ಕಸ ವಿಲೇವಾರಿಗೆ ಹೆಚ್ಚಿನ ಒತ್ತು ನೀಡಿ

| Published : Sep 26 2024, 09:45 AM IST

ಸಾರಾಂಶ

ಬೆಳಗಾವಿ ಹಾಗೂ ಖಾನಾಪೂರ ತಾಲೂಕು ಪಂಚಾಯತಿ ವ್ಯಾಪ್ತಿಯಲ್ಲಿ ಕಸ ಸರಿಯಾಗಿ ವಿಲೇವಾರಿಯಾಗುತ್ತಿಲ್ಲ. ರಸ್ತೆ ಎರಡೂ ಬದಿಯಲ್ಲಿ ಜನರು ಕಸ ಬಿಸಾಕುತ್ತಿದ್ದು ಕಸ ವಿಲೇವಾರಿಗೆ ಹೆಚ್ಚಿನ ಒತ್ತು ನೀಡಬೇಕು ಎಂದು ಜಿಪಂ ಸಿಇಒ ರಾಹುಲ್ ಶಿಂಧೆ ತಿಳಿಸಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಬೆಳಗಾವಿ ಹಾಗೂ ಖಾನಾಪೂರ ತಾಲೂಕು ಪಂಚಾಯತಿ ವ್ಯಾಪ್ತಿಯಲ್ಲಿ ಕಸ ಸರಿಯಾಗಿ ವಿಲೇವಾರಿಯಾಗುತ್ತಿಲ್ಲ. ರಸ್ತೆ ಎರಡೂ ಬದಿಯಲ್ಲಿ ಜನರು ಕಸ ಬಿಸಾಕುತ್ತಿದ್ದು ಕಸ ವಿಲೇವಾರಿಗೆ ಹೆಚ್ಚಿನ ಒತ್ತು ನೀಡಬೇಕು ಎಂದು ಜಿಪಂ ಸಿಇಒ ರಾಹುಲ್ ಶಿಂಧೆ ತಿಳಿಸಿದರು.ನಗರದ ಜಿಪಂ ಕಚೇರಿಯ ಸಭಾಂಗಣದಲ್ಲಿ ಬುಧವಾರ ನಡೆದ ಬೆಳಗಾವಿ ಹಾಗೂ ಖಾನಾಪೂರ ತಾಲೂಕಿನ ಎಲ್ಲ ಗ್ರಾಪಂ ಅಧ್ಯಕ್ಷರು ಹಾಗೂ ಪಿಡಿಒಗಳ ಜೊತೆ ತ್ಯಾಜ್ಯ ವಿಲೇವಾರಿ ಕುರಿತು ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಬೆಳಗಾವಿ ಮತ್ತು ಖಾನಾಪೂರ ತಾಲೂಕಿನ ಎಲ್ಲ ಗ್ರಾಪಂಗಳ ತ್ಯಾಜ್ಯ ವಿಲೇವಾರಿಯನ್ನು ವೈಜ್ಞಾನಿಕವಾಗಿ ಪ್ರತಿ ದಿನ ವಿಲೇವಾರಿ ಕಡ್ಡಾಯವಾಗಿ ಮಾಡುವುದು, ರಸ್ತೆ ಬದಿಗಳಲ್ಲಿ ಯಾವುದೇ ಕಾರಣಕ್ಕೂ ಕಸ ಬೀಳದಂತೆ ಕ್ರಮ ವಹಿಸಲು ತಿಳಿಸಿದರು. ವಿಶೇಷವಾಗಿ ಸಾಂಬ್ರಾ ವಿಮಾನ ನಿಲ್ದಾಣ ಇರುವುದರಿಂದ ರಸ್ತೆ ಪಕ್ಕದ ಕಸದಿಂದ ಪಕ್ಷಿಗಳ ಹಾರಾಟ ಹೆಚ್ಚಾಗಿ ವಿಮಾನ ಹಾರಾಟಕ್ಕೆ ದಕ್ಕೆಯಾಗುತ್ತದೆ. ಈ ಕಾರಣದಿಂದ ಬೆಳಗಾವಿಯಿಂದ ಕರಡಿಗುದ್ದಿವರೆಗೆ ಬರುವ ಎಲ್ಲ ಗ್ರಾಪಂಗಳ ಅಧ್ಯಕ್ಷರು ಮತ್ತು ಪಿಡಿಒಗಳಿಗೆ ಕಸ ಸಂಗ್ರಹಣೆ ಮತ್ತು ನಿರ್ವಹಣೆ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲು ಸೂಚಿಸಿದರು. ಖಾನಾಪೂರ ಮತ್ತು ಬೆಳಗಾವಿ ತಾಲೂಕಿನ ಎಲ್ಲ ಗ್ರಾಪಂಗಳಲ್ಲಿ ಶೇ.100ರಷ್ಟು ಕಸ ವಿಲೇವಾರಿಯಾಗಬೇಕು. ಒಂದು ವೇಳೆ ಕಸ ವಿಲೇವಾರಿಯಾಗದಿದ್ದಲ್ಲಿ ಸಂಬಂಧಪಟ್ಟವರ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.ಕಸ ವಿಲೇವಾರಿ ಘಟಕ ನಿರ್ಮಾಣ ಮಾಡಲು ಸ್ಥಳಾವಕಾಶ ಇಲ್ಲದ ಗ್ರಾಪಂನವರು ತಮ್ಮ ಗ್ರಾಪಂ ವ್ಯಾಪ್ತಿಯಲ್ಲಿ ಗೈರಾಣ, ಅರಣ್ಯ ಪ್ರದೇಶ ಇರುವ ಕಡೆ ಅರಣ್ಯ ಅಧಿಕಾರಿಗಳು ಮತ್ತು ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಅವರು ಜಂಟಿ ಸಭೆ ನಡೆಸಿ ಕಸ ವಿಲೇವಾರಿಗೆ ಗ್ರಾಮದ ಪಕ್ಕದಲ್ಲಿ ಸ್ಥಳ ನಿಗದಿ ಮಾಡಲು ತಿಳಿಸಿದರು. ಈಗಾಗಲೇ ಕಸ ವಿಲೇವಾರಿಗೆ ಶೆಡ್ ಮತ್ತು ತಾತ್ಕಾಲಿಕ ಶೆಡ್ ಇರುವವರು ಪ್ರತಿ ದಿನ ಕಸ ಸಂಗ್ರಹಣೆ ಮತ್ತು ನಿರ್ವಹಣೆ ಕಡ್ಡಾಯವಾಗಿ ಮಾಡುವುದು ಕಸ ನಿರ್ವಹಣೆ ಮಾಡದೆ ಇರುವ ಗ್ರಾಪಂಗಳು ಕೂಡಲೇ ಕ್ರಮ ವಹಿಸಬೇಕು. ಗ್ರಾಮ ಪಂಚಾಯತಿಗಳಲ್ಲಿ ಸರ್ಕಾರಿ ಜಾಗ/ಅರಣ್ಯ ಜಾಗ ಯಾವುದೇ ಇರಲಿ ಸರ್ವೆ ನಂ. ಹುಡುಕಿ ಪ್ರಸ್ತಾವ ಸಲ್ಲಿಸಲು ಸಭೆಗೆ ತಿಳಿಸಿದರು. ಕಸ ವಿಲೇವಾರಿ ಯಶಸ್ವಿಗೊಳಿಸಲು ಎಲ್ಲ ಗ್ರಾಪಂ ಚುನಾಯಿತ ಪ್ರತಿನಿಧಿಗಳು ಕೈಜೋಡಿಸಲು ವಿನಂತಿಸಿದರು.ಈ ವೇಳೆ ಜಿಪಂ ಯೋಜನಾ ನಿರ್ದೇಶಕ ರವಿ ಎನ್.ಬಂಗಾರೆಪ್ಪನವರ, ಬೆಳಗಾವಿ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಹೆಡಗೆ, ಖಾನಾಪೂರ ತಾಪಂ ಸಹಾಯಕ ನಿರ್ದೇಶಕ (ಪಂ.ರಾಜ್) ವಿಜಯ, ಜಿಪಂ ಸಿಬ್ಬಂದಿ ಹಾಗೂ ಗ್ರಾಪಂ ಸಿಬ್ಬಂದಿ ಉಪಸ್ಥಿತರಿದ್ದರು.