ಜನಸೇವೆ ಮಾಡಲು ಅವಕಾಶ ನೀಡಿ

| Published : Mar 29 2024, 01:02 AM IST

ಸಾರಾಂಶ

ಕೇಂದ್ರ ಸರ್ಕಾರದ ಜನವಿರೋಧಿ, ರೈತ ವಿರೋಧಿ ನೀತಿಗಳು ಒಂದೆಡೆಯಾದರೆ ಈ ಹಿಂದಿನ ಸಂಸದರ ಕ್ಷೇತ್ರದಲ್ಲಿ ಮಾಡಿರುವ ಸಾಧನೆ ಏನು ಹಾಗೂ ಪ್ರಸ್ತುತ ಬಿಜೆಪಿ ಅಭ್ಯರ್ಥಿಯಿಂದ ಬೊಮ್ಮಾಯಿ ಅಧಿಕಾರ ಅವಧಿಯಲ್ಲಿ ಗದಗ ಹಾಗೂ ರೋಣ ಮತಕ್ಷೇತ್ರಕ್ಕೆ ಕೊಡುಗೆ ಶೂನ್ಯ ಎಂಬುದು ಜನತೆಗೆ ತಿಳಿದಿದೆ

ಗಜೇಂದ್ರಗಡ: ಜನಸೇವೆ ಮಾಡಲು ಅವಕಾಶ ನೀಡಿ, ಅಭಿವೃದ್ಧಿ ಜತೆಗೆ ಕ್ಷೇತ್ರದಲ್ಲಿನ ಸಮಸ್ಯೆಗಳ ಪರಿಹಾರಕ್ಕೆ ಸಂಸತ್‌ನಲ್ಲಿ ಧ್ವನಿ ಎತ್ತುವೆ ಎಂದು ಹಾವೇರಿ-ಗದಗ ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ ಹೇಳಿದರು.

ಸಮೀಪದ ಗೋಗೇರಿ, ರಾಂಪೂರ ಹಾಗೂ ಕುಂಟೋಜಿ ಗ್ರಾಪಂ ವ್ಯಾಪ್ತಿಯಲ್ಲಿ ಗುರುವಾರ ಚುನಾವಣಾ ಪ್ರಚಾರ ಹಾಗೂ ಮತಯಾಚಿಸಿ ಮಾತನಾಡಿದರು.

ಕೇಂದ್ರ ಸರ್ಕಾರದ ಜನವಿರೋಧಿ, ರೈತ ವಿರೋಧಿ ನೀತಿಗಳು ಒಂದೆಡೆಯಾದರೆ ಈ ಹಿಂದಿನ ಸಂಸದರ ಕ್ಷೇತ್ರದಲ್ಲಿ ಮಾಡಿರುವ ಸಾಧನೆ ಏನು ಹಾಗೂ ಪ್ರಸ್ತುತ ಬಿಜೆಪಿ ಅಭ್ಯರ್ಥಿಯಿಂದ ಬೊಮ್ಮಾಯಿ ಅಧಿಕಾರ ಅವಧಿಯಲ್ಲಿ ಗದಗ ಹಾಗೂ ರೋಣ ಮತಕ್ಷೇತ್ರಕ್ಕೆ ಕೊಡುಗೆ ಶೂನ್ಯ ಎಂಬುದು ಜನತೆಗೆ ತಿಳಿದಿದೆ ಎಂದ ಆರೋಪಿಸಿದ ಅವರು, ಈ ಹಿಂದಿನ ಯುಪಿಎ ಸರ್ಕಾರದ ಜನಪರ ಕಾರ್ಯಕ್ರಮಗಳು ಮತ್ತು ರಾಜ್ಯ ಕಾಂಗ್ರೆಸ್ ಸರ್ಕಾರದ ರೈತಪರ, ಅಭಿವೃದ್ಧಿ ಮತ್ತು ಗ್ಯಾರಂಟಿ ಯೋಜನೆಗಳಿಂದ ಜನತೆ ನೆಮ್ಮದಿಯ ಜೀವನ ನಡೆಸುವಂತಾಗಿದೆ. ಕ್ಷೇತ್ರದ ಜನತೆ ಸೇವೆ ಮಾಡಲು ನನಗೆ ಅವಕಾಶ ನೀಡಿ ಎಂದರು.

ಶಾಸಕ ಜಿ.ಎಸ್. ಪಾಟೀಲ ಮಾತನಾಡಿ, ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಕೇವಲ ಆಶ್ವಾಸನೆ ನೀಡುತ್ತದೆ ಹೊರತು ಭರವಸೆ ಈಡೇರಿಸುವದಿಲ್ಲ ಎಂಬುದು ಜನತೆಗೆ ತಿಳಿದಿದ್ದು, ಬಿಜೆಪಿ ಎಂದರೆ ಉಳ್ಳವರ ಪರವಾದ ಸರ್ಕಾರ ಎಂದು ದೂರಿದ ಅವರು, ಸಿಎಂ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಕಾಂಗ್ರೆಸ್ ಸರ್ಕಾರದ ಜನಪರ ಕಾರ್ಯಕ್ರಮಗಳು ಜನರ ಮನಸ್ಸನ್ನು ಗೆದ್ದಿವೆ. ಲೋಕಸಭಾ ಚುನಾವಣೆಯಲ್ಲಿ ಜನತೆ ಬಿಜೆಪಿಯನ್ನು ತಿರಸ್ಕರಿಸಲಿದ್ದು ರಾಜ್ಯದಲ್ಲಿ ೨೦ಕ್ಕೂ ಅಧಿಕ ಸ್ಥಾನಗಳಲ್ಲಿ ಹಾಗೂ ಆನಂದಸ್ವಾಮಿ ಅವರಿಗೆ ಕ್ಷೇತ್ರದಲ್ಲಿ ೩೦ಕ್ಕೂ ಅಧಿಕ ಸಾವಿರ ಮತಗಳ ಲೀಡ್‌ ನೀಡುತ್ತೇವೆ ಎಂದರು.

ಟೆಂಪಲ್ ರನ್: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ ಕುಂಟೋಜಿ, ಗೋಗೇರಿ ಹಾಗೂ ರಾಂಪೂರ ಗ್ರಾಪಂ ವ್ಯಾಪ್ತಿಯಲ್ಲಿ ಚುನಾವಣಾ ಪ್ರಚಾರಕ್ಕೂ ಮೊದಲು ಕಾಂಗ್ರೆಸ್ ಮುಖಂಡರೊಂದಿಗೆ ದೇವಸ್ಥಾನ ಹಾಗೂ ದರ್ಗಾಗಳಿಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಗ್ರಾಮಗಳಲ್ಲಿ ಮತಯಾಚಿಸಿದರು.

ಮಾಜಿ ಶಾಸಕ ಜಿ.ಎಸ್. ಗಡ್ಡದೇವರಮಠ, ವೀರಣ್ಣ ಶೆಟ್ಟರ, ಮಿಥುನ ಪಾಟೀಲ, ಸಿದ್ದಣ್ಣ ಬಂಡಿ, ಶಿವರಾಜ ಘೊರ್ಪಡೆ, ರಾಜು ಸಾಂಗ್ಲೀಕರ, ಶ್ರೀಧರ ಬಿದರಳ್ಳಿ, ಉಮೇಶ ರಾಠೋಡ, ಕೆ.ಎಸ್.ಕೊಡತಗೇರಿ, ಮಲ್ಲಿಕಾರ್ಜುನ ಗಾರಗಿ, ಶರಣಪ್ಪ ಬೆಟಗೇರಿ, ಶರಣಪ್ಪ ಆವಾರಿ, ಅಂದಪ್ಪ ಬಿಚ್ಚೂರ, ಹನಮಂತ ಮಾದರ, ಹನಮಂತಪ್ಪ ಹೊರಪೇಟಿ, ವಿಜಯ ಜಾಧವ, ಪರಶುರಾಮ ಮೇಟಿ, ಇಮಾಮಸಾಬ ಬಾಗವಾನ, ಸಂಕ್ರಗೌಡ ಪಾಟೀಲ, ಲಕ್ಷ್ಮಣ ಹುನಗುಂಡಿ, ಸಿದ್ದು ಗೊಂಗಡಶೆಟ್ಟಿಮಠ ಸೇರಿ ಇತರರು ಇದ್ದರು.