ವಿದ್ಯಾರ್ಥಿನಿಯರ ಅಧ್ಯಯನಕ್ಕೆ ಹೆಚ್ಚಿನ ಮಹತ್ವ ನೀಡಲಿ

| Published : Oct 10 2024, 02:28 AM IST

ಸಾರಾಂಶ

ಸಾಮಾನ್ಯವಾಗಿ ಇತ್ತೀಚಿನ ದಿನಮಾನಗಳಲ್ಲಿ ಗಂಡು ಮಕ್ಕಳ ಅಧ್ಯಯನಕ್ಕೆ ಹೆಚ್ಚು ಆದ್ಯತೆ

ಗದಗ: ಹೆಣ್ಣು ಮಗುವೊಂದು ಕಲಿತರೆ ಶಾಲೆಯೊಂದು ತೆರೆದಂತೆ ಎಂಬ ನಾಣ್ಣುಡಿಯಂತೆ ಮಹಿಳಾ ಶಿಕ್ಷಣ ಕುಟುಂಬಕ್ಕೆ ಮಾತ್ರವಲ್ಲದೇ ಇಡೀ ಸಮುದಾಯಕ್ಕೆ ಪ್ರಯೋಜನಕಾರಿಯಾಗಿದೆ. ಆದ್ದರಿಂದ ಗ್ರಾಮೀಣ ಭಾಗದ ಪಾಲಕರು ವಿದ್ಯಾರ್ಥಿನಿಯರ ಅಧ್ಯಯನಕ್ಕೆ ಹೆಚ್ಚು ಮಹತ್ವ ನೀಡಬೇಕು ಎಂದು ವಿದ್ಯಾದಾನ ಸಮಿತಿಯ ಬಾಲಕಿಯರ ಪಪೂ ಕಾಲೇಜಿನ ಪ್ರಾ. ಡಾ. ಬಿ.ಎಸ್. ರಾಠೋಡ ಹೇಳಿದರು.

ಸ್ಥಳೀಯ ವಿದ್ಯಾದಾನ ಸಮಿತಿ ಬಾಲಕಿಯರ ಪಪೂ ಕಾಲೇಜಿನಲ್ಲಿ ನಡೆದ ದ್ವಿತೀಯ ಪಿಯುಸಿ ವರ್ಗದ ಪಾಲಕರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸಾಮಾನ್ಯವಾಗಿ ಇತ್ತೀಚಿನ ದಿನಮಾನಗಳಲ್ಲಿ ಗಂಡು ಮಕ್ಕಳ ಅಧ್ಯಯನಕ್ಕೆ ಹೆಚ್ಚು ಆದ್ಯತೆ ನೀಡಲಾಗುತ್ತದೆ. ಆದರೆ, ಮಹಿಳೆಯರು ಆರ್ಥಿಕವಾಗಿ ಸಬಲರಾಗುವುದು ಅತ್ಯವಶ್ಯವಾಗಿದೆ. ಆದ್ದರಿಂದ ಪಪೂ ಹಂತದಲ್ಲಿಯೇ ಬಾಲಕಿಯರ ಅಧ್ಯಯನಕ್ಕೆ ಪಾಲಕರು ಹೆಚ್ಚು ಆದ್ಯತೆ ನೀಡಬೇಕು ಎಂದರು.

ಪರೀಕ್ಷಾ ವಿಭಾಗದ ಸಂಚಾಲಕ ಡಾ. ದತ್ತಪ್ರಸನ್ನ ಪಾಟೀಲ ಮಾತನಾಡಿ, ವಿದ್ಯಾರ್ಥಿನಿಯರು ಬರಹದ ಕೌಶಲ್ಯವನ್ನು ಹೆಚ್ಚಿಸಲು ಪ್ರತಿದಿನ ವಿಷಯವಾರು ಸರಣಿ ಪರೀಕ್ಷೆಗಳನ್ನು ನಡೆಸಲಾಗುತ್ತಿದ್ದು ವಿದ್ಯಾರ್ಥಿಗಳ ಅಧ್ಯಯನಕ್ಕೆ ಹೆಚ್ಚು ಸಹಕಾರಿಯಾಗಲಿದೆ. ವಿದ್ಯಾರ್ಥಿನಿಯರ ಫಲಿತಾಂಶ ಹೆಚ್ಚಳಕ್ಕೆ ಸಿಬ್ಬಂದಿ ಕೈಗೊಂಡ ವಿವಿಧ ಕ್ರಮಗಳನ್ನು ವಿವರಿಸಿದರು.

ಸಭೆಯಲ್ಲಿ ಉಪನ್ಯಾಸಕರಾದ ರೇಷ್ಮಾ ಪರ್ವತಗೌಡರ, ಮಹಾಂತೇಶ ಬಾತಾಖಾನಿ, ವೆಂಕಟೇಶ ರಾಠೋಡ ಸೇರಿದಂತೆ ಸಿಬ್ಬಂದಿ ವರ್ಗ, ಪಾಲಕರು ಇದ್ದರು. ಉಪನ್ಯಾಸಕ ಹೇಮಂತ ದಳವಾಯಿ ಸ್ವಾಗತಿಸಿದರು. ಪ್ರಶಾಂತ ಪಾಟೀಲ ನಿರೂಪಿಸಿದರು. ಬಿ.ಬಿ. ಮಿರ್ಜಿ ವಂದಿಸಿದರು.