ಸಾರಾಂಶ
ಅಧ್ಯಕ್ಷರಾದ ತಾವೇ ಮುಂದೆ ನಿಂತು ಹೋರಾಟ ನಡೆಸಿ ೮ ಎಕರೆ ಜಮೀನಿನಲ್ಲಿ ೨೧೦ ನಿವೇಶನಗಳನ್ನು ವಿಂಗಡಿಸಿದ್ದು ಅದರಲ್ಲಿ ಸಿಎ ನಿವೇಶನಗಳಾಗಿ ೨೦ ನಿವೇಶನ ಹೊರತುಪಡಿಸಿ ನೂರ ತೊಂಬತ್ತು ನಿವೇಶನಗಳನ್ನು ಹಂಚಿಕೆ ಮಾಡಲಾಗುತ್ತಿದೆ, ಅರ್ಧದಷ್ಟು ನಿವೇಶನಗಳನ್ನು ಎಸ್ಸಿ- ಎಸ್ಟಿ ಜನಾಂಗಕ್ಕೆ ನೀಡುತ್ತಿದ್ದು ಉಳಿದ ಅರ್ಧದಷ್ಟು ಜಮೀನು ನಿವೇಶನಗಳನ್ನು ಸಾರ್ವಜನಿಕವಾಗಿ ವಿತರಿಸಲಾಗುತ್ತಿದೆ ಎಂದು ತಿಳಿಸಿ, ಎಂಟು ಎಕರೆ ಪಕ್ಕದಲ್ಲಿಯೇ ಇನ್ನೂ ನಾಲ್ಕು ಎಕರೆ ಜಮೀನು ಇದ್ದು ಮುಂದಿನ ದಿನಗಳಲ್ಲಿ ಅದನ್ನು ಸಹ ನಿವೇಶನಗಳಾಗಿ ಪರಿವರ್ತನೆ ಮಾಡಿ ನೀಡಲಾಗುವುದು,ಆದಾಗ್ಯು ಈ ಹಿಂದೆ ೧೯೯೧- ೯೨ ರಲ್ಲಿ ೩೪ ಮಂದಿ ಮಾದಿಗ ಜನಾಂಗಕ್ಕೆ ಹಕ್ಕುಪತ್ರ ನೀಡಲಾಗಿದೆ.
ಕನ್ನಡಪ್ರಭ ವಾರ್ತೆ ವಿಜಯಪುರ
ಆಶ್ರಯ ಯೋಜನೆಯಡಿ ನಿವೇಶನಗಳ ಹಂಚಿಕೆಯಲ್ಲಿ ಮಾದಿಗ ಸಮುದಾಯಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡಬೇಕೆಂದು ಒತ್ತಾಯಿಸಿ ವಿಜಯಪುರ ಪಟ್ಟಣದ ಸಮೀಪದ ಕೋರಮಂಗಲ ಗ್ರಾಮಪಂಚಾಯಿತಿ ಎದುರು ದಲಿತ ಮುಖಂಡರು ಪ್ರತಿಭಟನೆ ನಡೆಸಿದರು. ಆಶ್ರಯ ಯೋಜನೆ ಅಡಿಯಲ್ಲಿ ಸರ್ವೇ ನಂಬರ್ ೨೦೦/೧೮ರಲ್ಲಿ ೮ ಎಕರೆ ಪ್ರದೇಶದಲ್ಲಿ ೨೧೮ ನಿವೇಶನಗಳನ್ನು ಮಾಡಿದ್ದು ಅದರಲ್ಲಿ ಪರಿಶಿಷ್ಟ ಪಂಗಡದ ಜನಾಂಗಕ್ಕೆ ಕೇವಲ ೧೦ ನಿವೇಶನಗಳನ್ನು ಮಾತ್ರ ನೀಡಿರುವರೆಂದು ಗ್ರಾಮದಲ್ಲಿ ನೂರಕ್ಕೂ ಹೆಚ್ಚು ಪರಿಶಿಷ್ಟ ಪಂಗಡದ ಮಾದಿಗ ಜನಾಂಗ ಇದ್ದು ಪ್ರತಿ ಕುಟುಂಬಕ್ಕೆ ಒಂದರಂತೆ ನಿವೇಶನ ಹಂಚಬೇಕೆಂದು ಗ್ರಾಮ ಪಂಚಾಯಿತಿ ಕಚೇರಿ ಮುಂಭಾಗದಲ್ಲಿ ಮಾದಿಗ ಜನಾಂಗದ ಸದಸ್ಯರು ಪ್ರತಿಭಟನೆ ನಡೆಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಪ್ರತಿಭಟನಾಕಾರರು, ಕೋರಮಂಗಲ ಗ್ರಾಮದಲ್ಲಿ ೧೦೦ ಕ್ಕೂ ಹೆಚ್ಚು ಕುಟುಂಬ ದಲಿತ ಸಮುದಾಯದವರಿದ್ದು, ಒಂದೇ ಮನೆಯಲ್ಲಿ ಐದಾರು ಕುಟುಂಬಗಳು ವಾಸವಾಗಿವೆ. ಅನಕ್ಷರಸ್ಥರಾದ ನಾವು ಕೂಲಿ ಮಾಡಿ ಜೀವನ ನಡೆಸುತ್ತಿದ್ದು, ಮಾದಿಗ ಸಮುದಾಯಕ್ಕೆ ಹೆಚ್ಚಿನ ನಿವೇಶನ ಹಂಚಿಕೆ ಮಾಡಲು ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಈಗಾಗಲೇ ಆಯ್ಕೆ ಮಾಡಿರುವ ಫಲಾನುಭವಿಗಳ ಪಟ್ಟಿಯಲ್ಲಿ ಮಾದಿಗ ಸಮುದಾಯವನ್ನು ಕಡೆಗಣಿಸಲಾಗಿದೆ. ಗ್ರಾಮದ ಹೆಚ್ಚಿನ ಸಂಖ್ಯೆಯಲ್ಲಿರುವ ಮಾದಿಗ ಸಮುದಾಯದಲ್ಲಿ ಅನೇಕ ಕುಟುಂಬಗಳು ನಿವೇಶನಗಳಿಲ್ಲದೇ ಅವಿಭಕ್ತ ಕುಟುಂಬದಲ್ಲಿ ವಾಸವಾಗಿದ್ದಾರೆ. ಮತ್ತೊಮ್ಮೆ ಆಯ್ಕೆ ಪಟ್ಟಿಯನ್ನು ಪರಿಶೀಲಿಸಿ ಹೆಚ್ಚಿನ ನಿವೇಶನಗಳನ್ನು ಮಾದಿಗ ಸಮುದಾಯಕ್ಕೆ ಮೀಸಲಿಡಬೇಕೆಂದು ಅವರು ಮನವಿ ಮಾಡಿದರು.ವಕೀಲರು, ಬಹುಜನ ಸಮಾಜ ಪಾರ್ಟಿಯ ತಾಲೂಕು ಕಾರ್ಯದರ್ಶಿ ನರಸಿಂಹಮೂರ್ತಿ ಮಾತನಾಡಿ, ಆಶ್ರಯ ಯೋಜನೆಯಡಿ ೨೧೮ ನಿವೇಶನಗಳು ಮಂಜೂರಾಗಿದೆ. ಗ್ರಾಮದಲ್ಲಿ ಮಾದಿಗ ಸಮುದಾಯ ಹೆಚ್ಚಿನ ಸಂಖ್ಯೆಯಲ್ಲಿದ್ದು, ಜನಸಂಖ್ಯೆಯ ಆಧಾರದ ಮೇಲೆ ಸರ್ಕಾರ ನಿವೇಶನ ಹಂಚಿಕೆ ಮಾಡಬೇಕೆಂದು ಒತ್ತಾಯಿಸಿದರು.
ಕೋರಮಂಗಲ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಧನಂಜಯ್ ಮಾತನಾಡಿ, ಅಧ್ಯಕ್ಷರಾದ ತಾವೇ ಮುಂದೆ ನಿಂತು ಹೋರಾಟ ನಡೆಸಿ ೮ ಎಕರೆ ಜಮೀನಿನಲ್ಲಿ ೨೧೦ ನಿವೇಶನಗಳನ್ನು ವಿಂಗಡಿಸಿದ್ದು ಅದರಲ್ಲಿ ಸಿಎ ನಿವೇಶನಗಳಾಗಿ ೨೦ ನಿವೇಶನ ಹೊರತುಪಡಿಸಿ ನೂರ ತೊಂಬತ್ತು ನಿವೇಶನಗಳನ್ನು ಹಂಚಿಕೆ ಮಾಡಲಾಗುತ್ತಿದೆ, ಅರ್ಧದಷ್ಟು ನಿವೇಶನಗಳನ್ನು ಎಸ್ಸಿ- ಎಸ್ಟಿ ಜನಾಂಗಕ್ಕೆ ನೀಡುತ್ತಿದ್ದು ಉಳಿದ ಅರ್ಧದಷ್ಟು ಜಮೀನು ನಿವೇಶನಗಳನ್ನು ಸಾರ್ವಜನಿಕವಾಗಿ ವಿತರಿಸಲಾಗುತ್ತಿದೆ ಎಂದು ತಿಳಿಸಿ, ಎಂಟು ಎಕರೆ ಪಕ್ಕದಲ್ಲಿಯೇ ಇನ್ನೂ ನಾಲ್ಕು ಎಕರೆ ಜಮೀನು ಇದ್ದು ಮುಂದಿನ ದಿನಗಳಲ್ಲಿ ಅದನ್ನು ಸಹ ನಿವೇಶನಗಳಾಗಿ ಪರಿವರ್ತನೆ ಮಾಡಿ ನೀಡಲಾಗುವುದು,ಆದಾಗ್ಯು ಈ ಹಿಂದೆ ೧೯೯೧- ೯೨ ರಲ್ಲಿ ೩೪ ಮಂದಿ ಮಾದಿಗ ಜನಾಂಗಕ್ಕೆ ಹಕ್ಕುಪತ್ರ ನೀಡಲಾಗಿದೆ ಎಂದು ತಿಳಿಸಿದರು.. ಪ್ರತಿಭಟನೆಯಲ್ಲಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ನಾಗರಾಜ್, ಎಂ.ವೆಂಕಟೇಶ್, ನರಸಿಂಹಮೂರ್ತಿ, ವಕೀಲ ಕೃಷ್ಣಮೂರ್ತಿ, ಕೆ.ಎಂ.ವಿಜಯ್, ಅನಂತಕುಮಾರ್, ರಮಾದೇವಿ ಮತ್ತಿತರರು ಇದ್ದರು.