ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಭದ್ರಾ ಮೇಲ್ದಂಡೆ ಯೋಜನೆಯಡಿ ಜಿಲ್ಲೆಯ ನೆಲಗಳಿಗೆ ನೀರು ಹರಿಯುವ ಮುನ್ನ ಜಿಲ್ಲೆಯ ಸಾವಿರಾರು ಬಗರ್ ಹುಕುಂ ಹಾಗೂ ಅರಣ್ಯ ಭೂಮಿ ಸಾಗುವಳಿದಾರರಿಗೆ ಭೂಮಿ ಹಕ್ಕು ನೀಡಬೇಕೆಂದು ಪ್ರಜಾಶಕ್ತಿ ಟ್ರಸ್ಟ್ ಮತ್ತು ಜಿಲ್ಲಾ ಬಗರ್ ಹುಕುಂ, ಅರಣ್ಯ ಹಕ್ಕು ಸಾಗುವಳಿದಾರರ ಹೋರಾಟ ಸಮಿತಿ ಒತ್ತಾಯಿಸಿದೆ.

ಇಲ್ಲಿನ ಪತ್ರಕರ್ತರ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿ ಮುಖಂಡ ಹಾಗೂ ನಗರಸಭೆ ಮಾಜಿ ಅಧ್ಯಕ್ಷ ಬಿ.ಕಾಂತರಾಜ್, ಜಿಲ್ಲೆಯ ರೈತರ ದಶಕಗಳ ಕನಸಾದ ಭದ್ರಾ ಯೋಜನೆ ನನಸಾಗುತ್ತಿರುವುದು ಸಂತೋಷದ ವಿಷಯ. ಆದರೆ, ಕಳೆದ 30-40 ವರ್ಷಗಳಿಂದ ಭೂಮಿಗಾಗಿ ಹೋರಾಡುತ್ತಿರುವ ಭೂರಹಿತ ಪರಿಶಿಷ್ಟ ಜಾತಿ, ಪಂಗಡ ಹಾಗೂ ಹಿಂದುಳಿದ ವರ್ಗಗಳ ಸಾಗುವಳಿದಾರರಿಗೆ ಈ ಯೋಜನೆಯಿಂದ ಏನು ಪ್ರಯೋಜನ ಎಂಬ ಪ್ರಶ್ನೆ ಎದುರಾಗಿದೆ. ಬಗರ್ ಹುಕುಂ ಸಾಗುವಳಿದಾರರಿಗೆ ಭೂಮಿ ಹಕ್ಕು ಕೊಡದೆ ಭದ್ರೆ ಹರಿದು ಬಂದಲ್ಲಿ ಉಪಯೋಗವಾದರೂ ಏನೆಂದರು.

ಜಿಲ್ಲೆಯಲ್ಲಿ ಭೂಮಿ ಹಕ್ಕಿಗಾಗಿ ಸಲ್ಲಿಕೆಯಾಗಿರುವ ಅರ್ಜಿಗಳ ವಿಲೇವಾರಿಯಲ್ಲಿ ಅಧಿಕಾರಿಗಳು ತಪ್ಪು ಮಾಹಿತಿ ನೀಡುತ್ತಿದ್ದಾರೆ. ಫಾರಂ ನಂಬರ್ 50, 53 ಮತ್ತು 57ರ ಅಡಿಯಲ್ಲಿ ಒಟ್ಟು 1,82,989 ಅರ್ಜಿಗಳು ಸಲ್ಲಿಕೆಯಾಗಿವೆ. ಇದರಲ್ಲಿ ಕೇವಲ 29,452 ಅರ್ಜಿಗಳನ್ನು ಸಕ್ರಮಗೊಳಿಸಲಾಗಿದೆ. ಜಿಲ್ಲಾಡಳಿತವು ಕೇವಲ 7,380 ಅರ್ಜಿಗಳು ಬಾಕಿ ಇವೆ ಎಂದು ಹೇಳುತ್ತಿದ್ದರೆ, ವಾಸ್ತವದಲ್ಲಿ 1,46,135 ಅರ್ಜಿಗಳು ಇನ್ನೂ ವಿಲೇವಾರಿಯಾಗದೆ ಬಾಕಿ ಇವೆ ಎಂದು ಕಾಂತರಾಜ್ ದೂರಿದರು.

ಕಳೆದ ಎರಡು ದಶಕಗಳಿಂದ ಬಗರ್ ಹುಕುಂ ಸಾಗುವಳಿದಾರರು ಹೋರಾಟ ಮಾಡಿಕೊಂಡು ಬರುತ್ತಿದ್ದರೂ ಸಮಸ್ಯೆ ನಿವಾರಣೆ ಮಾಡಿ ಹಕ್ಕು ಪತ್ರ ನೀಡಲಾಗಿಲ್ಲ. ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಎಚ್ಚೆತ್ತುಕೊಂಡು ಹಕ್ಕು ಪತ್ರ ನೀಡಬೇಕು. ಇಲ್ಲವಾದಲ್ಲಿ ಹೋರಾಟವ ಉಗ್ರ ರೂಪಕ್ಕೆ ಕೊಂಡೊಯ್ಯುವ ಸಾಧ್ಯತೆಗಳ ಕುರಿತು ಆಲೋಚಿಸಲಾಗುವುದೆಂದು ಕಾಂತರಾಜ್ ಹೇಳಿದರು.


ಪ್ರಜಾಶಕ್ತಿ ಟ್ರಸ್ಟ್‌ನ ಬೋರಯ್ಯ ಮಾತನಾಡಿ 2013ರಿಂದ 2016ರವರೆಗೆ ಸಲ್ಲಿಕೆಯಾದ 5,573 ಅರ್ಜಿಗಳಲ್ಲಿ ಕೇವಲ 347 ಜನರಿಗೆ ಮಾತ್ರ ಹಕ್ಕುಪತ್ರ ನೀಡಲಾಗಿದೆ. ಇಲ್ಲಿಯೂ 4,612 ಅರ್ಜಿಗಳು ಬಾಕಿ ಇದ್ದರೂ, ಅಧಿಕಾರಿಗಳು ಕೇವಲ 614 ಅರ್ಜಿಗಳು ಮಾತ್ರ ಬಾಕಿ ಇವೆ ಎಂದು ಹಾದಿ ತಪ್ಪಿಸುತ್ತಿದ್ದಾರೆ ಎಂದು ಆರೋಪಿಸಿದರು.

ಜಿಲ್ಲೆಯಲ್ಲಿ ಸುಮಾರು 1.40 ಲಕ್ಷ ಎಕರೆ ಸರ್ಕಾರಿ ಜಮೀನು ಲಭ್ಯವಿದ್ದರೂ, ಅದನ್ನು ಸೋಲಾರ್ ಪಾರ್ಕ್ ಅಥವಾ ಬಲಾಡ್ಯರಿಗೆ ನೀಡಲಾಗುತ್ತಿದೆ. ಆದರೆ ಬಡ ಸಾಗುವಳಿದಾರರು ಮಾತ್ರ ಹಕ್ಕುಪತ್ರವಿಲ್ಲದೆ ಬರಿಗೈಯಲ್ಲಿದ್ದಾರೆ. ಇವರಿಗೆ ಭೂಮಿ ಹಂಚಿಕೆ ಮಾಡಿ ಎಂದರೆ ಅಧಿಕಾರಿಗಳು ಸಲ್ಲದ ಸಬೂಬು ಹೇಳುತ್ತಿದ್ದಾರೆ ಎಂದರು.

ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಜಿಲ್ಲಾಧಿಕಾರಿಗಳು ತಕ್ಷಣವೇ ಸಾಗುವಳಿದಾರರ ಸಭೆ ಕರೆದು ಸಮಸ್ಯೆ ಬಗೆಹರಿಸಬೇಕು ಎಂದರು.

ಈ ಸಂದರ್ಭದಲ್ಲಿ ವಕೀಲ ಸುರೇಶ್, ಗೋಪಾಲಸ್ವಾಮಿ ನಾಯಕ ಇದ್ದರು.