ಅಭಿವೃದ್ಧಿಗಾಗಿ ಹೆಚ್ಚಿನ ಅನುದಾನ ನೀಡಿ

| Published : Jul 18 2024, 01:34 AM IST

ಸಾರಾಂಶ

ವಿಧಾನಸಭೆ ಅಧಿವೇಶನದಲ್ಲಿ ಇಂಡಿ ಮತಕ್ಷೇತ್ರದ ಸಮಸ್ಯೆಗಳು, ಮೂಲಭೂತ ಸೌಕರ್ಯ ಹಾಗೂ ಅನುದಾನ ಬಿಡುಗಡೆ ಕುರಿತು ಶಾಸಕ ಯಶವಂತರಾಯಗೌಡ ಪಾಟೀಲ ಸರ್ಕಾರದ ಗಮನ ಸೆಳೆದರು.

ಕನ್ನಡಪ್ರಭ ವಾರ್ತೆ ಇಂಡಿ

ವಿಧಾನಸಭೆ ಅಧಿವೇಶನದಲ್ಲಿ ಇಂಡಿ ಮತಕ್ಷೇತ್ರದ ಸಮಸ್ಯೆಗಳು, ಮೂಲಭೂತ ಸೌಕರ್ಯ ಹಾಗೂ ಅನುದಾನ ಬಿಡುಗಡೆ ಕುರಿತು ಶಾಸಕ ಯಶವಂತರಾಯಗೌಡ ಪಾಟೀಲ ಸರ್ಕಾರದ ಗಮನ ಸೆಳೆದರು.

ಮತಕ್ಷೇತ್ರದಲ್ಲಿ ಸಕ್ಕರೆ ಕಾರ್ಖಾನೆಗಳು ಇದ್ದು, ಇದರಿಂದ ಹೆವಿ ಲೊಡೆಡ್‌ ವಾಹನಗಳ ಓಡಾಟದಿಂದ ರಸ್ತೆಗಳು ಬೇಗನೆ ಹಾಳಾಗುತ್ತಿದೆ. ರಾಜ್ಯದ ಎಲ್ಲ ಮತಕ್ಷೇತ್ರಗಳಿಗಿಂತ ಕಾರ್ಖಾನೆಗಳು ಇರುವ ಮತಕ್ಷೇತ್ರಗಳಿಗೆ ರಸ್ತೆ ಅಭಿವೃದ್ಧಿಗಾಗಿ ಹೆಚ್ಚಿನ ಅನುದಾನ ಒದಗಿಸುವಂತೆ ಲೋಕೊಪಯೋಗಿ ಇಲಾಖೆಗೆ ಮನವಿ ಮಾಡಿದರು.ಇಂಡಿ ವಿಧಾನಸಭಾ ಮತಕ್ಷೇತ್ರದ ವ್ಯಾಪ್ತಿಯಲ್ಲಿ ವಾಸಿಸುತ್ತಿರುವ ಅಲ್ಪಸಂಖ್ಯಾತ ಜನಾಂಗದವರಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಲು 2023-24ನೇ ಸಾಲಿನಲ್ಲಿ ಎಷ್ಟು ಅನುದಾನ ಒದಗಿಸಲಾಗಿದೆ. ₹5 ಕೋಟಿ ಅನುದಾನ ಮಂಜೂರು ಆಗಿದ್ದರೂ ಕಾಮಗಾರಿ ಅನುಷ್ಠಾನ ವಿಳಂಬ ಏಕೆ ಆಗಿದೆ ಎಂಬುವುದು ಸ್ಪಷ್ಟಪಡಿಸುವಂತೆ ಕೋರಿದರು.ರಾಜ್ಯದಲ್ಲಿ ಪಶುಪಾಲನಾ ಮತ್ತು ಪಶು ವೈದ್ಯ ಸೇವಾ ಇಲಾಖೆಯಿಂದ 2023-24ನೇ ಸಾಲಿನ ಹಾಲು ಉತ್ಪಾದಕರಿಗೆ ಉತ್ತೇಜನ ಕಾರ್ಯಕ್ರಮದ ಉಳಿಕೆ ಅನುದಾನದಲ್ಲಿ ರಾಜ್ಯ ಪರಿಷತ್‌ ಸಭೆಯ ನಡುವಳಿಕೆಯಂತೆ ಎಸ್ಸಿಪಿ, ಟಿಎಸ್ಪಿ ಫಲಾನುಭವಿಗಳಿಗೆ ಒಂದು ಮಿಶ್ರತಳಿ ಹಸು ಘಟಕವನ್ನು ಅನುಷ್ಠಾನಗೊಳಿಸುವ ಯೋಜನೆಗಳ ಫಲಾನುಭವಿಗಳ ಆಯ್ಕೆ ಸಮಿತಿ ಮತ್ತು ಮೇಲ್ವಿಚಾರಣ ಸಮಿತಿಯನ್ನು ರಚಿಸಲು ಒಂದು ವಿಧಾನಸಭಾ ಕ್ಷೇತ್ರಕ್ಕೆ ಎಷ್ಟು ಜನ ಅಧಿಕಾರೇತರ ಸದಸ್ಯರನ್ನಾಗಿ ನೇಮಕ ಮಾಡಲಾಗಿದೆ. ಕೆಲವೊಂದು ವಿಧಾನಸಭಾ ಕ್ಷೇತ್ರಗಳಿಗೆ ನೇಮಕ ಮಾಡಿದ್ದು, ಬಾಕಿ ಉಳಿದ ವಿಧಾನಸಭಾ ಕ್ಷೇತ್ರಗಳಲ್ಲಿ ಈ ಆಯ್ಕೆ ಸಮಿತಿಗೆ ಅಧಿಕಾರೇತರ ಸದಸ್ಯರನ್ನಾಗಿ ನಾಮನಿರ್ದೇಶನ ಮಾಡದಿರಲು ಕಾರಣ ಕುರಿತು ವಿವರಗಳನ್ನು ಸದನದ ಮೂಲಕ ಕೇಳಿದರು.ಇಂಡಿ ಶಾಖಾ ಕಾಲುವೆ ಸುಮಾರು 20 ರಿಂದ 25 ವರ್ಷಗಳ ಹಿಂದೆ ಕೈಗೊಂಡಿರುವುದು ಸರ್ಕಾರದ ಗಮನಕ್ಕೆ ಬಂದಿದೆ. ಕಿ.ಮೀ 0 ರಿಂದ 64 ವರೆಗೆ ಕಾಮಗಾರಿ ಕೈಗೊಂಡಿದ್ದು, ಕಿಮೀ 64 ರಿಂದ 172 ವರೆಗೆ ಇಆರ್‌ಎಂ ಕಾಮಗಾರಿ ಕೈಗೊಳ್ಳದೇ ಇರುವುದು, ಕಾಲುವೆಯ ಜಾಲದಲ್ಲಿ ವಿತರಣಾ ಕಾಲುವೆ ಮತ್ತು ಸಿಳು ಕಾಲುವೆಗಳು ಪದೇ ಪದೇ ದುರಸ್ತಿ, ಒಡೆದು ಹೋಗುತ್ತಿರುವುದರಿಂದ ನಾಲೆಯ ಕೊನೆಯ ಭಾಗದವರೆಗೆ ನೀರು ತಲುಪದೆ ಜನ, ಜಾನುವಾರುಗಳು ಕುಡಿಯುವ ನೀರಿಗಾಗಿ ತೀವ್ರ ಕಷ್ಟಕರ ಪರಿಸ್ಥಿತಿ ಎದುರಿಸುತ್ತಿರುವುದು ಹಾಗೂ ಕಿಮೀ 64 ರಿಂದ 72 ರವರೆಗೆ ಇಆರ್‌ಎಂ ಕಾಮಗಾರಿ ಕೈಗೊಳ್ಳಲು ಸರ್ಕಾರ ಆಸ್ತಿ ಹೊಂದಿದೆಯೇ, ಹೊಂದಿದ್ದರೇ ಸರ್ಕಾರ ಕೈಗೊಳ್ಳುವ ಕ್ರಮಗಳೇನು ಎಂಬ ಶಾಸಕ ಯಶವಂತರಾಯಗೌಡ ಪಾಟೀಲರ ಪ್ರಶ್ನೆಗೆ ಉಪಮುಖ್ಯಮಂತ್ರಿ, ನೀರಾವರಿ ಸಚಿವ ಡಿ.ಕೆ.ಶಿವಕುಮಾರ ಅವರು, ಇಂಡಿ ಶಾಖಾ ಕಾಲುವೆ ಕಿಮೀ 64 ರಿಂದ 172 ವರೆಗೆ ಇಆರ್‌ಎಂ ಕಾಮಗಾರಿಯ ವಿವರವಾದ ಯೋಜನಾ ವರದಿ ವಲಯದ ಹಂತದಲ್ಲಿ ಪರಿಶೀಲನಾ ಹಂತದಲ್ಲಿದೆ. ಕಾಲುವೆಯ ವಿಶೇಷ ದುರಸ್ತಿ ಕಾಮಗಾರಿ ಕೈಗೆತ್ತಿಕೊಂಡು ಸಮರ್ಪಕ ನೀರು ನಿರ್ವಹಣೆ ಮತ್ತು ನೀರಾವರಿ ಸಲಹಾ ಸಮಿತಿ ಸಭೆಯ ತೀರ್ಮಾನದಂತೆ ಕಾಲುವೆ ಕೊನೆಯ ಭಾಗದವರೆಗೆ ನೀರು ಹರಿಸಲು ಎಲ್ಲ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.ತಾಲೂಕಿನ ಸಣ್ಣ ನೀರಾವರಿ ಇಲಾಖೆಯ ಕೆರೆಗಳು ತಿಡಗುಂದಿ ಶಾಖಾ ಕಾಲುವೆಯಿಂದ ಗುರುತ್ವ ಮೂಲಕ ನೀರು ತುಂಬುವ ಯೋಜನಾ ಕಾಮಗಾರಿಗೆ ಆಡಳಿತಾತ್ಮಕ ಅನುಮೋದನೆ ನೀಡಿರುವುದು ನಿಜವೇ. ಆಡಳಿತಾತ್ಮಕ ಅನುಮೋದನೆ ನೀಡಿದ ದೇಗಿನಾಳ, ಹಳಗುಣಕಿ, ಬಬಲಾದ, ಕೂಡಗಿ, ಗುಂದವಾನ, ಕೋಳೂರಗಿ, ಹಡಸಂಗ-1 ಮತ್ತು 2 ಹಾಗೂ ಸೊನಕನಹಳ್ಳಿ, ನಂದರಗಿ, ಶಿಗಣಾಪೂರ, ಸಾತಲಗಾಂವ, ಸಾವಳಸಂಗ, ಜಿಗಜಿವಣಗಿ, ಇಂಚಗೇರಿ-1 ಮತ್ತು 2, ನಿಂಬಾಳ, ಹೊರ್ತಿ ಕೆರೆಗಳನ್ನು ತುಂಬಿಸುವ ಯೋಜನೆಯ ರೂಪುರೇಷ, ಯೋಜನೆಯ ವೆಚ್ಚ ಎಷ್ಟು, ಕಾಮಗಾರಿ ಅತ್ಯಂತ ವಿಳಂಬಗತಿಯಲ್ಲಿ ಸಾಗುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆ ಎಂಬ ಪ್ರಶ್ನೆಯ ಮೂಲಕ ಸದನದಲ್ಲಿ ಕೆರೆಗಳಿಗೆ ನೀರು ತುಂಬಿಸುವ ಪ್ರಶ್ನೆಯನ್ನು ಸದನದಲ್ಲಿ ಗಮನ ಸೆಳೆದರು.