ಸಾರಾಂಶ
ಶಿರಹಟ್ಟಿ: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಪಂಚ ಗ್ಯಾರಂಟಿಗಳು ಪ್ರಮುಖವಾಗಿದ್ದು, ಈ ಯೋಜನೆಗಳಿಂದ ಲಾಭ ಪಡೆದುಕೊಂಡಿರುವ ಅರ್ಹ ಫಲಾನುಭವಿಗಳ ಬಗ್ಗೆ ಸಮಗ್ರ ಮಾಹಿತಿ ನೀಡುವಂತೆ ಗದಗ ಜಿಪಂ ಮುಖ್ಯ ಯೋಜನಾಧಿಕಾರಿ ಎನ್.ಕೆ.ನಿರ್ಮಲಾ ಅಧಿಕಾರಿಗಳನ್ನು ಕೇಳಿದರೆ ಯಾವುದೇ ಮಾಹಿತಿ ನೀಡದೇ ಇರುವುದರಿಂದ ಅಧಿಕಾರಿಗಳಿಗೆ ನೊಟೀಸ್ ನೀಡುವಂತೆ ತಾಪಂ ಇಒ ಎಸ್.ಎಸ್. ಕಲ್ಮನಿಗೆ ಸೂಚನೆ ನೀಡಿದರು.
ಬುಧವಾರ ತಾಪಂ ಸಾಮರ್ಥ್ಯ ಸೌಧದಲ್ಲಿ ಜರುಗಿದ ವಿಶೇಷ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಇಲಾಖಾವಾರು ಚರ್ಚೆ ನಡೆಸಿ ಮಾತನಾಡಿದರು.ಆಹಾರ ಮತ್ತು ನಾಗರಿಕ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸಾರಿಗೆ ಇಲಾಖೆ ಅಧಿಕಾರಿಗಳು ಸಭೆಗೆ ಗೈರ ಉಳಿದಿದ್ದು, ಸಹಾಯಕರು ಹಾಜರಾದರೂ ಯಾವುದೇ ಮಾಹಿತಿ ನೀಡಲಿಲ್ಲ. ಇನ್ನು ಹೆಸ್ಕಾ ಇಲಾಖೆ ಅಧಿಕಾರಿಗಳು ಇಲಾಖೆಗೆ ಪೋನ್ ಮಾಡಿ ಮಾಹಿತಿ ಕೇಳಿ ಸಭೆಗೆ ತಿಳಿಸಿದರು.
ಪಂಚ ಗ್ಯಾರಂಟಿ ಯೋಜನೆಗಳು ರಾಜ್ಯ ಸರ್ಕಾರದ ಮಹತ್ವದ ಯೋಜನೆಗಳಾಗಿವೆ. ಈ ಯೋಜನೆಗಳು ಜಾರಿಗೊಂಡು ವರ್ಷ ಕಳೆದರೂ ಯಾವ ಇಲಾಖೆಯ ಎಷ್ಟು ಫಲಾನುಭವಿಗಳು ಲಾಭ ಪಡೆದುಕೊಂಡಿದ್ದಾರೆ. ಕಾರಣಾಂತರಗಳಿಂದ ಉಳಿದವರು ಎಷ್ಟು ಜನ.ಇವರಿಗೆ ಅಧಿಕಾರಿಗಳು ಏಕೆ ಯೋಜನೆಯ ಲಾಭ ದೊರೆಯುವಂತೆ ಮಾಡಿಲ್ಲ ಎಂಬ ಪ್ರಶ್ನೆಗೆ ಯಾವ ಅಧಿಕಾರಿಗಳು ಉತ್ತರ ನೀಡದೇ ಇರುವುದು ಬೇಸರದ ಸಂಗತಿ ಎಂದು ಅಧಿಕಾರಿಗಳ ನಡೆಗೆ ಅಸಮಾಧಾನ ಹೊರ ಹಾಕಿದರು.ಕೆಲವು ಶಾಲೆಗಳಲ್ಲಿ ಮೆನು ಪ್ರಕಾರ ಮಧ್ಯಾಹ್ನದ ಬಿಸಿಯೂಟ ನೀಡುತ್ತಿಲ್ಲ ಎನ್ನುವ ಮಾಹಿತಿ ಇದೆ. ಅಂತಹ ಶಾಲೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ಉಳಿದಂತೆ ಕಡ್ಡಾಯವಾಗಿ ಶಾಲೆಯ ಶಿಕ್ಷಕರು ಪ್ರತಿ ನಿತ್ಯ ಮಕ್ಕಳೊಂದಿಗೆ ಊಟ ಮಾಡಬೇಕು. ಗುಣಮಟ್ಟದ ಅಡುಗೆ ತಯಾರಿಸಿ ಮಕ್ಕಳಿಗೆ ನೀಡುವ ಕುರಿತು ಗಮನ ಹರಿಸುವಂತೆ ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ನಾಣಕಿ ನಾಯಕ ಅವರಿಗೆ ಸೂಚನೆ ನೀಡಿದರು.
ತಾಲೂಕಿನಲ್ಲಿ ಅನೇಕ ಕಡೆಗಳಲ್ಲಿ ಬಾಡಿಗೆ ಕಟ್ಟಡದಲ್ಲಿ ಅಂಗನವಾಡಿ ಕೇಂದ್ರಗಳು ನಡೆಯುತ್ತಿವೆ. ಕಳೆದ ನಾಲ್ಕು ವರ್ಷಗಳಿಂದ ಅಂಗನವಾಡಿ ಕಟ್ಟಡ ನಿರ್ಮಾಣಕ್ಕೆ ಸರ್ಕಾರ ಅನುದಾನ ನೀಡಿದ್ದರೂ ಅದನ್ನು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳದೇ ಅಧಿಕಾರಿ ಬೇಜವಾಬ್ದಾರಿ ತೋರುತ್ತಿದ್ದು, ಹೊಳೆ-ಇಟಗಿ, ಜಲ್ಲಿಗೇರಿ ಗ್ರಾಮಗಳಲ್ಲಿ ತುರ್ತು ಅಂಗನವಾಡಿ ಕಟ್ಟಡ ಕಾಮಗಾರಿ ಪ್ರಾರಂಭಕ್ಕೆ ಕ್ರಮ ತೆಗೆದುಕೊಳ್ಳುವಂತೆ ತಾಕೀತು ಮಾಡಿದರು.ಕಳೆದ ೩ ವರ್ಷಗಳಲ್ಲಿ ತಾಲೂಕಿನಲ್ಲಿರುವ ರಸ್ತೆಗಳ ಅಭಿವೃದ್ಧಿ ಮತ್ತು ದುರಸ್ತಿ ಕಾರ್ಯಕ್ಕೆ ಸರ್ಕಾರದಿಂದ ಬಂದ ಅನುದಾನವೆಷ್ಟು, ಕಾಮಗಾರಿ ಕೈಗೊಂಡಿರುವ ಸ್ಥಳ, ಈ ಬಾರಿ ವಿಪರೀತ ಮಳೆ ಸುರಿಯುತ್ತಿದ್ದು, ತಾಲೂಕಿನಲ್ಲಿ ಹಾಳಾದ ರಸ್ತೆಗಳ ಬಗ್ಗೆ ಕ್ರಿಯಾ ಯೋಜನೆ ಸಿದ್ದಪಡಿಸಲಾಗಿದೆಯೇ, ರಸ್ತೆ ಅಕ್ಕಪಕ್ಕದಲ್ಲಿಯ ಜಂಗಲ್ ಕಟಿಂಗ್ ಮಾಡಿದ ವಿವರ ಏಕೆ ನೀಡಿಲ್ಲ ಎಂದು ಲೋಕೋಪಯೋಗಿ ಇಲಾಖೆಯ ಅಧಿಕಾರಿಯನ್ನು ಕೇಳಿದರೆ ಯಾವುದೇ ಮಾಹಿತಿ ನೀಡದೇ ಸಭೆಗೂ ಅಧಿಕಾರಿ ಬರದೇ ಸಹಾಯಕರನ್ನು ಕಳಿಸಿದ ಬಗ್ಗೆ ಕೆರಳಿದ ಅಧಿಕಾರಿ ಸಭೆಯಿಂದ ಸಹಾಯಕರನ್ನು ಹೊರಹಾಕಿದ ಪ್ರಸಂಗ ನಡೆಯಿತು.
ಆರೋಗ್ಯ ಇಲಾಖೆ, ಭೂಮಾಪನ ಇಲಾಖೆ,ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಲೋಕೋಪಯೋಗಿ ಇಲಾಖೆ, ಉಪನೋಂದಣಿ ಇಲಾಖೆ ಸಭೆಗೆ ಸಹಾಯಕರನ್ನು ಕಳಿಸಿದ್ದು, ಸಭೆಗೆ ಅಪೂರ್ಣ ಮಾಹಿತಿ ನೀಡಿದ್ದಕ್ಕೆ ಕಾರಣ ಕೇಳಿ ನೋಟೀಸ್ ನೀಡುವಂತೆ ಸಭೆಯಲ್ಲಿ ನಿರ್ಣಯಿಸಲಾಯಿತು.ಮುಂದಿನ ಸಭೆಗೆ ಕಡ್ಡಾಯವಾಗಿ ಸಂಪೂರ್ಣ ಮಾಹಿತಿಯೊಂದಿಗೆ ಅಧಿಕಾರಿಗಳೇ ಹಾಜರಾಗಬೇಕು.ಕೇಂದ್ರ ಮತ್ತು ರಾಜ್ಯ ಸರ್ಕಾರ ನೀಡಿದ ಅನುದಾನದ ವಿವರವಾದ ಮಾಹಿತಿಯೊಂದಿಗೆ ಬರಬೇಕು. ಮುಖ್ಯವಾಗಿ ಪಂಚ ಗ್ಯಾರಂಟಿ ಯೋಜನೆಗಳ ಎಲ್ಲ ಮಾಹಿತಿ ತಪ್ಪದೇ ತರಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕೃಷಿ ಇಲಾಖೆಯ ರೇವಣೆಪ್ಪ ಮನಗೂಳಿ, ಪಶು ಆಸ್ಪತ್ರೆಯ ನಿಂಗಪ್ಪ ಓಲೇಕಾರ, ಸಮಾಜ ಕಲ್ಯಾಣ ಇಲಾಖೆಯ ಮುತ್ತಣ್ಣ ಎಸ್. ಸಂಕನೂರ, ಬಿಸಿಎಂ ಇಲಾಖೆಯ ಮರಿಗೌಡ ಸುರಕೋಡ, ನಿರ್ಮಿತಿ ಕೇಂದ್ರದ ವಿಜಯ ಎಳಮಲಿ, ಮಾರೂತಿ ರಾಠೋಡ, ಅರಣ್ಯ ಇಲಾಖೆಯ ಕೌಸಿಕ ದಳವಾಯಿ, ರಾಮಪ್ಪ ಪೂಜಾರ ಇಲಾಖೆಯ ಪ್ರಗತಿ ವರದಿಯ ಮಾಹಿತಿ ನೀಡಿದರು.