ಅರೆಸೇನಾ ಮಾಜಿ ಯೋಧರಿಗೆ ಜಮೀನು, ನಿವೇಶನ ನೀಡುವಂತೆ ಒತ್ತಾಯಿಸಿ ಅರೆಸೇನಾ ಮಾಜಿ ಯೋಧರ ಸಂಘದ ವತಿಯಿಂದ ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಅವರಿಗೆ ಮನವಿ ಸಲ್ಲಿಸಲಾಯಿತು.
ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಕೇಂದ್ರ ಮತ್ತು ರಾಜ್ಯ ಸರ್ಕಾರದ ಸುತ್ತೋಲೆಯಂತೆ ಅರೆ ಸೇನಾ ಪಡೆಯ ಮಾಜಿ ಯೋಧರಿಗೂ ಜಮೀನು ಮತ್ತು ನಿವೇಶನ ಸೇರಿದಂತೆ ವಿವಿಧ ಸವಲತ್ತುಗಳನ್ನು ವಿಸ್ತರಿಸಬೇಕು ಎಂದು ಒತ್ತಾಯಿಸಿ ಜಿಲ್ಲಾ ಅರೆ ಸೇನಾ ಮಾಜಿ ಯೋಧರ ಸಂಘವು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದೆ.ಚಿತ್ರದುರ್ಗ ಜಿಲ್ಲಾ ಸಂಘದಲ್ಲಿ ಸುಮಾರು 177 ಹಾಲಿ ಮತ್ತು ನಿವೃತ್ತ ಅರೆ ಸೇನಾ ಯೋಧರಿದ್ದು, ಇವರೆಲ್ಲರೂ ಸವಲತ್ತುಗಳಿಗಾಗಿ ಆಯಾ ತಾಲೂಕು ಕಚೇರಿಗಳಲ್ಲಿ ಜಮೀನು, ನಿವೇಶನಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ. ನಮ್ಮ ಅರ್ಜಿಗಳನ್ನು ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಉಪನಿರ್ದೇಶಕರ ಕಾರ್ಯಾಲಯಕ್ಕೆ ಕಳುಹಿಸಿದ್ದು, ಈ ಕಾರ್ಯಾಲಯವು ಅರೆಸೇನಾ ಯೋಧರು ಮಾಜಿ ಸೈನಿಕ ಪರಿಭಾಷೆಯಲ್ಲಿ ಬರುವುದಿಲ್ಲವೆಂದು ತಿಳಿಸಿದ್ದಾರೆ. ಎಲ್ಲಾ ಸೈನಿಕರಿಗೆ ನೀಡುವ ಸವಲತ್ತುಗಳನ್ನು ಅರೆಸೇನಾ ಯೋಧರಿಗೆ ವಿಸ್ತರಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸುತ್ತೋಲೆ ಹೊರಡಿಸಿವೆ. ಜಿಲ್ಲಾಡಳಿತ ನಾವುಗಳು ಅರ್ಹರೆಂದು ಪರಿಗಣಿಸಿ, ದಾಖಲಾತಿಗಳನ್ನು ಪರಿಶೀಲನೆಗಾಗಿ ನಮ್ಮ ಜಿಲ್ಲಾ ಸಂಘಕ್ಕೆ ಕಳುಹಿಸಬೇಕು ಎಂದು ಮನವಿ ಮಾಡಿದರು.
ಜಿಲ್ಲೆಯ ಎಲ್ಲಾ ತಾಲೂಕುಗಳ ತಹಶೀಲ್ದಾರರಿಗೆ ಈ ಬಗ್ಗೆ ಸೂಕ್ತ ನಿರ್ದೇಶನ ನೀಡಿ, ಯೋಧರು ಸಲ್ಲಿಸಿರುವ ಜಮೀನು ಮತ್ತು ನಿವೇಶನದ ಅರ್ಜಿಗಳನ್ನು ತುರ್ತಾಗಿ ಪರಿಶೀಲಿಸಿ ಅರ್ಹರಿಗೆ ಕೂಡಲೇ ಸವಲತ್ತುಗಳನ್ನು ವಿತರಿಸಲು ಕ್ರಮ ಕೈಗೊಳ್ಳಬೇಕು ಎಂದು ಸಂಘದ ಪದಾಧಿಕಾರಿಗಳು ಒತ್ತಾಯಿಸಿದರು.ಈ ಸಂದರ್ಭದಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಮಾಲತೇಶ್ ಮುದ್ದಜ್ಜಿ, ಅರೆ ಸೇನಾ ಮಾಜಿ ಯೋಧರ ಸಂಘದ ಅಧ್ಯಕ್ಷ ಈ.ಲಿಂಗರಾಜ, ಉಪಾಧ್ಯಕ್ಷ ಡಿ.ಜಯಣ್ಣ, ಪ್ರಧಾನ ಕಾರ್ಯದರ್ಶಿ ವಿ.ರವಿಕುಮಾರ್, ಸಹ ಕಾರ್ಯದರ್ಶಿ ಹೆಚ್.ವೆಂಕಟೇಶ್, ಖಜಾಂಚಿ ಜಿ.ಆರ್.ಮಂಜುನಾಥ್, ಸಂಘಟನಾ ಕಾರ್ಯದರ್ಶಿ ಆರ್.ಶಿವಕುಮಾರ್, ಸಂಘಟನಾ ಸಹ ಕಾರ್ಯದರ್ಶಿ ಯರ್ರಿಸ್ವಾಮಿ ಸೇರಿದಂತೆ ವೀರಾಂಗಣಿಯಾರಾದ ನೀಲಾವತಿ, ಭಾಗ್ಯಮ್ಮ, ದುರ್ಗಮ್ಮ, ಸುನೀತಾ ಸೇರಿದಂತೆ 150ಕ್ಕೂ ಪದಾಧಿಕಾರಿಗಳು ಹಾಗೂ ಕುಟುಂಬದ ಸದಸ್ಯರು ಇದ್ದರು.