ಕನ್ನಡಪ್ರಭ ವಾರ್ತೆ ಪಾಂಡವಪುರ

ಯುವ ಸಮುದಾಯ ದುಶ್ಚಟಗಳನ್ನು ಬಿಟ್ಟು ಕ್ರೀಡಾ ಚಟುವಟಕೆಗಳ ಕಡೆಗೆ ಹೆಚ್ಚು ಗಮನ ಹರಿಸಬೇಕು ಎಂದು ಜಿಪಂ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಸಿ.ಅಶೋಕ್ ಹೇಳಿದರು.

ತಾಲೂಕಿನ ಬನ್ನಂಗಾಡಿ ಗ್ರಾಮದಲ್ಲಿ ಫ್ರೆಂಡ್ಸ್ ಕ್ರಿಕೆಟರ್ಸ್ ವತಿಯಿಂದ ಹಮ್ಮಿಕೊಂಡಿರುವ ಸಿಎಸ್ಪಿ ಪಕ್ ಸೀಜನ್-2 ಟಿನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿ ವೇಳೆ ಮಾತನಾಡಿ, ಇಂದು ಬಹುತೇಕ ಯುವಕರು ಹಲವು ದುಶ್ಚಟಗಳಿಗೆ ಒಳಗಾಗಿ ಭವಿಷ್ಯವನ್ನು ನಾಶ ಮಾಡಿಕೊಳ್ಳುತ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.

ಪ್ರಸ್ತುತ ದಿನಗಳಲ್ಲಿ ಯುವ ಸಮುದಾಯ ಮದ್ಯಪಾನ, ಡ್ರಗ್ಸ್, ಸಿಗರೇಟ್, ಬೆಟ್ಟಿಂಗ್, ಗುಟ್ಕ್‌ದಂತಹ ಹಲವು ದುಶ್ಚಟಗಳಿಗೆ ಒಳಗಾಗಿ ತಮ್ಮ ಬದುಕನ್ನೇ ನಾಶ ಮಾಡಿಕೊಳ್ಳುತ್ತಿದ್ದಾರೆ. ಇದರಿಂದ ಹಲವು ಕುಟುಂಬಗಳು ಬೀದಿಪಾಲಾಗುತ್ತಿವೆ. ಅದರ ಬದಲು ಯುವ ಸಮುದಾಯ ಕ್ರೀಡೆಯತ್ತ ಮುಖ ಮಾಡಿದರೆ ಆರೋಗ್ಯದ ಜತೆಗೆ ಉತ್ತಮವಾದ ಭವಿಷ್ಯ ರೂಪಿಸಿಕೊಳ್ಳಬಹುದು ಎಂದರು.

ಬನ್ನಂಗಾಡಿ ಗ್ರಾಮದ ಯುವಕರು ಸಿಎಸ್‌ಪಿ ಕಪ್ ಕ್ರಿಕೆಟ್ ಕ್ರೀಡಾಕೂಟ ಆಯೋಜನೆ ಮಾಡುವ ಮೂಲಕ ಯುವಕರಿಗೆ ಮಾದರಿಯಾಗಿದ್ದಾರೆ. ಯುವ ಸಮುದಾಯ ಗ್ರಾಮಗಳಲ್ಲಿ ಒಗ್ಗಟ್ಟಿನಿಂದ ಕೆಲಸ ಮಾಡಬೇಕು. ನಶಿಸಿ ಹೋಗುತ್ತಿರುವ ಗ್ರಾಮೀಣ ಕ್ರೀಡೆಗಳನ್ನು ಉಳಿಸಿ ಬೆಳೆಸಿ ಪ್ರೋತ್ಸಹಿಸುವ ಕೆಲಸ ಮಾಡಬೇಕು ಎಂದರು.


ಕ್ರೀಡಾಕೂಟಗಳಲ್ಲಿ ಸೋಲು-ಗೆಲುವು ಸಾಮಾನ್ಯ. ಎರಡು ಸಾಮಾನ್ಯವಾಗಿ ಸ್ವೀಕರಿಸುವ ಮನೋಭಾವ ಬೆಳೆಸಿಕೊಳ್ಳಬೇಕು, ಕ್ರೀಡೆಗಳಿಂದ ಯುವಕರಲ್ಲಿ ಸೋದರ, ಸ್ನೇಹ ಸಂಬಂಧಗಳು ವೃದ್ಧಿಸುತ್ತವೆ. ಆರೋಗ್ಯದ ದೃಷ್ಟಿಯಿಂದಲೂ ಕ್ರೀಡೆ ಅವಶ್ಯಕ. ಹೀಗಾಗಿ ಹೆಚ್ಚಿನ ಮಟ್ಟದಲ್ಲಿ ಕ್ರೀಡಾಕೂಟಗಳನ್ನು ಆಯೋಜನೆ ಮಾಡಿ ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಇದೇ ವೇಳೆ ಫ್ರೆಂಡ್ಸ್ ಕ್ರಿಕೆಟರ್ಸ್ ವತಿಯಿಂದ ಸಿ.ಅಶೋಕ್ ಅವರನ್ನು ಸನ್ಮಾನಿಸಿ ಅಭಿನಂದಿಸಿದರು. ಮಾಜಿ ಸದಸ್ಯ ಅಲ್ಪಳ್ಳಿ ಗೋವಿಂದಯ್ಯ, ಹೂವಿನ ವ್ಯಾಪಾರಿ ಬಿ.ಆರ್.ಪ್ರಸನ್ನಕುಮಾರ್, ಗ್ರಾಪಂ ಮಾಜಿ ಉಪಾಧ್ಯಕ್ಷ ಶ್ರೀನಿವಾಸ್, ಬಿ.ಎನ್. ನಂದೀಶ್, ಮಹೇಂದ್ರ, ಬಿ.ಎಚ್.ಪ್ರಸನ್ನ, ಯೋಗೇಶ್, ಬಿ.ಸಿ.ವಾಸು ಆಯೋಜಕರಾದ ಬಿ.ಪಿ.ಸಂತೋಷ್, ಆಕಾಶ್, ರಕ್ಷಿತ್, ಸಚ್ಚಿನ್, ಗೌತಮ್, ಪವನ್ ಸೇರಿದಂತೆ ಅನೇಕ ಯುವಕರು ಇದ್ದರು.