೂ ಈಡೇರಿಸಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಹಮಾಲಿ ಕಾರ್ಯವನ್ನು ಸ್ಥಗಿತಗೊಳಿಸಿ ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಸಿದರು.
ಹಮಾಲರ ಸಂಘದ ಕಾರ್ಯದರ್ಶಿ ಪರಶು ಹೇಳವರ, ನಾಗಪ್ಪ ಚನ್ನಕೇರಿ, ಚಿಗರಿ ಬಸವರಾಜ ಮತ್ತಿತರರಿದ್ದರು.