ಕೆಲಸ ಕೊಡಿ, ಕೂಲಿ ಕೊಡಿ ಯಾವುದೇ ನೆಪ ಹೇಳಬೇಡಿ, ತಾರತಮ್ಯ ಮಾಡಬೇಡಿ, ನರೇಗಾ ಕಾಮಗಾರಿ ತಕ್ಷಣ ಆರಂಭಿಸಿ
ಕುಷ್ಟಗಿ: ಬರಗಾಲದ ಸಂಕಷ್ಟದಿಂದ ಕೃಷಿ ಚಟುವಟಿಕೆ ಸಂಪೂರ್ಣ ಕುಂಠಿತಗೊಂಡಿದ್ದು, ಹೊಲಗದ್ದೆಗಳಲ್ಲಿ ಕೆಲಸವಿಲ್ಲದೆ ಜೀವನ ಸಾಗಿಸುವುದೇ ದುಸ್ತರವಾಗಿರುವ ಹಿನ್ನೆಲೆ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ತಕ್ಷಣ ಕೆಲಸ ನೀಡುವಂತೆ ಆಗ್ರಹಿಸಿ ಕ್ಯಾದಿಗುಪ್ಪ ಗ್ರಾಪಂ ಕಚೇರಿ ಎದುರು ಕ್ಯಾದಿಗುಪ್ಪ,ಗೋತಗಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.
ನೂರಾರು ಗ್ರಾಮಸ್ಥರು ಗ್ರಾಪಂ ಎದುರು ಸೇರಿ ಸರ್ಕಾರ ಹಾಗೂ ಅಧಿಕಾರಿಗಳ ವಿರುದ್ದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.ಕೆಲಸ ಕೊಡಿ, ಕೂಲಿ ಕೊಡಿ ಯಾವುದೇ ನೆಪ ಹೇಳಬೇಡಿ, ತಾರತಮ್ಯ ಮಾಡಬೇಡಿ, ನರೇಗಾ ಕಾಮಗಾರಿ ತಕ್ಷಣ ಆರಂಭಿಸಿ ಎಂದು ಒತ್ತಾಯಿಸಿದರು.
ಪ್ರತಿಭಟನಾಕಾರರು ಮಾತನಾಡಿ, ರಾಜ್ಯದಲ್ಲಿ ಬರಗಾಲದ ಪರಿಸ್ಥಿತಿ ನಿರ್ಮಾಣವಾಗಿದೆ. ರೈತರಿಗೆ ಬೆಳೆ ಇಲ್ಲ, ಕೃಷಿ ಕೂಲಿಕಾರರಿಗೆ ಕೆಲಸವಿಲ್ಲ. ದಿನಗೂಲಿ ಮಾಡಿಕೊಂಡು ಬದುಕುತ್ತಿದ್ದ ಕುಟುಂಬಗಳು ಇಂದು ಸಂಕಷ್ಟಕ್ಕೆ ಸಿಲುಕಿವೆ.ಇಂತಹ ಸಂದರ್ಭದಲ್ಲಿ ಬಡವರ ಬದುಕಿಗೆ ಆಸರೆಯಾಗಬೇಕಿದ್ದ ನರೇಗಾ ಯೋಜನೆ ಕಾಮಗಾರಿ ಆರಂಭಿಸದೇ ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂದು ಆರೋಪಿಸಿದರು.ಕ್ಯಾದಿಗುಪ್ಪ ಗ್ರಾಪಂ ವ್ಯಾಪ್ತಿಯಲ್ಲಿ ನರೇಗಾ ಯೋಜನೆಯಡಿ ಕೆಲಸ ಆರಂಭವಾಗದೇ ಇರುವುದರಿಂದ ನೂರಾರು ಕುಟುಂಬಗಳು ಆದಾಯವಿಲ್ಲದೆ ಪರದಾಡುತ್ತಿವೆ, ಇತರೆ ಗ್ರಾಪಂಗಳಲ್ಲಿ ಕಾಮಗಾರಿಗಳು ನಡೆಯುತ್ತಿದ್ದರೂ ನಮ್ಮ ಗ್ರಾಮಗಳಲ್ಲಿ ಮಾತ್ರ ಕೆಲಸ ನೀಡುತ್ತಿಲ್ಲ ಏಕೆ ಎಂದು ಪ್ರಶ್ನಿಸಿದರು.
ನಮಗೆ ಯಾವುದೇ ವಿಶೇಷ ಸೌಲಭ್ಯ ಬೇಡ. ಕಾನೂನಿನ ಪ್ರಕಾರ ಸಿಗಬೇಕಾದ ಕೆಲಸ ಕೇಳುತ್ತಿದ್ದೇವೆ. ಅಧಿಕಾರಿಗಳು ಒಂದಲ್ಲ ಒಂದು ನೆಪ ಹೇಳಿ ಕೆಲಸ ನೀಡುವುದನ್ನು ಮುಂದೂಡುತ್ತಿದ್ದಾರೆ. ಇದು ಬಡವರೊಂದಿಗೆ ಮಾಡುವ ಅನ್ಯಾಯ ಎಂದು ಪ್ರತಿಭಟನಾಕಾರರು ಅಸಮಾಧಾನ ವ್ಯಕ್ತಪಡಿಸಿದರು.ನರೇಗಾ ಯೋಜನೆ ನಂಬಿಕೊಂಡಿರುವ ಅನೇಕ ಕುಟುಂಬಗಳ ಪರಿಸ್ಥಿತಿ ಅತ್ಯಂತ ದುಸ್ತರವಾಗಿದೆ. ಮಕ್ಕಳ ಶಾಲಾ ಶುಲ್ಕ, ಪುಸ್ತಕ, ದಿನನಿತ್ಯದ ಆಹಾರ, ಮನೆ ಖರ್ಚು ಸೇರಿದಂತೆ ಅಗತ್ಯ ವೆಚ್ಚ ಭರಿಸಲು ಹಣವಿಲ್ಲದೆ ಕುಟುಂಬಗಳು ಸಂಕಷ್ಟ ಅನುಭವಿಸುತ್ತಿವೆ. ಗ್ರಾಮೀಣ ಪ್ರದೇಶದಲ್ಲಿ ಬೇರೆ ಉದ್ಯೋಗಾವಕಾಶ ಇಲ್ಲದ ಕಾರಣ ನರೇಗಾ ಕೆಲಸವೇ ಬದುಕಿನ ಆಧಾರವಾಗಿದೆ ಎಂದು ಹೇಳಿದರು.
ಅಧಿಕಾರಿಗಳು ಸ್ಥಳಕ್ಕೆ ಬಂದು ತಕ್ಷಣ ಕಾಮಗಾರಿ ಆರಂಭಿಸುವ ಬಗ್ಗೆ ಸ್ಪಷ್ಟ ಭರವಸೆ ನೀಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.ಸಮಸ್ಯೆ ಬಗೆಹರಿಯದಿದ್ದರೆ ದೊಡ್ಡ ಹೋರಾಟ ಹಮ್ಮಿಕೊಳ್ಳುವುದಾಗಿ ಎಚ್ಚರಿಕೆ ನೀಡಿದ ಅವರು, ಗ್ರಾಮೀಣ ಬಡವರ ಜೀವನೋಪಾಯಕ್ಕೆ ಆಶಾಕಿರಣವಾಗಿರುವ ನರೇಗಾ ಯೋಜನೆ ಸಮರ್ಪಕವಾಗಿ ಜಾರಿಯಾಗದಿರುವುದು ಕೂಲಿಕಾರರಲ್ಲಿ ತೀವ್ರ ಅಸಮಾಧಾನಕ್ಕೆ ಕಾರಣವಾಗಿದ್ದು, ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಸ್ಪಂದಿಸಿ ಕೆಲಸ ಆರಂಭಿಸಬೇಕೆಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಬಾಲಪ್ಪ ಕರೆಗುಡ್ಡ, ಗ್ಯಾನಪ್ಪ, ಮರಟಗೇರಿ, ಶೋಭಾ, ಸುವರ್ಣ ಬೂದಿಹಾಳ, ಯಲ್ಲಪ್ಪ ಹೊಳಿಸಾಲ, ಶಿವುಕುಮಾರ ಕಂಠಿ, ನೇತ್ರಾ ಚಳಗೇರಿ, ರುಕ್ಮಿಣಿ ಮರಾಠಿ, ಹನಮವ್ವ ತಳವಾರ ಸೇರಿದಂತೆ ಅನೇಕರು ಇದ್ದರು.ಸ್ಥಳಕ್ಕೆ ಸಹಾಯಕ ನಿರ್ದೇಶಕ ಭೇಟಿ: ಕುಷ್ಟಗಿ ತಾಪಂ ಸಹಾಯಕ ನಿರ್ದೇಶಕ ನಿಂಗನಗೌಡ ಹಿರೇಹಾಳ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ಪ್ರತಿಭಟನಾಕಾರರ ಮನವಿ ಆಲಿಸುವ ಮೂಲಕ ಫಾರಂ ನಂ 6ನ್ನು ಪಡೆದುಕೊಂಡು ಎರಡು ವಾರದಲ್ಲಿ ಕೆಲಸ ನೀಡಲಾಗುವದು ಎಂದು ತಿಳಿಸಿದರು. ನರೇಗಾ ಬದಲಿಗೆ ವಿಬಿಜಿ ರಾಮ್ ಜಿ ಯೋಜನೆ ಬದಲಾವಣೆಯಾಗಿರುವ ಪ್ರಯುಕ್ತ ತಾಂತ್ರೀಕ ದೋಷಗಳು ಎದುರಾಗುವ ಸಲುವಾಗಿ ಕೆಲಸ ನೀಡುವಲ್ಲಿ ವಿಳಂಬವಾಗಿದ್ದು ಇನ್ನೂ ಮುಂದೆ ವಿಳಂಬವಾಗುವದಿಲ್ಲ ಎಂದು ಭರವಸೆ ನೀಡಿದ ಅವರು, ಪಿಡಿಒ ವಿದ್ಯಾಶ್ರೀಗೆ ಗ್ರಾಮಸ್ಥರ ಸಹಕಾರದೊಂದಿಗೆ ಉತ್ತಮ ಕಾರ್ಯ ಮಾಡುವಂತೆ ತಿಳಿಸಿದರು.