ವ್ಯಾಸಂಗದ ಜೊತೆ ಕೌಶಲ್ಯಾಧಾರಿತ ಚಟುವಟಿಕೆಗಳಿಗೂ ಪ್ರಾಮುಖ್ಯತೆ ನೀಡಿ: ವಿಜ್ಞಾನಿ ಶ್ರೀಧರ್ ಕುಲಕರ್ಣಿ

| Published : Nov 10 2025, 12:45 AM IST

ವ್ಯಾಸಂಗದ ಜೊತೆ ಕೌಶಲ್ಯಾಧಾರಿತ ಚಟುವಟಿಕೆಗಳಿಗೂ ಪ್ರಾಮುಖ್ಯತೆ ನೀಡಿ: ವಿಜ್ಞಾನಿ ಶ್ರೀಧರ್ ಕುಲಕರ್ಣಿ
Share this Article
  • FB
  • TW
  • Linkdin
  • Email

ಸಾರಾಂಶ

ಪ್ರತಿಯೊಂದು ಕೆಲಸವೂ ಸಂಘಟಿತವಾಗಿ ನಿರ್ವಹಿಸಲ್ಪಟ್ಟರೆ ಮಾತ್ರ ಯಶಸ್ಸು ಗಳಿಸಲು ಸಾಧ್ಯ. ಶೈಕ್ಷಣಿಕ ಪ್ರಗತಿಯೊಂದಿಗೆ ಮಾತುಗಾರಿಕೆಯ ಕಲೆಯನ್ನು ಮೈಗೂಡಿಸಿಕೊಂಡರೆ ನಮ್ಮ ಕನಸು ನನಸಾಗುವುದು ಸುಗಮವಾಗುತ್ತದೆ.

ಕನ್ನಡಪ್ರಭ ವಾರ್ತೆ ಹಾಸನ

ವಿದ್ಯಾರ್ಥಿಗಳು ವ್ಯಾಸಂಗದ ಜೊತೆಗೆ ಸೃಜನಶೀಲ ಹಾಗೂ ಕೌಶಲ್ಯಾಧಾರಿತ ಚಟುವಟಿಕೆಗಳಿಗೆ ಪ್ರಾಮುಖ್ಯತೆ ನೀಡುವುದು ಅಗತ್ಯ ಎಂದು ಹಾಸನ ಬಾಹ್ಯಾಕಾಶ ನಿಯಂತ್ರಣ ಕೇಂದ್ರದ ವಿಜ್ಞಾನಿ ಶ್ರೀಧರ್ ಕುಲಕರ್ಣಿ ಅವರು ವಿದ್ಯಾರ್ಥಿಗಳಿಗೆ ತಿಳಿ ಹೇಳಿದರು.

ನಗರದ ವಿಜಯ ಶಾಲೆಯಲ್ಲಿ ವಿಶ್ವಸಂಸ್ಥೆಯ ಸುಸ್ಥಿರ ಅಭಿವೃದ್ಧಿಯ ಗುರಿ ವಿಷಯದ ಮೇಲೆ ನಡೆದ ವಿಜ್ಞಾನ ವಸ್ತು ಪ್ರದರ್ಶನ ‘ಎಕ್ಸ್ ಪ್ಲೋರಿಯಂ’ ನಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಚೈನ್ ರಿಯಾಕ್ಷನ್ ಭೌತಶಾಸ್ತ್ರ ತತ್ವಾಧಾರಿತ ಮಾದರಿ ಮೂಲಕ ಉದ್ಘಾಟಿಸಿ ಮಾತನಾಡುತ್ತಾ, ಪ್ರತಿಯೊಂದು ಕೆಲಸವೂ ಸಂಘಟಿತವಾಗಿ ನಿರ್ವಹಿಸಲ್ಪಟ್ಟರೆ ಮಾತ್ರ ಯಶಸ್ಸು ಗಳಿಸಲು ಸಾಧ್ಯ. ಶೈಕ್ಷಣಿಕ ಪ್ರಗತಿಯೊಂದಿಗೆ ಮಾತುಗಾರಿಕೆಯ ಕಲೆಯನ್ನು ಮೈಗೂಡಿಸಿಕೊಂಡರೆ ನಮ್ಮ ಕನಸು ನನಸಾಗುವುದು ಸುಗಮವಾಗುತ್ತದೆ. ಈ ನಿಟ್ಟಿನಲ್ಲಿ ಸಕಾರಾತ್ಮಕ ಅಂಶಗಳನ್ನು ಬೆಳೆಸಿಕೊಂಡು ಮುನ್ನಡೆಯಬೇಕೆಂದು ತಿಳಿಸಿದರು.

ಶಾಲಾ ಸಂಸ್ಥಾಪಕ ನಿರ್ದೇಶಕರಾದ ತಾರಾ ಎಸ್. ಸ್ವಾಮಿಯವರು ಮಾತನಾಡುತ್ತಾ, ವಿದ್ಯಾರ್ಥಿಗಳ ಸುಪ್ತ ಪ್ರತಿಭೆಯ ಅನಾವರಣದಲ್ಲಿ ವಿಜ್ಞಾನ ವಸ್ತು ಪ್ರದರ್ಶನವು ಒಂದು ಮುಕ್ತ ವೇದಿಕೆಯಾಗಿದೆ. ಈ ವಿಜ್ಞಾನ ವಸ್ತು ಪ್ರದರ್ಶನವು ಪರಿಪೂರ್ಣವಾಗಿ ಮೂಡಿಬರುವಲ್ಲಿ ಕಾರಣರಾದ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಪೋಷಕರ ಸಹಕಾರವನ್ನು ಶ್ಲಾಘಿಸಿದರು.

ಶೈಕ್ಷಣಿಕ ಮುಖ್ಯಸ್ಥರಾದ ಡಾ. ಶ್ರೀಲಕ್ಷ್ಮಿ ಎಸ್. ಅವರು ತಮ್ಮ ವೈಜ್ಞಾನಿಕ ಮನೋಭಾವದ ಒಳನೋಟಗಳನ್ನು ಪ್ರಸ್ತುತ ನೊಬೆಲ್ ಪ್ರಶಸ್ತಿ ಪಡೆದ ವಿಜ್ಞಾನಿಗಳ ಉದಾಹರಣೆಗಳನ್ನು ವಿದ್ಯಾರ್ಥಿಗಳೊಂದಿಗೆ ಹಂಚಿಕೊಳ್ಳುತ್ತಾ, ನಮ್ಮ ಶಾಲಾ ವಿದ್ಯಾರ್ಥಿಗಳು ರಾಜ್ಯ ಮತ್ತು ರಾಷ್ಟ್ರ ಮಟ್ಟದ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಪ್ರಶಸ್ತಿ ಪಡೆದಿರುವುದಕ್ಕೆ ಪ್ರಶಂಸೆ ವ್ಯಕ್ತಪಡಿಸಿದರು.

ಈ ಬಾರಿಯ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ನವೀಕರಿಸಬಹುದಾದ ಇಂಧನ ಶಕ್ತಿ, ಸ್ವಯಂ ಚಾಲಿತ ಎಐ ತಾಂತ್ರಿಕತೆ, ಭೌತಶಾಸ್ತ್ರ ತತ್ವಗಳು, ರಕ್ಷಣೆ ಮತ್ತು ಸುರಕ್ಷತೆ, ಕೃಷಿ ಸಂಬಂಧಿತ ಹಾಗೂ ಹವಾಮಾನ ಬದಲಾವಣೆ ವಿಷಯಗಳಿಗೆ ಸಂಬಂಧಿಸಿದ 421ಕ್ಕೂ ಹೆಚ್ಚು ವಿಜ್ಞಾನ ಮಾದರಿಗಳನ್ನು ಶಾಲೆಯ 500 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪ್ರದರ್ಶಿಸಿದರು.

ವಿಜ್ಞಾನದೊಂದಿಗೆ ವಿನೋದ ಎಂಬ ಒಂದು ನಿಮಿಷದ ಆಟ ಎಲ್ಲಾ ವಿದ್ಯಾರ್ಥಿಗಳ, ಪೋಷಕರ ಹಾಗೂ ಸಾರ್ವಜನಿಕರ ಮನಗೆಲ್ಲುವಲ್ಲಿ ಯಶಸ್ವಿಯಾದರೆ, ತಮ್ಮ ತೂಕ ಮತ್ತು ಎತ್ತರಕ್ಕೆ ಅನುಸಾರವಾಗಿ ಬಿಎಂಐ ಪರೀಕ್ಷಿಸಿ ಆರೋಗ್ಯಕರ ಜೀವನಕ್ಕೆ ಯೋಗಾಸನಗಳ ಮೂಲಕ ಸರಳ ಪರಿಹಾರ ಪಡೆದುಕೊಂಡರು.

ಎಕ್ಸ್ ಪ್ಲೋರಿಯಂ ನಲ್ಲಿ ಅರ್ಲಿ ಇಯರ್ಸ್ ಚಿಣ್ಣರು ತಮ್ಮ ಪ್ರದರ್ಶನಗಳ ಮೂಲಕ ವಿಜ್ಞಾನ ಪ್ರಪಂಚವನ್ನು ಪ್ರೇಕ್ಷಕರಿಗೆ ಪರಿಚಯಿಸಿದರು.

ಪರಿಸರ ಚಿಂತಕ ಹಾಗೂ ಶಾಲಾ ಆಡಳಿತ ಮಂಡಳಿ ಅಧ್ಯಕ್ಷರಾದ ವೈ.ಎನ್. ಸುಬ್ಬಸ್ವಾಮಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಪ್ರಾಂಶುಪಾಲ ನಂದೀಶ ಕೆ. ಎಸ್. ಶಿಕ್ಷಕರು, ಸಿಬ್ಬಂದಿ ವರ್ಗ ಹಾಗೂ ಪೋಷಕರು ಉಪಸ್ಥಿತರಿದ್ದರು.