ಸಾರಾಂಶ
ಕನ್ನಡಪ್ರಭ ವಾತೆ ಬಾಗಲಕೋಟೆ
ತೋಟಗಾರಿಕೆಯಲ್ಲಿ ಗುಣಮಟ್ಟದ ಉತ್ಪಾದನೆಯೆಂದರೆ ಪೌಷ್ಟಿಕತೆಯೇ ಆಗಿದ್ದು, ತಳಿ ಅಭಿವೃದ್ಧಿಯಲ್ಲಿ ಕೇವಲ ಇಳುವರಿಗೆ ಪ್ರಾಮುಖ್ಯತೆ ನೀಡದೇ ಪೋಷಕಾಂಶ ಮತ್ತು ರುಚಿಗಳಿಗೆ ಆದ್ಯತೆ ನೀಡಬೇಕೆಂದು ಯುಎಸ್ಎ ಟೆಕ್ಸಾಸ್ ಎ ಮತ್ತು ಎಂ ವಿಶ್ವವಿದ್ಯಾಲಯದ ತರಕಾರಿ ಮತ್ತು ಹಣ್ಣು ಅಭಿವೃದ್ಧಿ ಕೇಂದ್ರದ ನಿರ್ದೇಶಕ ಡಾ.ಭೀಮನಗೌಡ ಪಾಟೀಲ ಹೇಳಿದರು.ತೋಟಗಾರಿಕೆ ವಿವಿಯ ಪ್ರೇಕ್ಷಾಗೃಹದಲ್ಲಿ ಶನಿವಾರ ಹಮ್ಮಿಕೊಂಡ ತೋವಿವಿ 17ನೇ ಸಂಸ್ಥಾಪನೆ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಹಣ್ಣು ಮತ್ತು ತರಕಾರಿಗಳ ಸೇವನೆ ಆರೋಗ್ಯಕರ ಹವ್ಯಾಸವಾಗಿದ್ದು, ಇಂದಿನ ಮಕ್ಕಳಿಗೆ ಇವುಗಳ ಸೇವನೆಯ ಮಹತ್ವ ತಿಳಿಸಿಕೊಡುವುದು ಅವಶ್ಯಕವಾಗಿದೆ. ಇಂದು ತೋಟಗಾರಿಕೆ ಕ್ಷೇತ್ರದಲ್ಲಿ ಉತ್ಪಾದನೆ ಜೊತೆಗೆ ಹಣ್ಣು ಮತ್ತು ತರಕಾರಿಗಳ ಸೇವನೆಯ ಮಹತ್ವವನ್ನು ಜನಪ್ರಿಯಗೊಳಿಸಬೇಕಿದೆ ಎಂದು ತಿಳಿಸಿದರು.
ತೋಟಗಾರಿಕೆ ಇಲಾಖೆಯ ನಿವೃತ್ತ ಅಪರ ನಿರ್ದೇಶಕ ಹಾಗೂ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಷ್ಕೃತ ಡಾ.ಎಸ್.ವಿ. ಹಿತ್ತಲಮನಿ ಮಾತನಾಡಿ, ಆಹಾರ ಫ್ಯಾಕ್ಟರಿಯಲ್ಲಿ ಬೆಳೆಯುವುದಿಲ್ಲ, ಹೊಲದಲ್ಲಿ ಬೆಳೆಯಲಾಗುತ್ತದೆ. ಅದನ್ನು ಬೆಳೆಯುವ ರೈತ ಅನ್ನದಾತ, ಹೀಗಾಗಿ ರೈತನಿಗೆ ಎಲ್ಲರೂ ಕೃತಜ್ಞರಾಗಿರಬೇಕು. ರೈತನಿಗೆ ಸಹಾಯ ಹಸ್ತ ನೀಡುವ ತೋವಿವಿ ಸದಾಕಾಲ ಬೆಳೆಯಬೇಕು. ಒಡಂಬಡಿಕೆ ಮಾಡಿಕೊಂಡು ವಿಶ್ವವಿದ್ಯಾಲಯ ಅಭಿವೃದ್ಧಿಪಡಿಸಬೇಕು. ರೈತರ ಅಭಿವೃದ್ಧಿಗಾಗಿಯೇ ಮುಂದಿನ ಕೆಲವು ವರ್ಷಗಳ ಧ್ಯೇಯೋದ್ದೇಶ ಇಟ್ಟುಕೊಳ್ಳಬೇಕು. ನೀವು ಜಗತ್ತಿಗೆ ಏನು ನೀಡುತ್ತಿರೋ, ಜಗತ್ತು ಮರಳಿ ನಿಮಗೆ ನೀಡುತ್ತದೆ ಎಂದು ಹೇಳಿದರು.ವಿಧಾನ ಪರಿಷತ್ ಸದಸ್ಯ ಹಾಗೂ ತೋಟಗಾರಿಕೆ ವಿವಿಯ ವ್ಯವಸ್ಥಾಪನೆ ಮಂಡಳಿ ಸದಸ್ಯ ಹನುಮಂತ ನಿರಾಣಿ ಮಾತನಾಡಿ, ವಿಶ್ವವಿದ್ಯಾಲಯಗಳು ಬೆಳೆದಲ್ಲಿ ರೈತರು ಬೆಳೆಯುತ್ತಾರೆ. ಒಂದು ಕಾಲದಲ್ಲಿ ಆಹಾರ ಉತ್ಪಾದನೆಯಲ್ಲಿ ಕಡಿಮೆಯಾಗಿ ಒಂದು ಹೊತ್ತು ಊಟ ಬಿಡುವ ಪರಿಸ್ಥಿತಿ ಉಂಟಾಗಿತ್ತು. ಆದರೆ ಈಗ ವಿಜ್ಞಾನಿಗಳ ಹೊಸ ಹೊಸ ಸಂಶೋಧನೆಯಿಂದ ಆಹಾರ ಉತ್ಪಾದನೆ ಹೆಚ್ಚಾಗಿದೆ. ರೈತರು ಸುಗಮವಾಗಿ ಕೆಲಸ ಮಾಡುವಂತೆ ಆಗಬೇಕು. ಈ ನಿಟ್ಟಿನಲ್ಲಿ ವಿಶ್ವವಿದ್ಯಾಲಯ ಕೆಲಸ ಮಾಡಬೇಕು ಎಂದರು.
ತೋಟಗಾರಿಕೆ ವಿವಿಯ ನಿವೃತ್ತ ಕುಲಪತಿ ಡಾ.ದಂಡೀನ ಮಾತನಾಡಿ, ಆಹಾರ, ಆರೋಗ್ಯ, ಆದಾಯಕ್ಕೆ ತೋಟಗಾರಿಕೆ ಎಂಬ ಹೇಳಿಕೆ ಜನಪ್ರಿಯವಾಗಲಿದೆ. ಮುಂದೊಂದು ದಿನ ಇಡೀ ಜಗತ್ತಿಗೆ ಆಹಾರ ಒದಗಿಸುವ ದೇಶ ಭಾರತ ಎಂದು ಹೆಮ್ಮೆಯಿಂದ ಹೇಳಬೇಕಿದೆ ಎಂದರು.ತೋಟಗಾರಿಕೆ ವಿವಿಯ ವ್ಯವಸ್ಥಾಪನಾ ಮಂಡಳಿ ಸದಸ್ಯ ಡಾ.ಎಸ್.ಎನ್. ವಾಸುದೇವನ, ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತೋವಿವಿಯ ಕುಲಪತಿ ಡಾ.ವಿಷ್ಣುವರ್ಧನ ಮಾತನಾಡಿದರು.
ತೋಟಗಾರಿಕೆ ವಿವಿಯ ಕುಲಸಚಿವರಾದ ಡಾ.ಜನಾರ್ಧನ ಜಿ, ತೋವಿವಿಯ ಪ್ರಗತಿಯ ಪಕ್ಷಿನೋಟ ಪ್ರಸ್ತುತ ಪಡಿಸಿದರು. ಈ ವೇಳೆ ಸಂಶೋಧನೆಯ ವಿವಿಧ ಪ್ರಕಟಣೆಗಳು ಹಾಗೂ ಅತ್ಯುತ್ತಮ ಸಾಧನೆಗೈದ ಶಿಕ್ಷಕ, ಶಿಕ್ಷಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಮತ್ತು ನಿವೃತ್ತ ನೌಕರರನ್ನು ಸನ್ಮಾನಿಸಲಾಯಿತು.ತೋಟಗಾರಿಕೆ ವಿವಿಯ ವ್ಯವಸ್ಥಾಪನೆ ಮಂಡಳಿ ಸದಸ್ಯ ಮಹಾಂತೇಶಗೌಡ ಪಾಟೀಲ, ಸಂಶೋಧನಾ ನಿರ್ದೇಶಕ ಡಾ.ಬಿ.ಪ್ರಕ್ರುದ್ದಿನ್, ಶಿಕ್ಷಣ ನಿರ್ದೇಶಕ ಡಾ.ಎನ್.ಕೆ. ಹೆಗಡೆ, ಡೀನ್ ಸ್ನಾತಕೋತ್ತರ ಡಾ.ತಮ್ಮಯ್ಯ ಎನ್, ಡೀನ್ ವಿದ್ಯಾರ್ಥಿ ಕಲ್ಯಾಣ ಡಾ.ರಾಮಚಂದ್ರ ನಾಯ್ಕ ಸೇರಿದಂತೆ ಇತರರು ಉಪಸ್ಥಿತರಿದ್ದರು.
;Resize=(128,128))
;Resize=(128,128))
;Resize=(128,128))
;Resize=(128,128))