ಸಾರಾಂಶ
ಕನ್ನಡಪ್ರಭ ವಾರ್ತೆ ಶಿರಾ
ಶಿರಾ ತಾಲೂಕು ಗೃಹ ನಿರ್ಮಾಣ ಕಾರ್ಮಿಕರ ಸಂಘಕ್ಕೆ ನಿವೇಶನ ನೀಡುವಂತೆ ಕಳೆದ 23 ವರ್ಷಗಳಿಂದ ಮನವಿ ಸಲ್ಲಿಸಿದ್ದರೂ, ಇದುವರೆಗೂ ನಿವೇಶನ ನೀಡದೆ ಗೃಹ ನಿರ್ಮಾಣ ಕಾರ್ಮಿಕರನ್ನು ಶಾಸಕರು ನಿರ್ಲಕ್ಷಿಸಿದ್ದಾರೆ. ಆದ್ದರಿಂದ ಶೀಘ್ರದಲ್ಲಿಯೇ ಸಂಘಕ್ಕೆ ನಿವೇಶನ ನೀಡಬೇಕು ಎಂದು ಶಿರಾ ತಾಲೂಕು ಗೃಹ ನಿರ್ಮಾಣ ಕಾರ್ಮಿಕರ ಸಂಘದ ಅಧ್ಯಕ್ಷ ಮುಬಾರಕ್ ಪಾಷ ಒತ್ತಾಯಿಸಿದರು.ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 2001ರಲ್ಲಿ ಗೃಹ ನಿರ್ಮಾಣ ಕಾರ್ಮಿಕರ ಸಂಘವನ್ನು ಸ್ಥಾಪಿಸಿ ನಗರದ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದ ಹಿಂಭಾಗದಲ್ಲಿರುವ ತರಕಾರಿ ಮಾರುಕಟ್ಟೆ ಬಳಿ ಇರುವ ಸ್ಥಳದಲ್ಲಿ ತಾತ್ಕಾಲಿಕ ಕಚೇರಿ ಸ್ಥಾಪಿಸಿಕೊಂಡು ಕಾರ್ಮಿಕರ ಸಮಸ್ಯೆಗಳಿಗೆ ನಿರಂತರವಾಗಿ ಸ್ಪಂದಿಸುತ್ತಿದ್ದೇವೆ ಎಂದು ತಿಳಿಸಿದರು.
ಶಿರಾ ತಾಲೂಕಿನಲ್ಲಿ ಸುಮಾರು 20 ಸಾವಿರಕ್ಕೂ ಹೆಚ್ಚು ಕಟ್ಟಡ ಕಾರ್ಮಿಕರಿದ್ದು, ನಮ್ಮ ಸಂಘಕ್ಕೆ ಒಂದು ನಿವೇಶನ ನೀಡುತ್ತಿಲ್ಲ. ಕಳೆದ ಬಾರಿ ಸಚಿವರಾಗಿದ್ದಾಗ ಟಿ.ಬಿ.ಜಯಚಂದ್ರ ಅವರು ಕೆ.ಎಸ್.ಆರ್.ಟಿ.ಸಿ. ಹಿಂಭಾಗದಲ್ಲಿರುವ ನಗರಸಭೆಗೆ ಸೇರಿದ ಹೂವಿನ ಮಾರುಕಟ್ಟೆ ಸ್ಥಳವನ್ನು ಗೃಹ ನಿರ್ಮಾಣ ಕಾರ್ಮಿಕರ ಸಂಘಕ್ಕೆ ನೀಡುವುದಾಗಿ ಭರವಸೆ ನೀಡಿದ್ದರು. ಅವರ ಭರವಸೆಯಂತೆ ನಿವೇಶನ ನೀಡಿ ನಮ್ಮ ಬೇಡಿಕೆ ಈಡೇರಿಸಬೇಕು ಎಂದು ಮನವಿ ಮಾಡಿದರು.ಗೃಹ ನಿರ್ಮಾಣ ಸಂಘದ ಉಪಾಧ್ಯಕ್ಷ ನರಸಿಂಹಯ್ಯ ಮಾತನಾಡಿ, ಶಿರಾ ತಾಲೂಕು ಗೃಹ ನಿರ್ಮಾಣ ಕಾರ್ಮಿಕರ ಸಂಘದ ವತಿಯಿಂದ ನಡೆಯುವ ಎಲ್ಲಾ ಕಾರ್ಯಕ್ರಮಗಳಲ್ಲಿ ಶಾಸಕ ಟಿ.ಬಿ.ಜಯಚಂದ್ರ ಅವರಿಗೆ ನಿವೇಶನ ನೀಡುವಂತೆ ಮನವಿ ಮಾಡುತ್ತಲೇ ಇದ್ದೇವೆ. ಆದರೆ ಶಾಸಕರು ಈವರೆಗೆ ಗೃಹ ನಿರ್ಮಾಣ ಕಾರ್ಮಿಕರ ಕಡೆ ಗಮನ ಹರಿಸುತ್ತಿಲ್ಲ. ಈ ಬಾರಿ ಚುನಾವಣೆಯಲ್ಲಿ ಇದು ನನ್ನ ಕೊನೆಯ ಚುನಾವಣೆ ನಿವೇಶನ ನೀಡೇ ನೀಡುತ್ತೇನೆ ಎಂದು ಆಶ್ವಾಸನೆ ನೀಡಿದ್ದರು. ಅದರಂತೆ ನಮ್ಮ ಕಟ್ಟಡ ಕಾರ್ಮಿಕರು ಚುನಾವಣೆಯಲ್ಲಿ ಅವರನ್ನು ಬೆಂಬಲಿಸಿದ್ದಾರೆ. ಆದ್ದರಿಂದ ಈ ಬಾರಿಯಾದರೂ ನಮ್ಮ ಸಂಘಕ್ಕೆ ನಿವೇಶನ ನೀಡಬೇಕು ಎಂದು ಆಗ್ರಹಿಸಿದರು. ಪತ್ರಿಕಾಗೋಷ್ಠಿಯಲ್ಲಿ ಗೃಹ ನಿರ್ಮಾಣ ಸಂಘದ ಕಾರ್ಯದರ್ಶಿ ಆರ್.ಕಂಬಣ್ಣ, ಸಂಘಟನಾ ಕಾರ್ಯದರ್ಶಿ ಸಿದ್ದಪ್ಪ, ಸದಸ್ಯರಾದ ಮುದ್ದಣ್ಣ, ಅಪ್ಸರ್ ಬೇಗ್, ಜಬಿವುಲ್ಲಾ ಮತ್ತಿತರರಿದ್ದರು.