ಸಾರಾಂಶ
ನೆಲಮಂಗಲ: ರಾಜ್ಯಾದ್ಯಂತ ಜೆಡಿಎಸ್ ಪಕ್ಷವನ್ನು ಬಲಪಡಿಸಲು ಜೆಡಿಎಸ್ ಸದಸ್ಯತ್ವ ಅಭಿಯಾನ ಆರಂಭಿಸಲಾಗಿದ್ದು, ಅತಿ ಹೆಚ್ಚು ಸದಸ್ಯತ್ವ ಮಾಡಿಸುವ ಮೂಲಕ ಕಾರ್ಯಕರ್ತರು ನನಗೆ ಹೆಚ್ಚಿನ ಶಕ್ತಿ ನೀಡಬೇಕೆಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಮನವಿ ಮಾಡಿದರು.
ನಗರದಲ್ಲಿ ಜೆಡಿಎಸ್ ಮುಖಂಡರು, ಕಾರ್ಯಕರ್ತರು ಆಯೋಜಿಸಿದ್ದ ಜನರೊಂದಿಗೆ ಜನತಾದಳ ಹಾಗೂ ಸದಸ್ಯತ್ವ ಅಭಿಯಾನವನ್ನು ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯಾದ್ಯಂತ ಜೆಡಿಎಸ್ ಅತ್ಯಂತ ಪ್ರಬಲ ಹಾಗೂ ಜನ ವಿಶ್ವಾಸಿ ಪಕ್ಷ. ಪಕ್ಷವನ್ನು ಮತ್ತಷ್ಟು ಸಂಘಟಿಸಿ ಬಲಪಡಿಸಲಾಗುತ್ತಿದೆ. ಭಾಷಣ ಮಾಡಿದರೇ ಮಾತ್ರಕ್ಕೆ ಪಕ್ಷ ಸಂಘಟನೆ ಮಾಡಲು ಸಾಧ್ಯವಿಲ್ಲ. ಕಾರ್ಯಕರ್ತರನ್ನು ಸಂಘಟಿಸಿ ತಳಮಟ್ಟದಿಂದ ಪಕ್ಷವನ್ನು ಕಟ್ಟುವ ಕೆಲಸ ಮಾಡಬೇಕು. ಮುಂದಿನ ಪಂಚಾಯತಿ ಚುನಾವಣೆಗಳು, 2028ರ ವಿಧಾನಸಭಾ ಚುನಾವಣೆಯಲ್ಲೂ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಪ್ರತಿಯೊಬ್ಬರು ಶ್ರಮಸಬೇಕು. ಇನ್ನೂ ಚುನಾವಣೆಗೆ ಮೂರು ವರ್ಷವಿದೆ ಎಂದು ಕಾರ್ಯಕರ್ತರು ಕೈ ಕಟ್ಟಿ ಕೊರದೆ ಅತ್ಯಂತ ಎಚ್ಚರಿಕೆಯಿಂದ ಪಕ್ಷ ಸಂಘಟನೆಯಲ್ಲಿ ತೊಡಗಿಕೊಳ್ಳಬೇಕು. ಕ್ಷೇತ್ರಕ್ಕೆ 25 ಸಾವಿರ ಸದಸ್ಯತ್ವದ ಗುರಿ ನೀಡಿದ್ದು ಬೂತ್ ಮಟ್ಟದಲ್ಲಿ ಕಾರ್ಯಕರ್ತರನ್ನು ಒಗ್ಗೂಡಿಸಿ ಪಕ್ಷ ಕಟ್ಟಬೇಕು. ಮುಂದಿನ ದಿನಗಳಲ್ಲಿ ನಿರಂತರ ಕ್ಷೇತ್ರದೊಂದಿಗೆ ಸಂಪರ್ಕ ಇಟ್ಟುಕೊಂಡು ಕಾರ್ಯಕರ್ತರ ಮನೆಗೆ ಭೇಟಿ ನೀಡುತ್ತೇನೆ ಎಂದರು.ಕಳೆದ 2024ರ ಲೋಕಸಭಾ ಚುನಾವಣೆಯಲ್ಲಿ ರಾಜ್ಯದ 28 ಲೋಕಸಭಾ ಕ್ಷೇತ್ರದಲ್ಲಿ ಎನ್‌ಡಿಎ 19 ಮಂದಿ ಸಂಸದರು ಆಯ್ಕೆಯಾಗಿದ್ದಾರೆ. ರಾಜ್ಯದ 224 ವಿಧಾನಸಭಾ ಕ್ಷೇತ್ರದ ಪೈಕಿ 151 ವಿಧಾನ ಸಭಾ ಕ್ಷೇತ್ರದಲ್ಲಿ ಎನ್‌ಡಿಎ ಮುನ್ನಡೆ ಸಾಧಿಸಿದೆ. 2028ರ ಚುನಾವಣೆಯ ಫಲಿತಾಂಶದ ಚಿತ್ರಣ ಕಣ್ಮುಂದಿದೆ. ರಾಜ್ಯ ಹಾಗೂ ವಿಧಾನಸಭಾ ಕ್ಷೇತ್ರದಲ್ಲಿ ನಡೆಯುತ್ತಿರುವ ದ್ವೇಷದ ರಾಜಕೀಯಕ್ಕೆ ಅಂತ್ಯವಾಡುವ ದಿನ ದೂರವಿಲ್ಲ. ಮುಂದಿನ ದಿನಗಳಲ್ಲಿ ನಡೆಯುವ ಎಲ್ಲಾ ಚುನಾವಣೆಯಲ್ಲಿ ಕಾಂಗ್ರೆಸ್ ಸರ್ಕಾರವನ್ನು ಕಿತ್ತೆಸೆಯುವ ಕೆಲಸ ರಾಜ್ಯದ ಜನತೆ ಮಾಡಲಿದ್ದಾರೆ ಎಂದರು.
ಸಾರಿಗೆ ನೌಕರರ ಪರ ಧ್ವನಿ:ಸಾರಿಗೆ ನೌಕರರು ವಿವಿಧ ಬೇಡಿಕೆ ಇಟ್ಟುಕೊಂಡು ಪ್ರತಿಭಟನೆ ಮಾಡುತ್ತಿದ್ದಾರೆ. ರಾಜ್ಯದ ಮುಖ್ಯ ಮಂತ್ರಿಗಳು 4.5 ಲಕ್ಷ ಕೋಟಿ ಬಜೆಟ್ ನಲ್ಲಿ 800 ಕೋಟಿ ಸಾರಿಗೆ ನೌಕರರ ವೇತನ ಪರಿಷ್ಕರಣೆ ಮಾಡಲು ಮೀಸಲಿಡಬೇಕಾಗುತ್ತದೆ ಎನ್ನುತ್ತಿದ್ದಾರೆ. ಸಾರಿಗೆ ನೌಕರರ ಪರಿಸ್ಥಿತಿಯನ್ನು ಗಮನಿಸಬೇಕು. ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗ ಒಂದು ರೀತಿ, ವಿರೋಧಪಕ್ಷದಲ್ಲಿದ್ದ ವೇಳೆ ಮತ್ತೊಂದು ವರ್ತನೆ ಮಾಡುವುದು ಸರಿಯಲ್ಲ. ಸರ್ಕಾರ ಸಾರಿಗೆ ನೌಕರರ ಪರವಾಗಿ ನಿಲ್ಲಬೇಕು. ಮುಂದಿನ ದಿನಗಳಲ್ಲಿ ಸಾರಿಗೆ ನೌಕರಿಗೆ ಜೆಡಿಎಸ್ ಬೆಂಬಲ ಸೂಚಿಸಿ ಅವರ ಪರ ಹೋರಾಟ ಮಾಡಲಾಗುವುದು ಎಂದು ನಿಖಿಲ್‌ಕುಮಾರಸ್ವಾಮಿ ತಿಳಿಸಿದರು.
ಮಾಜಿ ಶಾಸಕ ಎ.ಮಂಜುನಾಥ್ ಮಾತನಾಡಿ, ಮಾಜಿ ಪ್ರಧಾನಿ ದೇವೇಗೌಡ್ರು ಹಾಗೂ ಕೇಂದ್ರ ಸಚಿವ ಕುಮಾರಣ್ಣ ಅವರಂತೆ ಪಕ್ಷ ಸಂಘಟನೆಗೆ ಮುಂದಾಗಿರುವ ನಿಖಿಲ್ ಕುಮಾರಸ್ವಾಮಿ ಕಾರ್ಯ ಶ್ಲಾಘನೀಯ. ರಾಜ್ಯದಲ್ಲಿ ಜೆಡಿಎಸ್ ಪ್ರಾದೇಶಿಕ ಪಕ್ಷ ಅತ್ಯಂತ ಗಟ್ಟಿಯಾಗಿದೆ. ಈ ಬಗ್ಗೆ ಲಘುವಾಗಿ ಮಾತನಾಡುವ ಡಿ.ಕೆ.ಶಿವಕುಮಾರ್ ಮುಂದಿನ ದಿನಗಳಲ್ಲಿ ಪ್ರಾದೇಶಿಕ ಪಕ್ಷವನ್ನು ಕಟ್ಟಿ ಗೆಲ್ಲಿಸಲಿ. ಗ್ಯಾರಂಟಿ ಹೆಸರಿನಲ್ಲಿ ಜನರಿಗೆ ಮಂಕುಬೂದಿ ಎರಚುತ್ತಿದ್ದಾರೆ. ಜತೆಗೆ ಅಧಿಕಾರಿಗಳು ಸರ್ಕಾರದ ಕೈಗೊಂಬೆಯಾಗಿದ್ದಾರೆ. ಎಸ್‌ಐಟಿ ಎಂದರೇ ಅದು ಶಿವಕುಮಾರ್ ಇನ್ವೆಸ್ಟಿಗೇಷನ್ ಟೀಮ್ ಆಗಿದೆ ಎಂದು ಲೇವಡಿ ಮಾಡಿದರು.ಬೈಕ್ ಜಾಥಾ:
ಕಾರ್ಯಕ್ರಮಕ್ಕೂ ಮೊದಲಿಗೆ ನಿಖಿಲ್ ಕುಮಾರಸ್ವಾಮಿ ನಗರದ ವೀವರ್ ಕಾಲೋನಿಯಿಂದ ಎಂವಿಎಂ ಕನ್ವೆನ್ಷನ್ ಹಾಲ್‌ವರೆಗೂ ಪಕ್ಷದ ಸಾವಿರಾರು ಕಾರ್ಯಕರ್ತರ ಜೊತೆಗೂಡಿ ಬೈಕ್ ಜಾಥಾ ನಡೆಸಿದರು. ಪಕ್ಷದ ಕಾರ್ಯಕರ್ತರು ಹೆದ್ದಾರಿಯಲ್ಲಿ ಪಕ್ಷದ ಬಾವುಟ ಹಿಡಿದು ಜೈಕಾರ ಕೂಗಿದರು. ನಿಖಿಲ್‌ಗೆ ಮಾರ್ಗ ಮದ್ಯದ ಬಸ್ ನಿಲ್ದಾಣ ಬಳಿ ಕ್ರೈನ್ ಮೂಲಕ ಬೃಹತ್ ಹೂಮಾಲೆ ಹಾಕಿ ಅದ್ಧೂರಿಯಾಗಿ ಸ್ವಾಗತಿಸಿದರು.ಪದಾಧಿಕಾರಿಗಳ ಆಯ್ಕ: ಕಾರ್ಯಕ್ರಮದಲ್ಲಿ ಜೆಡಿಎಸ್ ತಾಲೂಕು ವಕ್ತಾರರಾಗಿ ವಕೀಲ ಜಿ.ಎನ್.ಕನಕರಾಜು ಹಾಗೂ ಯುವ ಘಟಕದ ನಗರಾಧ್ಯಕ್ಷ ಕೆಂಪಲಿಂಗಹಳ್ಳಿವಿಷ್ಣು ಅವರನ್ನು ಆಯ್ಕೆ ಮಾಡಿ ನೇಮಕಾತಿ ಪತ್ರ ನೀಡಿ ಅಭಿನಂದಿಸಲಾಯಿತು.
ಈ ವೇಳೆ ಮಾಜಿ ಶಾಸಕ ಡಾ.ಕೆ.ಶ್ರೀನಿವಾಸಮೂರ್ತಿ, ವಿಧಾನ ಪರಿಷತ್ ಮಾಜಿ ಇ.ಕೃಷ್ಣಪ್ಪ, ಬಮೂಲ್ ನಿರ್ದೇಶಕ ಭವಾನಿಶಂಕರ್‌ಬೈರೇಗೌಡ, ಜೆಡಿಎಸ್ ಗ್ರಾಮಾಂತರ ಜಿಲ್ಲಾಧ್ಯಕ್ಷ ಮುನ್ನೇಗೌಡ, ತಾಲೂಕು ಅಧ್ಯಕ್ಷ ಟಿ.ತಿಮ್ಮರಾಯಪ್ಪ, ಕಾರ್ಯಾಧ್ಯಕ್ಷ ಬೂದಿಹಾಲ್ ರಾಜು, ಪ್ರಧಾನ ಕಾರ್ಯದರ್ಶಿ ನೆ.ಲ.ಸುರೇಶ್, ಸೋಂಪುರ ಹೋಬಳಿ ಅಧ್ಯಕ್ಷ ಮೋಹನ್‌ಕುಮಾರ್, ಕಸಬಾ ಅಧ್ಯಕ್ಷ ರಮೇಶ್, ಯುವ ಘಟಕ ಅಧ್ಯಕ್ಷ ಅಂಜನಮೂರ್ತಿ, ನಗರಸಭೆ ಸದಸ್ಯ ಶಿವಕುಮಾರ್, ಸುನೀಲ್‌ಮೂಡ್, ಅಂಜಿನಪ್ಪ, ಪುಷ್ಪಲತಾಮಾರೇಗೌಡ, ಪಿಎಲ್‌ಡಿ ಬ್ಯಾಂಕ್ ನಿರ್ದೇಶಕ ಗುರುಪ್ರಕಾಶ್, ಬಿ.ಎಂ.ಶ್ರೀನಿವಾಸ್, ಜಿಪಂ ಮಾಜಿ ಸದಸ್ಯ ವೇಣುಗೋಪಾಲ್, ಚಲುವರಾಜು, ಒಕ್ಕಲಿಗರ ಸಂಘದ ಅದ್ಯಕ್ಷ ಬಿ.ಕೆ.ತಿಮ್ಮರಾಜು, ಮುಖಂಡ ಜಯಣ್ಣ, ರಂಗನಾಥ್, ಪುಟ್ಟಣ್ಣ, ಭವಾನಿಶಂಕರ್ ಮಂಜುನಾಥ್, ಸಂಪತ್‌ಬಾಬು, ನಟರಾಜು, ವಿಷ್ಣು, ಶೇಖರ್, ಸುರೇಂದ್ರನಾಥ್, ನಾಗರಾಜು, ರುದ್ರೇಶ್ ಮಂಜುಳ, ಲೀಲಾಕುಮಾರ್ ಉಪಸ್ಥಿತರಿದ್ದರು.ಬಾಕ್ಸ್..............
ವೃಷಭಾವತಿ ಯೋಜನೆ ಕೈ ಬಿಡಬೇಕು:ಚರಂಡಿ ನೀರನ್ನು ಶುದ್ಧೀಕರಣ ಮಾಡುವ ವ್ಯವಸ್ಥೆ ಬಹುಶಃ ವಿಶ್ವದಲ್ಲೇ ಕಂಡಿಲ್ಲ. ಸುಮಾರು 1800 ಕೋಟಿ ಪೈಪ್ಲೈನ್ ನಲ್ಲಿ ದಾಖಲೆ ಮಟ್ಟದ ಪರ್ಸಂಟೇಜ್ ತಗೊಳೋಕೆ ಮುಂದಾಗಿದ್ದಾರೆ. ಅವರ ಜೇಬು ತುಂಬಿಸಿಕೊಳ್ಳಲು ಬೆಂಗಳೂರಿನ ತ್ಯಾಜ್ಯ ಕೊಳಚೆ ನೀರನ್ನು ಕೆರೆಗೆ ತುಂಬಿಸಲು ಮುಂದಾಗಿದ್ದಾರೆ. ಈ ಯೋಜನೆ ಕೈ ಬಿಡಬೇಕು. ಇಲ್ಲವಾದಲ್ಲಿ ವೃಷಭಾವತಿ ಯೋಜನೆ ವಿರುದ್ಧ ಮುಂದಿನ ದಿನ ಬೃಹತ್ ಹೋರಾಟಕ್ಕೆ ಕೈಜೋಡಿಸಲಾಗುವುದು ನಿಖಿಲ್ ಕುಮಾರಸ್ವಾಮಿ ತಿಳಿಸಿದರು.
ಪೋಟೋ-6ಕೆಎನ್‌ಎಲ್ಎಮ್1-
ನೆಲಮಂಗಲದಲ್ಲಿ ಜೆಡಿಎಸ್ ಸದಸ್ಯತ್ವ ಅಭಿಯಾನಕ್ಕೆ ಆಗಮಿಸಿದ್ದ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರಿಗೆ ಬೃಹತ್ ಹೂವಿನ ಹಾರ ಹಾಕಿ ಸ್ವಾಗತಿಸಿದರು. ಮಾಜಿ ಶಾಸಕರಾದ ಡಾ.ಕೆ.ಶ್ರೀನಿವಾಸಮೂರ್ತಿ, ಎ.ಮಂಜುನಾಥ್ ಇತರರಿದ್ದರು.