ಸಾರಾಂಶ
ಕನ್ನಡಪ್ರಭ ವಾರ್ತೆ ಮಂಗಳೂರು
ಹುಬ್ಬಳ್ಳಿಯಲ್ಲಿ ಯುವತಿಯ ಹತ್ಯೆ ಸೇರಿದಂತೆ ರಾಜ್ಯದಲ್ಲಿ ಮಹಿಳೆಯರ ಮೇಲೆ ದೌರ್ಜನ್ಯ ನಡೆಯುತ್ತಿದೆ. ಯುವತಿಯರ ರಕ್ಷಣೆ ಸಮಾಜದ ಕರ್ತವ್ಯವಾಗಿದ್ದು ಸರ್ಕಾರ ಗಂಭೀರವಾಗಿ ಪರಿಗಣಿಸಿ ಯುವತಿಯರ ರಕ್ಷಣೆಗೆ ಕ್ರಮಕೈಗೊಳ್ಳಬೇಕು. ಈ ಹಿನ್ನೆಲೆಯಲ್ಲಿ ಪಂಜಾಬ್‌ನಲ್ಲಿ ಸಿಖ್ ಮಹಿಳೆಯರು ತಮ್ಮ ರಕ್ಷಣೆಗೆ ಧರಿಸುವ (ಕಿರ್ಪಣ್) ಕಿರುಕತ್ತಿಯಂತೆ ಕರ್ನಾಟಕದಲ್ಲೂ ಮಹಿಳೆಯರು ತಮ್ಮ ಆತ್ಮರಕ್ಷಣೆಗೆ ಕಿರುಕತ್ತಿ ಹೊಂದಲು ಕಾನೂನು ತರಬೇಕು ಎಂದು ವಿಶ್ವಹಿಂದು ಪರಿಷತ್ ಒತ್ತಾಯಿಸಿದೆ.ವಿಹಿಂಪ ಪ್ರಾಂತ ಸಹ ಕಾರ್ಯದರ್ಶಿ ಶರಣ್ ಪಂಪ್‌ವೆಲ್ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದಲ್ಲಿ ಹಲವಾರು ವರ್ಷಗಳಿಂದ ಯುವತಿಯರು ಬಲವಂತದ ಪ್ರೀತಿ, ಪ್ರೇಮದ ಹೆಸರಿನಲ್ಲಿ ಅತ್ಯಾಚಾರ, ಹಲ್ಲೆ, ಕೊಲೆಗಳು ಆಗುತ್ತಿರುವುದು ಬಹಳ ನೋವಿನ ಸಂಗತಿ. ಪ್ರತೀ ವರ್ಷ ಹತ್ತಾರು ಯುವತಿಯರ ಕೊಲೆಯಾಗುತ್ತಿರುವುದು, ಅವರ ಮೇಲೆ ಅತ್ಯಾಚಾರ, ಆಸಿಡ್ ದಾಳಿ, ಹಲ್ಲೆ ನಡೆಯುತ್ತಿರುವುದು ನಾಗರಿಕ ಸಮಾಜ ತಲೆ ತಗ್ಗಿಸುವಂತಾಗಿದೆ. ಈ ಎಲ್ಲ ಯುವತಿಯರ ಆತ್ಮರಕ್ಷಣೆಗೆ ತರಬೇತಿ ಶಿಬಿರ ಆಯೋಜಿಸಲು ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಎನ್ಐಎ ತನಿಖೆ ನಡೆಸಿ: ಹುಬ್ಬಳ್ಳಿಯಲ್ಲಿ ಜಿಹಾದಿ ಫಯಾಜ್‌ನಿಂದ ವಿದ್ಯಾರ್ಥಿನಿ ನೇಹಾ ಹತ್ಯೆ ನಡೆದಿದ್ದು, ಇದರ ಹಿಂದೆ ಆತನ ಸಹಚರರ ಕೈವಾಡದ ಶಂಕೆ ಇದೆ. ಕಾಲೇಜಿನ ಕ್ಯಾಂಪಸ್‌ನಲ್ಲಿ ವಿದ್ಯಾರ್ಥಿಗಳ ಎದುರು ಯುವತಿಯನ್ನು ಅಮಾನುಷವಾಗಿ ಹತ್ಯೆ ನಡೆಸಿ ಹಿಂದುಗಳಲ್ಲಿ ಭಯವನ್ನು ಹುಟ್ಟಿಸುವ ಭಯೋತ್ಪಾದಕ ಕೃತ್ಯ ಇದಾಗಿದ್ದು, ಇದರಿಂದ ಇಡೀ ರಾಜ್ಯದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಈ ಕೃತ್ಯದ ಹಿಂದೆ ಜಿಹಾದಿ ಫಯಾಸ್ ಮಾತ್ರವಲ್ಲದೆ ಅವನ ಸ್ನೇಹಿತರು ಮತ್ತು ಮುಸ್ಲಿಂ ಜಿಹಾದಿ ಸಂಘಟನೆಗಳ ಕೈವಾಡವಿರಬಹುದು, ಈಗಾಗಲೇ ನೇಹಾಳ ತಂದೆ ಈ ಕೊಲೆ ಲವ್ ಜಿಹಾದ್‌ನಿಂದ ಆಗಿದ್ದು ಮತ್ತು ನೇಹಾಳಿಗೆ ನಿರಂತರ ಕಿರುಕುಳ ನೀಡಿರುವ ಬಗ್ಗೆ ಹೇಳಿಕೆ ಕೊಟ್ಟಿದ್ದಾರೆ. ಆದ್ದರಿಂದ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ಈ ಕೃತ್ಯದ ಹಿಂದೆ ಇರುವ ಸಂಚನ್ನು ಬಹಿರಂಗಪಡಿಸಲು ಎನ್‌ಐಎ ತನಿಖೆಗೆ ಒಳಪಡಿಸಬೇಕು ಎಂದು ಆಗ್ರಹಿಸಿದರು. ಕಾಂಗ್ರೆಸ್‌ನ ತುಘಲಕ್ ದರ್ಬಾರ್: ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರ ವಹಿಸಿಕೊಂಡ ದಿನದಿಂದಲೂ ನಿರಂತರವಾಗಿ ಹಿಂದುಗಳ ಮೇಲೆ ಇಸ್ಲಾಮಿಕ್ ಆಕ್ರಮಣಗಳು ನಡೆಯುತ್ತಲೇ ಇದೆ. ಹಿಂದುಗಳಲ್ಲಿ ಭಯವನ್ನು ಹುಟ್ಟಿಸಿ ರಾಜ್ಯವನ್ನು ಇಸ್ಲಾಮೀಕರಣಗೊಳಿಸಲು ಮೂಲಭೂತವಾದಿ ಗುಂಪುಗಳ ಸಂಚು ರೂಪಿಸುತ್ತಿವೆ ಎಂದರು.
ವಿಹಿಂಪ ಮುಖಂಡರಾದ ಎಚ್. ಕೆ. ಪುರುಷೋತ್ತಮ, ಭುಜಂಗ ಕುಲಾಲ್, ರವಿ ಅಸೈಗೋಳಿ, ಪ್ರೀತಂ ಕಾಟಿಪಳ್ಳ, ಶ್ವೇತಾ ಅದ್ಯಪಾಡಿ, ಪುನೀತ್ ಅತ್ತಾವರ ಇದ್ದರು.