ಉಪನೋಂದಣಾಧಿಕಾರಿಗೆ ನೋಟಿಸ್ ನೀಡಿ, ಬಾಡಿಗೆ ಸಂಗ್ರಹಿಸಿ

| Published : Jul 26 2024, 01:30 AM IST

ಸಾರಾಂಶ

ಸಾರ್ವಜನಿಕರು ಸಮಸ್ಯೆಗಳ ಪರಿಹಾರಕ್ಕೆ ಅಲೆಯದಂತೆ ಕರ್ತವ್ಯ ನಿರ್ವಹಿಸಿ

ಗಜೇಂದ್ರಗಡ: ಪಟ್ಟಣದ ಸರ್ಕಾರಿ ಕಟ್ಟಡಗಳಿಂದ ತೆರಿಗೆ ಸಂಗ್ರಹ ಮಾಡದಿದ್ದರೆ ಸರ್ಕಾರಕ್ಕೆ ನಷ್ಟವಾಗಲಿದೆ. ಹೀಗಾಗಿ ಪುರಸಭೆ ಉಪನೋಂದಣಾಧಿಕಾರಿಗೆ ನೋಟಿಸ್ ನೀಡಿ, ಬಾಡಿಗೆ ಸಂಗ್ರಹಿಸಿ ಎಂದು ಜಿಲ್ಲಾ ಲೋಕಾಯುಕ್ತ ಡಿವೈಎಸ್‌ಪಿ ವಿಜಯ ಬಿರಾದಾರ ಹೇಳಿದರು.

ಪಟ್ಟಣದ ಪುರಸಭೆ ಕಾರ್ಯಾಲಯಕ್ಕೆ ಗುರುವಾರ ದಿಢೀರ್ ಭೇಟಿ ನೀಡಿ, ವಿಲೇವಾರಿಯಾಗದ ಕಡತಗಳ ಪರಿಶೀಲನೆ, ಜನನ, ಮರಣ ಸೇರಿ ಪುರಸಭೆ ಆವರಣದಲ್ಲಿ ನಿಂತಿದ್ದ ವಾಹನಗಳ ಪರಿಶೀಲನೆ, ಮಳಿಗೆಗಳ ಬಗ್ಗೆ ಮಾಹಿತಿ ಪಡೆದ ಬಳಿಕ ಮಾತನಾಡಿದರು. ಪಟ್ಟಣದಲ್ಲಿ ನಿರ್ಮಾಣವಾಗುವ ಬಡಾವಣೆಯಲ್ಲಿ ನಿವೇಶನಗಳ ಮಾರಾಟ ಮಾಡಲು ಕಡ್ಡಾಯವಾಗಿ ವಿದ್ಯುತ್ ಕಂಬ, ಚರಂಡಿ ನೀರಿನ, ನೀರಿನ ಸಂಪರ್ಕ ಸೇರಿ ಅಗತ್ಯ ಮೂಲಸೌಕರ್ಯಗಳು ಹೊಂದಿರಬೇಕು. ಹೀಗಾಗಿ ಪಟ್ಟಣದಲ್ಲಿನ ಒಟ್ಟು ಬಡಾವಣೆಗಳ ಮಾಹಿತಿ ಹಾಗೂ ಅಭಿವೃದ್ಧಿ ಹೊಂದದ ಸಮಗ್ರ ಮಾಹಿತಿ ನೀಡುವ ಜತೆಗೆ ಯಾವ ವರ್ಷದಲ್ಲಿ ಎಷ್ಟು ನಿವೇಶನಗಳ ಮಾರಾಟವಾಗಿದೆ, ಅಧಿಕಾರಿಗಳು ಯಾರಿದ್ದರು ಎಂಬ ಕುರಿತು ಲಿಖಿತ ಮಾಹಿತಿಯನ್ನು ಕಚೇರಿಗೆ ರವಾನಿಸಬೇಕು. ಅಧಿಕಾರಿಗಳು ನೀಡುವ ಮಾಹಿತಿ ಬಗ್ಗೆ ಸಾರ್ವಜನಿಕರಿಂದ ಲೋಕಾಯುಕ್ತ ಕಚೇರಿಯಿಂದ ಪರಿಶೀಲನೆ ನಡೆಸಿದಾಗ ಅಧಿಕಾರಿಗಳು ತಪ್ಪು ಮಾಹಿತಿ ನೀಡಿದ್ದು ತಿಳಿದು ಬಂದರೆ ಕಾನೂನಿನ ಕ್ರಮ ಎದುರಿಸಲು ಪುರಸಭೆ ಅಧಿಕಾರಿಗಳು ಸಿದ್ಧವಾಗಿರಬೇಕಾಗುತ್ತದೆ. ಹೀಗಾಗಿ ವಸ್ತುಸ್ಥಿತಿಯ ಮಾಹಿತಿಯನ್ನು ನೀಡಬೇಕು ಎಂದು ಖಡಕ್‌ಗಾಗಿ ಸೂಚಿಸಿದ ಲೋಕಾಯುಕ್ತ ಡಿವೈಎಸ್‌ಪಿ ವಿಜಯ ಬಿರಾದಾರ ಅವರು, ಪಟ್ಟಣದ ಪುರಸಭೆ ಆವರಣದಲ್ಲಿ ನಿಂತಿದ್ದ ವಾಹನಗಳ ಪರಿಶೀಲನೆ ವೇಳೆ ಪುರಸಭೆಯ ವಾಹನಗಳು ಸುಸ್ಥಿತಿಯಲ್ಲಿರುವ ಜತೆಗೆ ಚಾಲಕರು ಕಡ್ಡಾಯವಾಗಿ ವಾಹನ ಚಾಲನಾ ಪರವಾನಗಿ ಹೊಂದಿರಬೇಕು. ಕೆಟ್ಟು ನಿಂತಿದ್ದ ವಾಹನಗಳನ್ನು ಗುಜರಿಗೆ ಹಾಕುವ ಮುನ್ನ ಆರ್‌ಟಿಒ ಹಾಗೂ ಸಂಬಂಧಿಸಿದ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು. ಸಕಾಲದಲ್ಲಿ ಅವಧಿ ಮೀರಿದರೂ ಕಡತಗಳ ವಿಲೇವಾರಿ ಆಗದೇ ಇರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿ, ತ್ವರಿತಗತಿಯಲ್ಲಿ ಅರ್ಜಿಗಳನ್ನು ವಿಲೇವಾರಿ ಮಾಡಬೇಕು. ಸಾರ್ವಜನಿಕರು ಸಮಸ್ಯೆಗಳ ಪರಿಹಾರಕ್ಕೆ ಅಲೆಯದಂತೆ ಕರ್ತವ್ಯ ನಿರ್ವಹಿಸಿ ಎಂದರು.

ಬಳಿಕ ಪಟ್ಟಣದ ಘನತ್ಯಾಜ್ಯ ಘಟಕಕ್ಕೆ ಭೇಟಿ ನೀಡಿದ ಲೋಕಾಯುಕ್ತ ಡಿವೈಎಸ್ಪಿ ವಿಜಯ ಬಿರಾದಾರ, ಘಟಕಕ್ಕೆ ಬರುವ ವಾಹನಗಳ ಮಾಹಿತಿ ನೋಂದಣಿ ಪುಸಕ್ತದ ಬಗ್ಗೆ ವಿಚಾರಿಸಿದರು. ಘಟಕದಲ್ಲಿ ತ್ಯಾಜ್ಯ ವಿಲೇವಾರಿ ಜತೆಗೆ ಪುರಸಭೆಗೆ ಆದಾಯ ಬರುವ ನಿಟ್ಟಿನಲ್ಲಿ ಕೆಲಸವನ್ನು ನಿರ್ವಹಿಸಬೇಕು. ಮುಕ್ತಿ ವಾಹನದ ಬಾಡಿಗೆ ಎಷ್ಟು, ಮೇ ಹಾಗೂ ಜೂನ್ ತಿಂಗಳಲ್ಲಿ ಎಷ್ಟು ಬಾರಿ ಹೋಗಿದೆ ಎಂಬುದರ ಮಾಹಿತಿ ಕೇಳಿದಾಗ ಪುರಸಭೆ ಅಧಿಕಾರಿಗಳು ನಿರುತ್ತರವಾದರು. ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಲೋಕಾಯುಕ್ತ ಡಿವೈಎಸ್ಪಿ ಅವರು, ಮುಕ್ತಿ ವಾಹನದ ಬಗ್ಗೆ ಜನರಿಗೆ ಮಾಹಿತಿ ನೀಡಿ, ಪ್ರಯೋಜನವಾಗಬೇಕು ಎಂದರು.

ಇದಕ್ಕೂ ಮುನ್ನ ಪಟ್ಟಣದ ತಾಪಂ ಕಾರ್ಯಾಲಯಕ್ಕೆ ಭೇಟಿ ನೀಡಿದ ಅವರು, ವಿವಿಧ ಕಡತಗಳ ಪರಿಶೀಲನೆ ಜತೆಗೆ ಅಧಿಕಾರಿಗಳಿಂದ ಮಾಹಿತಿ ಪಡೆದರು. ಸಾರ್ವಜನಿಕರಿಗೆ ತಾಪಂ ಅಧಿಕಾರಿಗಳು ಸ್ಪಂದಿಸಿ, ಪರಿಹಾರ ಒದಗಿಸಬೇಕು ಎಂದರು.

ಪಟ್ಟಣದ ಪುರಸಭೆಯಲ್ಲಿ ಇತ್ತೀಚೆಗೆ ಲೋಕಾಯುಕ್ತರು ಸಾರ್ವಜನಿಕರ ಅಹವಾಲು ಸಭೆಯನ್ನು ನಡೆಸಿ, ಪುರಸಭೆ ಸೇರಿ ತಾಲೂಕು ಮಟ್ಟದ ಅಧಿಕಾರಿಗಳಿಗೆ ಸಮಸ್ಯೆಗಳ ಪರಿಹಾರಕ್ಕೆ ಕಾಲವಕಾಶ ನೀಡಿದ್ದರು. ಹೀಗಾಗಿ ಮತ್ತೆ ಲೋಕಾಯುಕ್ತರು ಗುರುವಾರ ತಾಪಂ ಹಾಗೂ ಪುರಸಭೆಗೆ ಭೇಟಿ ನೀಡಿ ಕಡತಗಳ ಪರಿಶೀಲನೆ ನಡೆಸಿದರು.